ಡೆಂಗ್ಯೂ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ವಿಫಲ
ಚಿಕ್ಕಬಳ್ಳಾಪುರ.ಜು.೧೦- ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಮಾರಕ ಡೆಂಗ್ಯೂ ಅತ್ಯಂತ ಹೆಚ್ಚಾಗಿ ಕಂಡುಬರುತ್ತಿರುವುದು ಕಳವಳಕಾರಿ ವಿಷಯವಾಗಿದ್ದು ರಾಜ್ಯ ಸರ್ಕಾರ ಡೆಂಗ್ಯೂ ನಿಯಂತ್ರಣ ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಸಂಸತ್ ಸದಸ್ಯ. ಕೆ. ಸುಧಾಕರ್ ತಿಳಿಸಿದರು.
ನಗರ ಹೊರವಲಯದ ಜಿಲ್ಲಾಡಳಿತ ಭವನದ ಎರಡನೇ ಮಹಡಿಯಲ್ಲಿರುವ ಸಂಸದರ ಕಚೇರಿಯಲ್ಲಿ ನೂತನ ಸಂಸದ ಡಾ ಕೆ.ಸುಧಾಕರ್ ಮೊದಲ ಜನಸ್ಪಂದನೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಸರ್ಕಾರ ವಿದ್ದಾಗ ಕೋವಿಡ್-೧೯ ಬಂದಂತೆ ಈಗ ಬಂದಿದ್ದರೆ ಗತಿಯೇನು ಎಂದು ಆತಂಕ ವ್ಯಕ್ತಪಡಿಸಿದರು.
ಸಣ್ಣ ಜ್ವರವಾದ ಡೆಂಗ್ಯೂ ನಿಯಂತ್ರಿಸಲು ಆಗದ ಕಾಂಗ್ರೇಸ್ ರಾಜ್ಯ ಸರ್ಕಾರ, ಕೊರೋನಾ ಸಂಧರ್ಭದಲ್ಲಿ ನಾವು ಟಾಸ್ಕ್ ಪೋರ್ಸ್ ರಚಿಸಿ ಆರೋಗ್ಯ ಇಲಾಖೆಯ ಅಧಿಕಾರಿಗಳ ಕಮಿಟಿ ಮಾಡಿದ್ದೆವು.ಇದರೊಂದಿಗೆ ಎಲ್ಲಾ ಇಲಾಖೆಗಳ ಸಹಕಾರದಿಂದ ಕೋವಿಡ್ ನಿಯಂತ್ರಣಕ್ಕೆ ತಂದಿದ್ದೆವು, ಆದರೆ ಈ ರಾಜ್ಯ ಸರ್ಕಾರ ಯಾವುದೇ ಟಾಸ್ಕ್ ಪೋರ್ಸ್ ರಚಿಸಿಲ್ಲ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳ ಕಮಿಟಿ ಮಾಡಿಲ್ಲಾ. ಅಂದಿನ ಎಲ್ಲಾ ಅದೇ ಅಧಿಕಾರಿಗಳೇ ಇದ್ದಾರೆ ಅವರಿಂದ ಟಾಸ್ಕ್ ಪೋರ್ಸ್ ರಚಿಸಿ ಆರೋಗ್ಯ ಇಲಾಖೆಯ ಅಧಿಕಾರಿಗಳ ಕಮಿಟಿಮಾಡಿ ನಿಯಂತ್ರಣ ಮಾಡಬಹುದಾಗಿದೆ .ಆದರೆ ಅಂದು ಆಗಿನ ನಮ್ಮ ಕಾರ್ಯವೈಖರಿ ಬಗ್ಗೆ ಟೀಕೆಗಳೇನು? ಎಂದು ಕಾಂಗ್ರೆಸ್‌ನವರ ವಿರುದ್ದ ವೆಂಗ್ಯವಾಡಿದರು.
ಡೆಂಗ್ಯೂ ಪ್ರಕರಣಗಳು ಮತ್ತಷ್ಟು ಹೆಚ್ಚಾಗದಂತೆ ಮುನ್ನೆಚ್ಚರಿಕೆ ಯುಕ್ತ ಕ್ರಮಗಳನ್ನು ಸಮುದಾಯದೊಂದಿಗೆ ಸೇರಿ ನಿಯಂತ್ರಿಸಲು ಸರ್ಕಾರ ಮತ್ತು ಜಿಲ್ಲಾಡಳಿತ ಕಾರ್ಯೋನ್ಮುಖವಾಗ ಬೇಕು. ಸರ್ಕಾರ ಕೂಡಲೇ ಎಲ್ಲಾ ಆಸ್ಪತ್ರೆಗಳಲ್ಲಿ ಡೆಂಗ್ಯೂ ಗೆ ಬೇರೆ ವಾರ್ಡ್ ಮೀಸಲಿರಿಸಿ ಡೆಂಗ್ಯೂ ಪೀಡಿತರಿಗೆ ಚಿಕಿತ್ಸೆ ನೀಡಿ ಜನರ ಪ್ರಾಣ ಉಳಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾಡಳಿತ ಡೆಂಗ್ಯೂ ನಿಯಂತ್ರಣಕ್ಕಾಗಿ ಗ್ರಾಮ ಹಾಗೂ ವಾರ್ಡ್ ಮಟ್ಟದಿಂದ ಕ್ರಮವಹಿಸಬೇಕು ಎಂದು ಸಲಹೆ ನೀಡಿದರು.
ಪ್ರತಿ ವಾರಕ್ಕೊಮ್ಮೆ ಒಂದು ದಿನ ವಾರದ ಒಣಗಲು ದಿನಗಳನ್ನು ಆಚರಿಸುವ ಮೂಲಕ ಮನೆಗಳ ಸುತ್ತಮುತ್ತ ನೀರು ಸಂಗ್ರಹವಾಗುವ ತಾಣಗಳನ್ನು, ಬಳಕೆ ಮಾಡಿ ಎಸೆದಿರುವ ಅನುಪಯುಕ್ತ ವಸ್ತುಗಳಲ್ಲಿ ನೀರು ಶೇಖರಣೆಯಾಗಿರುವುದನ್ನು ತೆರವುಗೊಳಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಈ ಕಾರ್ಯಕ್ಕಾಗಿ ಆರೋಗ್ಯ ಇಲಾS ಯೊಂದಿಗೆ ಕಂದಾಯ, ಪಂಚಾಯತ್ ರಾಜ್, ಶಾಲಾ ಶಿಕ್ಷಣ, ಸಾರಿಗೆ ಹಾಗೂ ಇನ್ನಿತರ ಇಲಾಖೆಗಳ ಸಮನ್ವಯತೆಯೊಂದಿಗೆ ಕಾರ್ಯೋನ್ಮುಖವಾಗ ಬೇಕು. ಡೆಂಗ್ಯೂ ಪ್ರಕರಣಗಳು ಮಕ್ಕಳಲ್ಲಿ ಕಂಡು ಬರುತ್ತಿದ್ದು, ಶಾಲೆಯ ಸುತ್ತಮುತ್ತಲ ವಾತಾವರಣವನ್ನು ಸ್ವಚ್ಚವಾಗಿಟ್ಟುಕೊಂಡು ವಿದ್ಯಾರ್ಥಿಗಳ ಆರೋಗ್ಯ ಕಾಪಾಡುವುದು ಶಾಲಾ ಮುಖ್ಯಸ್ಥರ ಜವಾಬ್ದಾರಿಯಾಗಿರುತ್ತದೆ. ಶಾಲಾ ಕೊಠಡಿಗಳ ಕಿಟಕಿಗಳಿಗೆ ಜಾಲರಿ ಅಳವಡಿಸಿ ಸೊಳ್ಳೆಗಳು ಕೊಠಡಿಗೆ ಬಾರದಂತೆ ತಡೆಯಬೇಕು. ಮಕ್ಕಳಲ್ಲಿ ಜ್ವರ ಕಾಣಿಸಿಕೊಂಡ ಕೂಡಲೇ ಅವರ ಪೋಷಕರಿಗೆ ಅಥವಾ ನೇರವಾಗಿ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಕೊಡಿಸುವ ಜವಾಬ್ದಾರಿಯನ್ನು ಶಾಲೆಗಳನ್ನು ನಿರ್ವಹಿಸುವ ಮುಖ್ಯಸ್ಥರು, ಶಿಕ್ಷಕರು ಮಾಡುವಂತೆ ತಿಳಿಸಿದರು.