ಗಿಡಮರ ಬೆಳೆಸೋಣ-ಪರಿಸರ ಉಳಿಸೋಣ
ಕೋಲಾರ,ಜು,೧೦- ನಮ್ಮ ಬದುಕಿಗೆ ಹಾಗೂ ಉತ್ತಮ ಆರೋಗ್ಯಕ್ಕಾಗಿ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಬೇಕು ಮನೆಗೊಂದು ಮರ,ಊರಿಗೊಂದು ಮರ ಎಂಬ ಮಾತು ಕಾರ್ಯಗತವಾಗಬೇಕು ಎಂದು ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯ ಪ್ರಭಾರ ಮುಖ್ಯಶಿಕ್ಷಕ ಎಂ.ಆರ್.ಗೋಪಾಲಕೃಷ್ಣ ತಿಳಿಸಿದರು.
ಜಿಪಂ ಸಿಇಒ ಪದ್ಮಬಸವಂತಪ್ಪ ಅವರ ಸೂಚನೆಯಂತೆ ಶಾಲೆಯ ಆವರಣದಲ್ಲಿ ಗಿಡಮರಗಳನ್ನು ವೃದ್ದಿಸುವ ದೃಷ್ಟಿಯಿಂದ ಆಯೋಜಿಸಿದ್ದ ಬೀಜದುಂಡೆ ತಯಾರಿಕೆ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಇಂದು ಉತ್ತಮ ಗಾಳಿ ಸಿಗುವುದೇ ದುರ್ಲಭವಾಗಿದೆ, ನಾವು ಅಭಿವೃದ್ದಿಯ ನೆಪದಲ್ಲಿ ಗಿಡಮರಗಳನ್ನು ನಾಶಪಡಿಸುತ್ತಾ ಸಾಗಿದರೆ ಮುಂದೊಂದು ದಿನ ಪ್ರಕೃತಿಯ ಕೋಪಕ್ಕೆ ತುತ್ತಾಗಬೇಕಾಗುತ್ತದೆ, ಅತಿವೃಷ್ಟಿ, ಅನಾವೃಷ್ಟಿಯಂತಯ ಭೀಕರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದರು.
ನಮ್ಮ ಹಿರಿಯರು ಅತಿ ದೂರದೃಷ್ಟಿಯಿಂದ ಗ್ರಾಮಗಳಲ್ಲಿ ಅಶ್ವಥ್ಥಕಟ್ಟೆ ನಿರ್ಮಿಸಿ ಬೇವು,ಅರಳಿ ಮರಗಳನ್ನು ಪೂಜಿಸುವ ಮೂಲಕ ಮರಗಳ ಮಹತ್ವವನ್ನು ಸಮಾಜಕ್ಕೆ ನೀಡಿದ್ದಾರೆ, ನಾವು ಅವರ ಹಾದಿಯಲ್ಲೇ ಗಿಡಗಳನ್ನು ಬೆಳೆಸಿ ಪೋಷಿಸಬೇಕು, ಉತ್ತಮ ಗಾಳಿ,ಪರಿಸರಕ್ಕಾಗಿ ನಮ್ಮ ಈ ಕರ್ತವ್ಯ ನಿರ್ವಹಿಸಬೇಕು ಎಂದರು.
ಶಿಕ್ಷಕ ವೆಂಕಟರೆಡ್ಡಿ, ಬೀಜದುಂಡೆಗಳ ತಯಾರಿಕೆಗೆ ಸಹಕಾರ ನೀಡಿ, ಮಕ್ಕಳು ಬೀಜದುಂಡೆ ತಯಾರಿಸಿ, ಒಣಗಿಸಿ ಬೆಟ್ಟದ ತಪ್ಪಲು, ಅರಣ್ಯ ಪ್ರದೇಶಗಳಲ್ಲಿ ಹಾಕುವ ಮೂಲಕ ಪರಿಸರಕ್ಕೆ ಕೈಲಾದಷ್ಟು ಕೊಡುಗೆ ನೀಡಬೇಕು, ಶಾಲೆಯ ಆವರಣದಲ್ಲಿ ಮತ್ತಷ್ಟು ಗಿಡಗಳನ್ನು ಬೆಳೆಸುವ ಮೂಲಕ ಹಸರೀಕರಿಣ ಮಾಡೋಣ ಎಂದರು.
ಶಾಲೆಯ ಆವರಣವನ್ನು ಸ್ವಚ್ಚವಾಗಿಟ್ಟುಕೊಳ್ಳುವ ಕಾರ್ಯದಲ್ಲಿ ಮಕ್ಕಳು ಗಮನಹರಿಸಬೇಕು, ಕಾಗದ ಎಲ್ಲೆಂದರಲ್ಲಿ ಹಾಕಿ ಸ್ವಚ್ಚತೆಗೆ ಧಕ್ಕೆ ತರಬಾರದು, ಗಿಡಮರಗಳ ಒಣಗಿದ ಎಲೆಗಳನ್ನು ಗಿಡದ ಪಾತಿಗೆ ಹಾಕಿ ಹಸಿರೆಲೆ ಗೊಬ್ಬರವಾಗುವಂತೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಸುಗುಣಾ, ಫರೀದಾ, ಶ್ರೀನಿವಾಸಲು,ರಮಾದೇವಿ, ಡಿ.ಚಂದ್ರಶೇಖರ್, ಅಗಸ್ತ್ಯ ಫೌಂಡೇಷನ್ ಹರೀಶ್‌ಕುಮಾರ್ ಮತ್ತಿತರರು ಹಾಜರಿದ್ದರು.