ಕೆರೆಬಿಳಚಿ ಮೊರಾರ್ಜಿ ದೇಸಾಯಿ ಶಾಲೆಗೆ ಶಾಸಕ ಬಸವರಾಜು ವಿ ಶಿವಗಂಗಾ ಧೀಡಿರ್ ಭೇಟಿ ಪರಿಶೀಲನೆ
ಸಂಜೆವಾಣಿ ವಾರ್ತೆ
ದಾವಣಗೆರೆ. ಜು.೧೦; ಜಿಲ್ಲೆಯ ಚನ್ನಗಿರಿ :ತಾಲ್ಲೂಕಿನ ಕೆರೆಬಿಳಚಿ ಅಲ್ಪಸಂಖ್ಯಾತರ ಉನ್ನತೀಕರಿಸಿದ ಮೊರಾರ್ಜಿ ವಸತಿಯುತ ಶಾಲೆಗೆ ಶಾಸಕರಾದ ಬಸವರಾಜು ವಿ ಶಿವಗಂಗಾ ಧೀಡಿರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಯಾವುದೇ ಮಾಹಿತಿ ನೀಡದೇ ಇಂದು ಶಾಲೆಗೆ ಭೇಟಿ ನೀಡಿದ ಶಾಸಕರು ಅಡುಗೆ ಮನೆ, ವಿದ್ಯಾರ್ಥಿಗಳ ಕೊಠಡಿ ಸೇರಿದಂತೆ ಎಲ್ಲೆಡೆ ಪರಿಶೀಲನೆ ನಡೆಸಿದರು. ಪ್ರಾಂಶುಪಾಲರಾದ ವೀರೇಶ್ ಎಸ್ ಅವರೊಂದಿಗೆ ಮಾಹಿತಿ ಪಡೆದ ಅವರಶೀ ಬಾರಿ ಶೈಕ್ಷಣಿಕ ವರ್ಷದಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಸಂಖ್ಯೆ, ವಸತಿ ಶಾಲೆಯಲ್ಲಿ ನಿಡುತ್ತಿರುವ ಆಹಾರ ಸೇರಿದಂತೆ ಇತರೆ ಮಾಹಿತಿ ಪಡೆದರು. ಸರ್ಕಾರ ಬಡ ಮಕ್ಕಳಿಗಾಗಿ ವಸತಿ ಶಾಲೆಗಳನ್ನ ತೆರೆದಿದ್ದು ಯಾವುದೇ ಲೋಪವಾಗದಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದರು. ಇತ್ತೀಚೆಗೆ ಡೆಂಗ್ಯೂ ಪ್ರಕರಣ ಉಲ್ಬಣಗೊಳ್ಳುತ್ತಿದ್ದು, ಮಕ್ಕಳಿಗೆ ಆರೋಗ್ಯದಲ್ಲಿ ತೊಂದರೆಯಾಗದಂತೆ ಮುಂಜಾಗ್ರತೆ ಕ್ರಮ ವಹಿಸಬೇಕು, ವಸತಿ ಶಾಲೆಯ ಎಲ್ಲಾ ಸಿಬ್ಬಂದಿಗಳು ಸರಿಯಾಗಿ ಗೈರಾಗದೆ ಕೆಲಸ ಮಾಡಬೇಕು, ಸಮಯಕ್ಕೆ ಸರಿಯಾಗಿ ತರಗತಿಗಳು ನಡೆಯಬೇಕೆಂದು ಸೂಚಿಸಿದರು. ಇನ್ನೂ ಅಡುಗೆ ವಿಚಾರದಲ್ಲಿ ಯಾವುದೇ ರಾಜೀ ಆಗುವುದಿಲ್ಲ, ಮಕ್ಕಳಿಗೆ ಸರ್ಕಾರ ನಿಡುವ ಎಲ್ಲಾ ಸೌಲಭ್ಯ ಕಲ್ಪಿಸಬೇಕೆಂದರು. ಗುಣಮಟ್ಟದ ಆಹಾರ ನೀಡಬೇಕು, ಪ್ರತಿನಿತ್ಯ ತರಕಾರಿ ಖರೀದಿ ಮಾಡಬೇಕು, ಶೇಖರಣೆ ಮಾಡಿದ ಆಹಾರ ಪದಾರ್ಥಗಳನ್ನು ಸಮಯ ಮುಗಿದ ಮೇಲೆ ಬಳಸಬಾರದು ಎಂದು ತಿಳಿಸಿದರು. ಆಹಾರ ಸಾಮಾಗ್ರಿ ಸರಬರಾಜು ಮಾಡಲು ಟೆಂಡರ್ ನೀಡಿದ್ದರೆ ಅಂತವರ ಮೇಲೆ ನಿಗಾ ಇಡಲಾಗುತ್ತದೆ, ಯಾವುದೇ ಮೋಸ ಅನ್ಯಾಯ ಕಂಡು ಬಂದರೂ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ವಸತಿ ನಿಲಯದ ಮೇಲ್ವಿಚಾರದ ಸಿಬ್ಬಂದಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು. ಕಳೆದ ವರ್ಷ ಇದೇ ಶಾಲೆಗೆ ಶಾಸಕರು ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಕಂಡು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಧೀಡಿರ್ ಭೇಟಿ ನೀಡಿ ಪರಿಶೀಲನೆ ನಡೆಸುವ ಮೂಲಕ ವಸತಿ ಶಾಲೆ ಸಿಬ್ಬಂದಿಗೆ ಶಾಕ್ ನೀಡಿದ್ದಾರೆ. ಇನ್ನೂ ಅಡುಗೆ ಮನೆ, ಶೌಚಾಲಯ, ಮಕ್ಕಳ ಪ್ರವೇಶದಲ್ಲಿ ಹೆಚ್ಚಳವಾಗಿದ್ದು, ಇದೇ ರೀತಿ ಸ್ವಚ್ಛತೆಯನ್ನು ಕಾಪಾಡಿಕೊಂಡು ಹೋಗುವಂತೆ ಪ್ರಾಂಶುಪಾಲರಾದ ಎಸ್. ವೀರೇಶ್ ಅವರಿಗೆ ತಿಳಿಸಿದರು. ವಸತಿ ಶಾಲೆ ಕಳೆದ ಬಾರಿಗಿಂತ ಹೆಚ್ಚು ಅಭಿವೃದ್ಧಿಯಾಗುತ್ತಿದ್ದು, ಶೈಕ್ಷಣಿಕ ಗುಣಮಟ್ಟದಲ್ಲೂ ಇನ್ನೂ ಬೆಳವಣಿಗೆ ಆಗುವಂತೆ ನೋಡಿಕೊಳ್ಳಿ ಎಂದು ಸಲಹೆ ನಿಡಿದರು. ಈ ವೇಳೆ ಪ್ರಾಂಶುಪಾಲರಾದ ವಿರೇಶ್ ಎಸ್ ಹಾಗೂ ವಸತಿ ನಿಲಯ ಸಿಬ್ಬಂದಿ ಉಪಸ್ಥಿತರಿದ್ದರು