ತಾಲೂಕಿನಲ್ಲಿ 23 ಢೆಂಘಿ ಪ್ರಕರಣ ದಾಖಲು
ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜು.10: ತಾಲ್ಲೂಕಿನಲ್ಲಿ ಮೋಡ ಮುಸುಕಿದ ವಾತಾವರಣದಿಂದಾಗಿ ಶೀತಗಾಳಿ, ತುಂತುರು ಮಳೆಯಿಂದಾಗಿ ಸಾರ್ವಜನಿಕರಲ್ಲಿ ಅನಾರೋಗ್ಯ ಕಾಡುತ್ತಿದೆ. ಈಚಿಗೆ ಢೆಂಘಿ ಪ್ರಕರಣಗಳು ಕಂಡು ಬರುತ್ತಿದ್ದು, ಹವಮಾನ ವೈಪರಿತ್ಯದಿಂದಾಗಿ ವಯಸ್ಸಾದವರಲ್ಲಿ ಶೀತಜ್ವರ ಕಂಡು ಬರುತ್ತಿದ್ದು, ತಾಲೂಕಿನಲ್ಲಿ ಜನವರಿಯಿಂದ ಇಲ್ಲಿಯ ವರೆಗೆ 23 ಢೆಂಘಿ ಪ್ರಕರಣಗಳು ದಾಖಲಾಗಿದ್ದು, ಎಲ್ಲರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ, ಆದರೆ ಇಲ್ಲಿಯವರೆಗೆ ಢೆಂಘ್ಯೂ ಪ್ರಕರಣದಲ್ಲಿ ಯಾವುದೇ ಸಾವು ಸಂಭವಿಸಿಲ್ಲ. 
ತಾಲೂಕಿನಲ್ಲಿ ಮಳೆಗಾಲದಲ್ಲಿ ಉಂಟಾಗಬಹುದಾದ ಢೆಂಘಿ ಪ್ರಕರಣಗಳನ್ನು ತಡೆಯಲು ತಾಲೂಕು ಆರೋಗ್ಯ ಇಲಾಖೆ ಸಕಲ ಸಿದ್ಧತೆ ಮಾಡಿದ್ದು, ತಾಲೂಕಿನಲ್ಲಿ ಇಲ್ಲಿಯವರೆಗೆ 23 ಪ್ರಕರಣಗಳು ವರದಿಯಾಗಿದ್ದು, ಎಲ್ಲರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದು, ಸದ್ಯ ಯಾವುದೇ ಢೆಂಘಿ ಪ್ರಕರಣ ವರದಿಯಾಗಿಲ್ಲವೆಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ತಿಳಿಸಿದರು.
ನಗರದ 100 ಹಾಸಿಗೆಗಳ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ, ತೆಕ್ಕಲಕೋಟೆಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮತ್ತು ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶೀತಜ್ವರ, ಜ್ವರ, ಒಂದು ವಾರಕ್ಕಿಂತ ಹೆಚ್ಚು ಕಾಣಿಸಿಕೊಂಡ ವ್ಯಕ್ತಿಗಳ ರಕ್ತ ಪರೀಕ್ಷೆಯನ್ನು ಮಾಡುವ ವ್ಯವಸ್ಥೆ ಇದ್ದು, ರಕ್ರ ಪರೀಕ್ಷೆಯಲ್ಲಿ ಢೆಂಘಿ ಎಂದು ಕಂಡುಬಂದರೆ ಅಗತ್ಯ ಚಿಕಿತ್ಸೆ ನೀಡಲು ನಗರದ ನೂರು ಹಾಸಿಗೆಗಳ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ವ್ಯವಸ್ಥೆ ಇರುತ್ತದೆ. ಆದರೆ ರಕ್ತ ಪರೀಕ್ಷೆಯ ಪ್ಲೇಟ್‌ಲೇಟ್‌ಗಳನ್ನು ಪರೀಕ್ಷಿಸಲು ವ್ಯವಸ್ಥೆ ಇಲ್ಲದೇ ಇರುವುದರಿಂದ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ರಕ್ತದ ಮಾದರಿಗಳನ್ನು ಕಳುಹಿಸಿ ಕೊಡಲಾಗುತ್ತದೆ. 
ಢೆಂಘಿಜ್ವರ ಹರಡದಂತೆ ತಾಲೂಕಿನಾದ್ಯಂತ ಆಶಾ ಕಾರ್ಯಕರ್ತರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಮನೆ ಮನೆಗೆ ತೆರಳಿ ನೀರು ಸಂಗ್ರಹದ ತೊಟ್ಟಿಗಳನ್ನು ಪರೀಕ್ಷೆ ಮಾಡುತ್ತಿದ್ದು, ಹುಳುಬಿದ್ದ ನೀರನ್ನು ಖಾಲಿ ಮಾಡಿ, ಶುದ್ಧ ನೀರನ್ನು ಇಟ್ಟುಕೊಳ್ಳುವಂತೆ ಜಾಗೃತಿಯನ್ನು ಮೂಡಿಸುತ್ತಿದ್ದಾರೆ. ಇದಕ್ಕಾಗಿ ಪ್ರತಿ ಶುಕ್ರವಾರ ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆ ಸಿಬ್ಬಂದಿ ವಿಶೇಷ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ.
ತಾಲೂಕಿನ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಸೊಳ್ಳೆಗಳನ್ನು ನಿಯಂತ್ರಿಸಲು ಫಾಗಿಂಗ್ ಮಾಡಲಾಗುತ್ತಿದೆ ಆದರೆ ಸಿರುಗುಪ್ಪ ನಗರಸಭೆ ಮತ್ತು ತೆಕ್ಕಲಕೋಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ರೀತಿಯಲ್ಲಿ ಫಾಗಿಂಗ್ ಕಾರ್ಯ ಮಾಡುತ್ತಿಲ್ಲ.
ತಾಲೂಕಿನಲ್ಲಿ ಜನವರಿಯಿಂದ ಇಲ್ಲಿಯವರೆಗೆ ಒಟ್ಟು 23 ಪ್ರಕರಣಗಳು ಪತ್ತೆಯಾಗಿದ್ದು, ಎಲ್ಲರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದು, ಯಾವುದೇ ಸಾವು ಸಂಭವಿಸಿಲ್ಲ, ತಾಲೂಕಿನಾದ್ಯಂತ ಢೆಂಘಿ ಜ್ವರ ಪ್ರಕರಣವನ್ನು ತಡೆಯಲು ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಸೊಳ್ಳೆ ಬೆಳೆಯುವ ನೀರಿನ ಮೂಲಗಳು ಹಾಗೂ ಸೊಳ್ಳೆ ಉತ್ಪತ್ತಿಯಾಗದಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಟಿ.ಹೆಚ್.ಒ. ಡಾ.ಈರಣ್ಣ ತಿಳಿಸಿದ್ದಾರೆ.
ನಮ್ಮ ಆಸ್ಪತ್ರೆಯಲ್ಲಿ 7ದಿನಕ್ಕಿಂತ ಹೆಚ್ಚಿಗೆ ಜ್ವರ ಬಂದ ರೋಗಿಗಳಿಗೆ ರಕ್ತ ಪರೀಕ್ಷೆ ಮಾಡುವ ವ್ಯವಸ್ಥೆ ನಮ್ಮ ಆಸ್ಪತ್ರೆಯಲ್ಲಿದ್ದು, ಸದ್ಯ ಯಾವುದೇ ಢೆಂಘಿ ಪ್ರಕರಗಳು ಕಂಡುಬಂದಿಲ್ಲ. ಢೆಂಘಿಗೆ ಸಂಬಂಧಿಸಿದಂತೆ ನಮ್ಮಲ್ಲಿ ಯಾವುದೇ ರೋಗಿಗಳು ಚಿಕಿತ್ಸೆ ಪಡೆಯುತ್ತಿಲ್ಲ. ರೋಗಿಗಳು ಚಿಕಿತ್ಸೆ ಪಡೆಯಲು ವಿಶೇಷ ವಾರ್ಡ್ ಸಿದ್ಧಗೊಳಿಸಿಲ್ಲ, ನಮ್ಮ ಮೇಲಾಧಿಕಾರಿಗಳ ಆದೇಶ ಬಂದರೆ ವಿಶೇಷ ವಾರ್ಡ್ ಸಿದ್ದಮಾಡುತ್ತೇವೆಂದು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ಗುರುನಾಥ ತಿಳಿಸಿದ್ದಾರೆ.
ಢೆಂಘಿ ಪ್ರಕರಣ ತಡೆಯಲು ನಾವು ಮನೆ ಮನೆಗೆ ಪ್ರತಿನಿತ್ಯ ತೆರಳಿ ಢೆಂಘಿ ಜ್ವರಕ್ಕೆ ಕಾರಣವಾಗುವ ಸೊಳ್ಳೆಗಳು ನೀರಿನಲ್ಲಿ ಹುಟ್ಟುವ ಬಗ್ಗೆ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡುತ್ತಿದ್ದು, ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆಂದು ತೆಕ್ಕಲಕೋಟೆ ಪಟ್ಟಣದ ಆಶಾ ಕಾರ್ಯಕರ್ತೆ ಬೀಬಿ ತಿಳಿಸಿದ್ದಾರೆ.