ಶಾಸಕ ಪ್ರದೀಪ್ ಈಶ್ವರ್‌ರಿಂದ ಜನಸ್ಪಂದನ ಕಾರ್ಯಕ್ರಮ
ಚಿಕ್ಕಬಳ್ಳಾಪುರ.ಜು.೧೦-ವಿವಿಧ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಕಾಲಮಿತಿಯೊಳಗೆ ಪರಿಹರಿಸಲು ಸೂಚನೆ ನೀಡಲಾಗಿದೆ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.
ನಗರದ ಶಾಸಕರ ಕಚೇರಿ ಮುಂಭಾಗದಲ್ಲಿಹಮ್ಮಿಕೊಂಡಿದ್ದ ತಾಲ್ಲೂಕಿನ ಜನರ ಅಹವಾಲು ಪರಿಹರಿಸುವ ತಾಲ್ಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಂದು ಬೆಳಗ್ಗೆ ನಮಸ್ತೆ ಚಿಕ್ಕಬಳ್ಳಾಪುರ ಮತ್ತು ಜನಸ್ಪಂದನ ಕಾರ್ಯಕ್ರಮದಲ್ಲಿ ಸುಮಾರು ೨೫೦ ಅರ್ಜಿಗಳು ಬಂದಿವೆ ಅವುಗಳಲ್ಲಿ ಜನಸ್ಪಂದನ ಕಾರ್ಯಕ್ರಮದಲ್ಲಿ ೩೨ ಅರ್ಜಿಗಳು ಬಂದಿದ್ದು, ಈ ಪೈಕಿ ೧೭ ಕಂದಾಯ ಇಲಾಖೆ, ೬ ಗ್ರಾಮೀಣಾಭಿವೃದ್ಧಿ ಇಲಾಖೆ, ನಗರಸಭೆಗೆ ಸಂಬಂಧ ಪಟ್ಟ ೫ ಅರ್ಜಿಗಳು, ಹಿಂದುಳಿದ ಕಲ್ಯಾಣ ವರ್ಗಗಳ ಇಲಾಖೆಯ ೨ ಅರ್ಜಿಗಳು, ಪಶುಪಾಲನಾ ಇಲಾಖೆಯ ೧ ಅರ್ಜಿ, ಜಿಲ್ಲಾ ಕೌಶಲ್ಯ ಅಭಿವೃದ್ಧಿ ಇಲಾಖೆಯ ೧ ಅರ್ಜಿ, ಸಹಾಯಕ ಭೂ ದಾಖಲೆಗಳ ನಿರ್ದೇಶಕರ ಕಚೇರಿಯ ೧ಅರ್ಜಿಗಳಾಗಿವೆ. ಈ ಅರ್ಜಿಗಳನ್ನು ನಿಗದಿತ ಕಾಲಮಿತಿಯೊಳಗೆ ಕಡ್ಡಾಯವಾಗಿ ಇತ್ಯರ್ಥಪಡಿಸಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ಇನ್ನುಳಿದ ಅರ್ಜಿಗಳು ನಮಸ್ತೆ ಚಿಕ್ಕಬಳ್ಳಾಪುರದಲ್ಲಿ ಬಂದಿದ್ದು,ಈ ಅರ್ಜಿಗಳನ್ನು ಆದಷ್ಟು ಬೇಗ ಬಗೆಹರಿಸುವ ಮೂಲಕ ವಿಲೇವಾರಿ ಮಾಡಬೇಕು.ಕಾನೂನು ತೊಡಕು ಇರುವ ಅರ್ಜಿಗಳನ್ನು ಹೊರತುಪಡಿಸಿ ಉಳಿದ ಅರ್ಜಿಗಳನ್ನು ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಿದಾಗ ಮಾತ್ರ ಜನರು ಸಮಸ್ಯೆಗಳಿಂದ ಮುಕ್ತರಾಗಲು ಸಾಧ್ಯ ಎಂದು ಹೇಳಿದರು.
ಪಿಂಚಣಿಗೆ ಸಂಬಂಧ ಪಟ್ಟ ಅರ್ಜಿಯನ್ನು ಸ್ಥಳದಲ್ಲೇ ವಿಲೇವಾರಿ ಮಾಡಲಾಗಿದೆ. ಬಾಕಿ ಅರ್ಜಿಗಳನ್ನು ಇಲಾಖೆಗಳಿಗೆ ವರ್ಗಾಯಿಸಿ ಕಾಲ ಮಿತಿಯೊಳಗೆ ಇತ್ಯರ್ಥಪಡಿಸಲು ಸೂಚನೆಗಳನ್ನು ನೀಡಿದ್ದೇನೆ.ಇಂದಿನ ಜನತಾ ದರ್ಶನದಲ್ಲಿ ಮನೆ, ನಿವೇಶನ,ಚರಂಡಿ, ಬೀದಿ ಬದಿಯ ವಿದ್ಯತ್ ದೀಪ, ರಸ್ತೆ ರಿಪೇರಿ, ಖಾತೆ ಬದಲಾವಣೆ, ಜೀವನೋಪಾಯಕ್ಕೆ ಆರ್ಥಿಕ ಸಹಾಯ,ಸಾಲ ಸೌಲಭ್ಯ ಗಳ ಬೇಡಿಕೆ ತರಹದ ಸಮಸ್ಯೆಗಳನ್ನು ಜನತೆ ತಂದಿದ್ದರು ಈ ತರಹದ ಕೆಲವು ಸಮಸ್ಯೆಗಳನ್ನ ಸ್ಥಳದಲ್ಲಿಯೇ ಪರಿಹರಿಸಿದ್ದು, ದೀರ್ಘ ಕಾಲದ ಸಮಸ್ಯೆಗಳ ಪರಿಹಾರಕ್ಕೆ ಕಾಲಾವಕಾಶ ತಗೆದು ಕೊಂಡಿದ್ದೇನೆ ಎಂದು ತಿಳಿಸಿದರು.
ಮಳೆಗಾಲ ಪ್ರಾರಂಭವಾಗಿದ್ದು,ಮಳೆಯಿಂದಾಗುವ ಹಾನಿಯನ್ನು ಹಾಗೂ ಪ್ರಸ್ತುತ ಕ್ಷೇತ್ರದಲ್ಲಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಜೊತೆ ಜೊತೆಗೆ ನಿವಾರಿಸಲು, ರಾಜಕಾಲುವೆ, ಸರ್ಕಾರಿ ಜಾಗಗಳ ಒತ್ತುವರಿಯಾರೇ ಮಾಡಿದ್ದರೂ ಯಾವುದೇ ಮುಲಾಜಿಲ್ಲದೇ ತೆರವಿಗೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆಗಳನ್ನು ನೀಡಿರುವುದಾಗಿ ತಿಳಿಸಿದರು.
ಹಾಗೇಯೇ ಕೆಲ ಗ್ರಾಮಗಳಲ್ಲಿ ಸ್ಮಶಾನಗಳಿಗೆ ಜಾಗದ ಕೊರತೆಯಿದ್ದು, ಅಂತಹ ಕಡೆಗಳಲ್ಲಿ ಸರ್ಕಾರಿ ಭೂಮಿ ಅಥವಾ ಖಾಸಗಿ ಜಾಗ ಖರೀದಿಸಿ ಸ್ಮಶಾನಗಳಿಗೆ ನೀಡುವ ಕುರಿತು ಸಹಾ ಅಧಿಕಾರಿಗಳೊಂದಿಗೆ ಚರ್ಚಿಸಿರುವುದಾಗಿ ತಿಳಿಸಿದರು.
ಜನತಾ ದರ್ಶನದಲ್ಲಿ ಅಪರ ಜಿಲ್ಲಾಧಿಕಾರಿ ಎನ್. ಭಾಸ್ಕರ್, ಉಪವಿಭಾಗಾಧಿಕಾರಿಡಿ.ಹೆಚ್.ಅಶ್ವಿನ್, ತಹಶೀಲ್ದಾರ್ ಅನಿಲ್, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್, ನಗರಸಭೆ ಉಸ್ತುವಾರಿ ಪೌರಾಯುಕ್ತ ಹಾಗೂ ಪರಿಸರ ಅಭಿಯಂತರ ಉಮಾಶಂಕರ್, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.
