ಶಿವಮೊಗ್ಗ ಪಾಲಿಕೆಯಲ್ಲಿ ಮರೆಯಾದ ಜನಸ್ನೇಹಿ ಆಡಳಿತ : ಗಮನಹರಿಸುವರೆ ನೂತನ ಆಯುಕ್ತರು?
ಶಿವಮೊಗ್ಗ, ಜು. 9: ಕಳೆದ ಕೆಲ ವರ್ಷಗಳ ಹಿಂದೆ, ಶಿವಮೊಗ್ಗ ಪಾಲಿಕೆಯಲ್ಲಿ ಕಾರ್ಯಗತಗೊಳಿಸಿದ್ದ ಜನಸ್ನೇಹಿ ಕಾರ್ಯಕ್ರಮಗಳು ಇಡೀ ರಾಜ್ಯದ ಗಮನ ಸೆಳೆದಿತ್ತು. ಪೌರಾಡಳಿತ ಇಲಾಖೆ ಸೇರಿದಂತೆ ಸಚಿವರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೇ ಕಾರಣದಿಂದ ಶಿವಮೊಗ್ಗವೂ ಕೇಂದ್ರ ಸರ್ಕಾರದ ಪ್ರತಿಷ್ಠಿತ ‘ಸ್ಮಾರ್ಟ್ ಸಿಟಿ’ ಯೋಜನೆಗೂ ಆಯ್ಕೆಯಾಗುವಂತಾಗಿತ್ತು.ಆದರೆ ಪ್ರಸ್ತುತ ಪಾಲಿಕೆಯಲ್ಲಿ, ಜನಸ್ನೇಹಿ ಕಾರ್ಯಕ್ರಮಗಳು ಅಕ್ಷರಶಃ ಹೇಳ ಹೆಸರಿಲ್ಲದಂತೆ ಮೂಲೆಗುಂಪಾಗಿವೆ. ಸಣ್ಣಪುಟ್ಟ ಕೆಲಸ ಕಾರ್ಯಗಳಿಗೂ ನಾಗರೀಕರು ಪಾಲಿಕೆ ಕಚೇರಿಗೆ ಅಲೆದಾಡುವಂತಾಗಿದೆ. ಆಡಳಿತ ವ್ಯವಸ್ಥೆ ನಿಸ್ತೇಜವಾಗಿದೆ. ಕ್ರಮೇಣ ಜನರಿಂದಲೇ ಆಡಳಿತ ದೂರವಾಗಲಾರಂಭಿಸಿದೆ!ವಿನೂತನ ಕಾರ್ಯಕ್ರಮಗಳು : ಎ.ಆರ್.ರವಿ ಅವರು ಪಾಲಿಕೆ ಆಯುಕ್ತರಾಗಿದ್ದಾಗ ಆಡಳಿತ ವ್ಯವಸ್ಥೆಯಲ್ಲಿ ಆಮೂಲಾಗ್ರ ಸುಧಾರಣೆ ತಂದಿದ್ದರು. ಹಲವು ಜನಸ್ನೇಹಿ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಿದ್ದರು. ನಾಗರೀಕರ ಮನೆ ಬಾಗಿಲಿಗೆ ಆಡಳಿತ ಕೊಂಡೊಯ್ಯುವ ನಿಟ್ಟಿನಲ್ಲಿ, ಜನರು ಮನೆಯಲ್ಲಿಯೇ ಕುಳಿತು ಪಾಲಿಕೆ ಸೇವೆ ಪಡೆಯುವ ವ್ಯವಸ್ಥೆ ಕಾರ್ಯಗೊಳಿಸಿದ್ದರು.ಮೂಲಸೌಕರ್ಯ ಸಮಸ್ಯೆಗಳ ಪರಿಹಾರಕ್ಕೆ ಪ್ರತ್ಯೇಕ ಸಹಾಯವಾಣಿ ಕೇಂದ್ರ ಆರಂಭಿಸಿದ್ದರು. ಸಾಮಾಜಿಕ ಜಾಲತಾಣಗಳ ಮೂಲಕವೂ ಸಮಸ್ಯೆಗಳ ಕುರಿತಂತೆ ದೂರು ದಾಖಲಿಸುವ ವ್ಯವಸ್ಥೆಗೆ ಚಾಲನೆ ನೀಡಿದ್ದರು. ಕಡತ ವಿಲೇವಾರಿಗೆ ಚುರುಕು ನೀಡಿದ್ದರು. ಭ್ರಷ್ಟಾಚಾರ ನಿಯಂತ್ರಣಕ್ಕೆ ಕ್ರಮಕೈಗೊಂಡಿದ್ದರು.ಹಾಗೆಯೇ ಚಾರುಲತಾ ಸೋಮಲ್ ಅವರು ಆಯುಕ್ತರಾಗಿದ್ದಾಗ, ಆಡಳಿತದಲ್ಲಿ ಹೊಸ ಸಂಚಲನ ಮೂಡಿಸಿದ್ದರು. ಜನಪರ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಪಾಲಿಕೆ ಆಸ್ತಿ ಒತ್ತುವರಿಗೆ ತೆರವಿಗೆ ಖಡಕ್ ಕ್ರಮಕೈಗೊಂಡಿದ್ದರು. ಪ್ರಭಾವಿಗಳ ಯಾವುದೇ ಒತ್ತಡಕ್ಕೆ ಮಣಿಯದೆ ಕಾರ್ಯನಿರ್ವಹಿಸಿದ್ದರು.