ಕಾಮಗಾರಿ ನಡೆಸದೆ ನಿರ್ಲಕ್ಷ್ಯ: ಗ್ರಾಮಸ್ಥರ ಆಕ್ರೋಶ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜು.10: ಪಟ್ಟಣದ ಹೊರವಲಯದಲ್ಲಿರುವ ಚಿಕ್ಕಹೊಸಹಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಗುಂಡಿ ಬಿದ್ದಿರುವ ಕೆ.ಆರ್.ಪೇಟೆ – ಶ್ರವಣಬೆಳಗೊಳ ಮುಖ್ಯ ರಸ್ತೆಯನ್ನು ಸರಿಪಡಿಸಿಕೊಡುವಂತೆ ಗ್ರಾಮಸ್ಥರು ಲೋಕೋಪಯೋಗಿ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ರಮೇಶ್ ನೇತೃತ್ವದಲ್ಲಿಂದು ರಸ್ತೆಯಲ್ಲಿ ನಿಂತು ಪ್ರತಿಭಟಿಸಿದ ಗ್ರಾಮಸ್ಥರು ಅನುದಾನ ಮಂಜೂರಾಗಿದ್ದರೂ ರಸ್ತೆ ಕಾಮಗಾರಿ ನಡೆಸದೆ ದಿವ್ಯ ನಿರ್ಲಕ್ಷ್ಯ ಪ್ರದರ್ಶಿಸುತ್ತಿರುವ ಲೋಕೋಪಯೋಗಿ ಇಲಾಖೆಯ ಇಂಜಿನಿಯರುಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ರಮೇಶ್ ಮಾತನಾಡಿ ಚಾರಿತ್ರಿಕ ಹಾಗೂ ಧಾರ್ಮಿಕ ಮಹತ್ವ ಪಡೆದಿರುವ ವಿಶ್ವ ವಿಖ್ಯಾತ ಶ್ರವಣಬೆಳಗೊಳ ಮುಖ್ಯ ರಸ್ತೆ ನಮ್ಮ ಗ್ರಾಮದ ಮೂಲಕವೇ ಹಾದು ಹೋಗಿದೆ. ದಿನನಿತ್ಯ ನೂರಾರು ಪ್ರವಾಸಿಗರು ಹಾಗೂ ಯಾತ್ರಿಕರು ಇದೇ ಮಾರ್ಗದಲ್ಲಿ ಶ್ರವಣಬೆಳಗೊಳಕ್ಕೆ ಹೋಗುತ್ತಾರೆ. ಗ್ರಾಮ ವ್ಯಾಪ್ತಿಯಲ್ಲಿ ರಸ್ತೆ ಕಿರಿದಾಗಿದ್ದು ಸಂಪೂರ್ಣ ಗುಂಡಿ ಬಿದ್ದಿದ್ದು ವಾಹನಗಳು ಸಂಚರಿಸಲಾರದಷ್ಟು ಹಾಳಾಗಿದೆ. 2009 ರಲ್ಲಿ ಇಲ್ಲಿನ ಕಿರಿದಾದ ರಸ್ತೆಯಲ್ಲಿ ಬಸ್ ಬಿದ್ದು 06 ಜನ ಮೃತಪಟ್ಟಿದ್ದರು. ಇದಾದ ಅನಂತರ ಗ್ರಾಮಸ್ಥರ ಹೋರಾಟದ ಫಲವಾಗಿ ಗ್ರಾಮದ ಹೊರವಲಯದ ಸರಪಳಿ 810 ರಿಂದ 1600 ರ ವರೆಗೆ ರಸ್ತೆ ಅಭಿವೃದ್ದಿಗೆ ಈ ಹಿಂದಿನ ಬಿಜೆಪಿ ಸರ್ಕಾರ 06 ಕೋಟಿ ಹಣ ಬಿಡುಗಡೆ ಮಾಡಿದೆ. ಗ್ರಾಮ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣಕ್ಕೆ ಅಗತ್ಯವಾದ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿದ್ದು ಜಾಗ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಲು 3.79 ಲಕ್ಷ ಹಣವನ್ನು ಬಿಡುಗಡೆ ಮಾಡಿದೆ. ಸದರಿ ಪರಿಹಾರದ ಹಣ ಪಾಂಡವಪುರ ಉಪ ವಿಭಾಗಾಧಿಕಾರಿಗಳ ಖಾತೆಯಲ್ಲಿದೆ. ಭೂ ಸ್ವಾಧೀನದ ಪರಿಹಾರ ಹಣ ಬಿಡುಗಡೆಯಾಗಿದ್ದರೂ ಅದನ್ನು ರೈತರಿಗೆ ನೀಡಿ ಭೂ ಸ್ವಾಧೀನಕ್ಕೆ ಇದುವರೆಗೂ ಲೋಕೋಪಯೋಗಿ ಇಲಾಖೆ ಮುಂದಾಗಿಲ್ಲ. ಕ್ಷೇತ್ರದ ಶಾಸಕರಾದ ಹೆಚ್.ಟಿ.ಮಂಜು ಕೂಡ ಸದರಿ ರಸ್ತೆಯ ಕಾಮಗಾರಿ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವಂತೆ ಸೂಚಿಸಿದ್ದರೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಶಾಸಕರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ.
ನೋಟಿಫಿಕೇಷನ್ ಪ್ರಕಾರ ಮಂಜೂರಾತಿಯಾದ ರಸ್ತೆ ಅಭಿವೃದ್ದಿಗೆ ಕ್ರಮವಹಿಸಿದ ಲೋಕೋಪಯೋಗಿ ಇಲಾಖೆಯ ಇಂಜಿನಿಯರುಗಳು ಗುತ್ತಿಗೆದಾರನೊಂದಿಗೆ ಶಾಮೀಲಾಗಿ ಕೆ.ಆರ್.ಪೇಟೆ ಪಟ್ಟಣದ ಕೊನೆ ಭಾಗದ ತುದಿಯಲ್ಲಿ ಸುಮಾರು 200 ಮೀಟರ್‍ನಷ್ಟು ರಸ್ತೆಯನ್ನು ಯಾವುದೇ ಅನುಮೋದನೆ ಪಡೆಯದೆ ಅಗಲೀಕರಣ ಮಾಡಿ ಗ್ರಾಮದೊಳಗಿನ ರಸ್ತೆಯನ್ನು ಅಭಿವೃದ್ದಿಪಡಿಸದೆ ಕೈಬಿಟ್ಟಿದ್ದಾರೆ. ಗ್ರಾಮದೊಳಗೆ ರಸ್ತೆ ಅಗಲೀಕರಣ ಮಾಡುವುದಿರಲಿ ಕನಿಷ್ಠ ರಸ್ತೆ ಗುಂಡಿಗಳನ್ನು ಮುಚ್ಚುವ ಪ್ರಯತ್ನ ನಡೆಸಿಲ್ಲ. ಇದರಿಂದಾಗಿ ಸದರಿ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಹಾಗೂ ಗ್ರಾಮಸ್ಥರು ನಿತ್ಯ ಕಿರುಕುಳಕ್ಕೆ ಒಳಗಾಗಿದ್ದಾರೆ. ಗ್ರಾಮದೊಳಗಿನ ರಸ್ತೆಯನ್ನು ಸರಿಪಡಿಸದಿದ್ದರೆ ಗ್ರಾಮಸ್ಥರು ಶೀಘ್ರದಲ್ಲಿಯೇ ಲೋಕೋಪಯೋಗಿ ಕಛೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.
ಗ್ರಾಮ ಮುಖಂಡರಾದ ಯಜಮಾನ್ ಮಂಜಪ್ಪ, ಮೋಹನ್, ವಸಂತ, ಅಶೋಕ್, ಹರಿರಾಯನಹಳ್ಳಿ ಧರ್ಮೇಂದ್ರ ಸೇರಿದಂತೆ ಮತ್ತಿತರರಿದ್ದರು.