ಏಕಾಗ್ರತೆ ನಿಮ್ಮಲ್ಲಿದ್ದಾಗ ಯಶಸ್ಸು ನಿಮ್ಮದೇ –  ಡಾ. ಶಿವಕುಮಾರ

ಸಂಜೆವಾಣಿ ವಾರ್ತೆ
ರಾಣೇಬೆನ್ನೂರು.ಜು.೧೦ : ಯಶಸ್ಸು ಎಂಬುದು ತಟ್ಟೆಯಲ್ಲಿ ಹಾಕಿದ ಊಟವಲ್ಲ. ಇದಕ್ಕಾಗಿ ನಾವು ಸಾಕಷ್ಟು ಶ್ರಮಿಸಬೇಕು. ನಮ್ಮ ಅನ್ನಕ್ಕಾಗಿ ನಾವೇ ಬಿತ್ತಿ, ಬೆಳೆದು, ಕೊಯಿಲುಮಾಡಿ ಅಡುಗೆ ತಯಾರಿಸಿ ಊಟ ಮಾಡಿದಂತೆ. ಯಶಸ್ಸಿನ ಹಾದಿಯಲ್ಲಿ ಸಾಗಲು ಬಯಸುವವರು ತಮ್ಮೆಲ್ಲಾ ಸಂತೋಷ, ಸೌಕರ್ಯಗಳನ್ನು ತ್ಯಾಗ ಮಾಡಬೇಕು. ಆರಂಭದಲ್ಲಿ ಎದುರಾಗುವ ಎಲ್ಲಾ ಕಷ್ಟಗಳನ್ನ ಎದುರಿಸಿದಾಗ ಅಂತ್ಯದಲ್ಲಿ ನಿಮಗೆ ಸುಖವಷ್ಟೇ ಇರುತ್ತದೆ. ಒಮ್ಮೆ ನೀವು ಯಶಸ್ಸು ಗಳಿಸಿದರೆ ಜೀವನದಲ್ಲಿ ಎಲ್ಲವೂ ನಿಮ್ಮನ್ನು ಹಿಂಬಾಲಿಸಿ ಬರುತ್ತದೆ. ಆದರೆ ಸಂತೋಷ, ವೈಭೋಗದ ಹಿಂದೆ ಓಡಿದರೆ ಯಶಸ್ಸು ಖಂಡಿತ ನಿಮ್ಮದಾಗುವುದು ಅಸಾಧ್ಯ. ಶಿಸ್ತು, ಕಠಿಣ ಪರಿಶ್ರಮ, ದೃಢಸಂಕಲ್ಪ, ಸಾಧಿಸುವ ಛಲ, ಏಕಾಗ್ರತೆ ಈ ಎಲ್ಲವನ್ನು ನಿಮ್ಮಲ್ಲಿ ಬೆಳಸಿಕೊಂಡಾಗ ಯಶಸ್ಸು ತಾನಾಗಿಯೇ ಒಲಿದು ಬರುತ್ತದೆ ಎಂದು ರಾಣೇಬೆನ್ನೂರಿನ ಶ್ರೀ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದ ಪ್ರದ್ಯಾಪಕರಾದ ಡಾ. ಎಂ. ಈ. ಶಿವಕುಮಾರ ಹೊನ್ನಾಳಿಯವರು ರಾಣೇಬೆನ್ನೂರಿನ ಸಂಜೀವಿನಿ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಏರ್ಪಡಿಸಿದ್ದ  ಸಕ್ಸಸ್ ಗೆ ದಾರಿ…. ಯಾವದು…. ” ಎಂಬ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ತಿಳಿಸಿದರು. ಮುಂದುವರೆದು ಇಲ್ಲಿ ಒಬ್ಬ ವ್ಯಕ್ತಿ ಯಶಸ್ವಿಯಾಗಿದ್ದಾರೆ ಅಂತ ಹೇಳಿದರೆ, ಆ ವ್ಯಕ್ತಿ ಖಂಡಿತವಾಗಿಯೂ ಕೌಶಲ್ಯಗಳನ್ನು ಮತ್ತು ದೃಷ್ಟಿಕೋನವನ್ನು ತನ್ನಲ್ಲಿ ಹೊಂದಿದ್ದಾನೆ ಅಂತ ಹೇಳಬಹುದು. ಈ ಕೌಶಲ್ಯಗಳನ್ನು ನೀವು ನಿಮ್ಮ ಜೀವನದಲ್ಲಿ ಬೆಳೆಸಿಕೊಂಡು ನೋಡಿ, ನಿಮಗೂ ನೀವು ಮಾಡುವಂತಹ ಕೆಲಸಗಳಲ್ಲಿ ಆ ಯಶಸ್ಸು ಸಿಗುತ್ತದೆ ಎಂದು ಹೇಳಿದರು.ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಪ್ರಭುಲಿಂಗ ಕೊಡದ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಸ್ಥೆಯ ಅಧ್ಯಕ್ಷರಾದ ಎಂ.ಎನ್. ಕರಬಣ್ಣನವರ ಅಧ್ಯಕ್ಷತೆ ವಹಿಸಿದ್ದರು. ರಮೇಶ್ ತಳವಾರ , ಸಿದ್ದಪ್ಪ ಕಂಬಳಿ , ಪ್ರಕಾಶ್ ಬಳ್ಳಾರಿ , ಪ್ರವೀಣ್ ಬಿದರಿ , ನಾಗರಾಜ್ ಎಲಿಗಾರ್ , ಎಸ್.ಕೆ.ನೇತ್ರಾವತಿ ಉಪಸ್ಥಿತರಿದ್ದರು.ಶ್ರೀನಿವಾಸ್ ಮಾಗಳ ಸ್ವಾಗತಿಸಿದರು. ಭೂಮಿಕಾ ಕಸವಾಳ ವಂದಿಸಿದರು. ಬಿ.ಗೀತಾ ಕಾರ್ಯಕ್ರಮ ನಿರೂಪಿಸಿದರು