ಕ್ರಿಮಿನಲ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ
ಕಲಬುರಗಿ:ಜು.09: ಶಿಕ್ಷಣ ಸಚಿವರು ರಾಜೀನಾಮೆ ಕೊಡುವಂತೆ, ಕ್ರಿಮಿನಲ್ ತಿದ್ದುಪಡಿ ಕಾಯ್ದೆ ವಾಪಸ್ಸು ಪಡೆಯುವಂತೆ ಹಾಗೂ ಮುಸ್ಲಿಂ ಅಲ್ಪಸಂಖ್ಯಾತರ ಮೇಲಿನ ದಾಳಿಯನ್ನು ಖಂಡಿಸಿ ಮಂಗಳವಾರ ಭಾರತ ಕಮ್ಯುನಿಸ್ಟ್ ಪಕ್ಷ (ಕಮ್ಯುನಿಸ್ಟ್) ಜಿಲ್ಲಾ ಸಮಿತಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನಾ ಪ್ರದರ್ಶನ ಮಾಡಿದರು.
ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‍ಟಿಎ) ನಡೆಸಿದ ಪರೀಕ್ಷೆಗಳ ಸುತ್ತಲಿನ ಹಗರಣಗಳಿಂದ ಲಕ್ಷಾಂತರ ವಿದ್ಯಾರ್ಥಿಗಳು, ಅವರ ಪೋಷಕರು ಮತ್ತು ಇತರರು ಎದುರಿಸುತ್ತಿರುವ ಆತಂಕ, ತೀವ್ರ ಆಘಾತದ ಕುರಿತು ಕಳವಳಕಾರಿ ಸಂಗತಿ. ಕೂಡಲೇ ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ಕೊಡುವಂತೆ ಮತ್ತು ಕೇಂದ್ರೀಕೃತ ಪರೀಕ್ಷಾ ಪದ್ದತಿಯನ್ನು ರದ್ದುಗೊಳಿಸುವಂತೆ, ಎನ್‍ಟಿಎಯನ್ನು ವಿಸರ್ಜಿಸುವಂತೆ, ಶಿಕ್ಷಣ ವ್ಯವಸ್ಥೆಯ ಕೇಂದ್ರೀಕರಣದ ಎಲ್ಲ ಉಪ ಕ್ರಮಗಳನ್ನು ರದ್ದುಗೊಳಿಸುವಂತೆ ಅವರು ಒತ್ತಾಯಿಸಿದರು.
ಕಳೆದ 1ರಿಂದ ಜಾರಿಗೆ ತಂದಿರುವ ಹೊಸ ಪ್ರಜಾಪ್ರಭುತ್ವ ಮತ್ತು ಜನವಿರೋಧಿ ಕ್ರಿಮಿನಲ್ ಕಾನೂನುಗಳನ್ನು ಕೂಡಲೇ ತಡೆಯುವಂತೆ ಆಗ್ರಹಿಸಿದ ಅವರು, ಕರಾಳ ಕಾನೂನುಗಳನ್ನು ಕೂಡಲೇ ಹಿಂಪಡೆಯುವಂತೆ ಒತ್ತಾಯಿಸಿದರು.
ತರಾತುರಿಯಲ್ಲಿ ಚರ್ಚೆಯಿಲ್ಲದೇ ನಿರಂಕುಶವಾಗಿ ಮತ್ತು ಪ್ರಜಾಪ್ರಭುತ್ವ ವಿರೋಧಿ ರೀತಿಯಲ್ಲಿ ಸಂಸತ್ತಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿರೋಧ ಪಕ್ಷದ ಸಂಸದರನ್ನು ಅಮಾನತ್ತುಗೊಳಿಸಿ ಪಾಸು ಮಾಡಿಕೊಂಡ ಕಾನೂನುಗಳು ಕರಾಳವಾಗಿವೆ ಎಂದು ಟೀಕಿಸಿದ ಅವರು, ಸುಪ್ರಿಂಕೋರ್ಟ್ ದೇಶದ್ರೋಹವನ್ನು ನಿರೂಪಿಸಿದ ಐಪಿಸಿಯ ಸೆಕ್ಷನ್ 124ಎ ಸಾಕಷ್ಟು ಸರಿಯಾಗಿಯೇ ತೆಗೆದುಹಾಕಿದ್ದರೂ ಅದನ್ನು ಹೊಸ ಭಾರತೀಯ ನ್ಯಾಯ ಸಂಹಿತೆಯಲ್ಲಿ ಸೆಕ್ಷನ್ 152 ಆಗಿ ಕಳ್ಳತನದಿಂದ ತೂರಲಾಗಿದೆ ಮತ್ತು ಇದರೊಂದಿಗೆ ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಯ ಉಲ್ಲೇಖಗಳಿವೆ. ಮೂಲ ಸೆಕ್ಷನ್ 124ಎನಲ್ಲಿ ಇವು ಇರಲಿಲ್ಲ. ಇದು ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಹೊಸ ಕಾನೂನು ಜನರನ್ನು ರಾಷ್ಟ್ರ ವಿರೋಧಿಗಳೆಂದು ಆರೋಪಿಸಿ ಶಿಕ್ಷೆಗೆ ಗುರಿಪಡಿಸಲು ದಾರಿಯಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ನಾಗರಿಕರಿಗೆ ಹಾನಿಯಾಗುವಂತಹ ಪೋಲಿಸ್ ಅಧಿಕಾರಗಳನ್ನು ಹೆಚ್ಚಿಸುವ ಅನೇಕ ನಿಬಂಧನೆಗಳಿವೆ ಎಂದು ದೂರಿದ ಅವರು, ಹೊಸ ಕಾನೂನು ಹಿಂದಿನ ಕಾನೂನಿನಲ್ಲಿ ನಿಗದಿಪಡಿಸಿದ ಹದಿನೈದು ದಿನಗಳ ಮಿತಿಯನ್ನು ಮೀರಿ ಆರೋಪಿಯ ಪೋಲಿಸ್ ಕಸ್ಟಡಿಗೆ ಅವಕಾಶವನ್ನು ನೀಡುತ್ತದೆ ಎಂದು ನಿದರ್ಶನ ನೀಡಿದರು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾದ ನಂತರ ದೇಶದ ವಿವಿಧ ಭಾಗಗಳಲ್ಲಿ ಮುಸ್ಲಿಂ ಸಮುದಾಯಗಳಿಗೆ ಸೇರಿದವರ ಜೀವ, ಜೀವನೋಪಾಯ ಮತ್ತು ಆಸ್ತಿಗಳ ಮೇಲೆ ನಡೆಯುತ್ತಿರುವ ಮತಾಂಧರ ಭೀಕರ ದಾಳಿಗಳು ಖಂಡನಾರ್ಹ. ಕೂಡಲೇ ಅಲ್ಪಸಂಖ್ಯಾತರ ಮೇಲಿನ ದಾಳಿಗಳನ್ನು ನಿಗ್ರಹಿಸಬೇಕು ಎಂದು ಅವರು ಒತ್ತಾಯಿಸಿದರು.
ಪಕ್ಷದ ರಾಜ್ಯ ಕಾರ್ಯದರ್ಶಿ ಯು. ಬಸವರಾಜ್, ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ, ಶಾಂತಾ ಘಂಟೆ, ಶ್ರೀಮಂತ್ ಬಿರಾದಾರ್, ಎಂ.ಬಿ. ಸಜ್ಜನ್, ಸುಧಾಮ್ ಧನ್ನಿ, ಭೀಮಶೆಟ್ಟಿ ಯಂಪಳ್ಳಿ, ಪಾಂಡುರಂಗ್ ಮಾವಿನಕರ್, ಡಾ. ಪ್ರಭು ಖಾನಾಪುರೆ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.