ಜು. 11ರಿಂದ ಮೂರು ದಿನಗಳವರೆಗೆ ಖ್ಯಾತ ಕಲಾವಿದ ಅಂದಾನಿಯವರ ವಜ್ರಮಹೋತ್ಸವ
ಕಲಬುರಗಿ:ಜು.09:ಖ್ಯಾತ ಕಲಾವಿದ ಪ್ರೊ. ವಿ.ಜಿ. ಅಂದಾನಿಯವರ 75ನೇ ವರ್ಷದ ವಜ್ರ ಮಹೋತ್ಸವವನ್ನು ಜುಲೈ 11,12 ಮತ್ತು 13ರಂದು ಒಟ್ಟು ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದು ಪ್ರೊ. ವಿ.ಜಿ. ಅಂದಾನಿಯವರ ವಿದ್ಯಾರ್ಥಿ ಬಳಗದ ಟಿ. ದೇವೆಂದ್ರಪ್ಪ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ ನಿಮಿತ್ಯ ಚಿತ್ರಕಲಾ ಪ್ರದರ್ಶನ, ಚಿತ್ರಕಲಾ ಶಿಬಿರ, ಮಕ್ಕಳ ಚಿತ್ರಕಲಾ ಸ್ಪರ್ಧೆ, ಬಯಲು ಬೆಳಕು ಅಭಿನಂದನಾ ಗ್ರಂಥ ಬಿಡುಗಡೆ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಜುಲೈ 11ರಂದು ಬೆಳಿಗ್ಗೆ 10-30ಕ್ಕೆ ದಿ. ಐಡಿಯಲ್ ಫೈನ್ ಆರ್ಟ್ ಸಂಸ್ಥೆಯ ಆವರಣದಲ್ಲಿ ಪ್ರೊ. ವಿ.ಜಿ. ಅಂದಾನಿಯವರ ಚಿತ್ರಕಲಾ ಪ್ರದರ್ಶನವನ್ನು ಬರೋಡಾ ಎಂ.ಎಸ್. ವಿಶ್ವವಿದ್ಯಾಲಯದ ವಿಶ್ರಾಂತ ಡೀನ್ ಪ್ರೊ. ವಿಜಯ್ ಬಾಗೋಡಿ ಅವರು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಮೈಸೂರು ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಮಹಾವಿದ್ಯಾಲಯದ ವಿಶ್ರಾಂತ ಡೀನ್ ಪ್ರೊ. ಬಸವರಾಜ್ ಮುಸಾವಳಗಿ, ಹಿರಿಯ ಕಲಾವಿದ ವೀರೇಂದ್ರ ಶಾಹ ಅವರು ಆಗಮಿಸುವರು. ಅಧ್ಯಕ್ಷತೆಯನ್ನು ನಿವೃತ್ತ ಉಪನ್ಯಾಸಕಿ ಡಾ. ಪೂರ್ಣಿಮಾ ಪಾಟೀಲ್ ಅವರು ವಹಿಸುವರು ಎಂದು ಅವರು ಹೇಳಿದರು.
ಅಂದೇ ಬೆಳಿಗ್ಗೆ 11-30ಕ್ಕೆ ಚಿತ್ರಕಲಾ ಶಿಬಿರವನ್ನು ಕರ್ನಾಟಕ ಚಿತ್ರಕಲಾ ಪರಿಷತ್ ಉಪಾಧ್ಯಕ್ಷ ಪ್ರೊ. ಕೆ.ಎಸ್. ಅಪ್ಪಾಜಯ್ಯ ಅವರು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ನವದೆಹಲಿಯ ಖ್ಯಾತ ಕಲಾವಿದ ಜಿ.ಆರ್. ಈರಣ್ಣ ಅವರು ಆಗಮಿಸುವರು. ಅಧ್ಯಕ್ಷತೆಯನ್ನು ಹಿರಿಯ ಕಲಾವಿದ ವಿಜಯ್ ಹಾಗರಗುಂಡಗಿ ಅವರು ವಹಿಸುವರು. ಜುಲೈ 12ರಂದು ಬೆಳಿಗ್ಗೆ 10-30ಕ್ಕೆ ಮಕ್ಕಳ ಚಿತ್ರಕಲಾ ಶಿಬಿರವನ್ನು ಕರ್ನಾಟಕ ಲಲಿತಕಲಾ ಅಕ್ಯಾಡೆಮಿಯ ಮಾಜಿ ಅಧ್ಯಕ್ಷ ಡಾ. ಎಂ.ಎಸ್. ಮೂರ್ತಿ ಅವರು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ವಿಭಾಗೀಯ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಡಾ. ಆಕಾಶ್, ಕರ್ನಾಟಕ ಲಲಿತಕಲಾ ಅಕ್ಯಾಡೆಮಿಯ ಸದಸ್ಯ ಬಸವರಾಜ್ ಎಲ್. ಜಾನೆ ಅವರು ಆಗಮಿಸುವರು. ಅಧ್ಯಕ್ಷತೆಯನ್ನು ನಿವೃತ್ತ ಚಿತ್ರಕಲಾ ವಿಷಯ ಪರಿವೀಕ್ಷಕ ಟಿ. ದೇವೆಂದ್ರ ಅವರು ವಹಿಸುವರು ಎಂದು ಅವರು ತಿಳಿಸಿದರು.
ಜುಲೈ 13ರಂದು ಬೆಳಿಗ್ಗೆ 11 ಗಂಟೆಗೆ ವೀರಶೈವ ಕಲ್ಯಾಣ ಮಂಟಪದಲ್ಲಿ ಬಯಲು ಬೆಳಕು ಅಭಿನಂದನಾ ಗ್ರಂಥವನ್ನು ನೂತನ ಸಂಸದ ರಾಧಾಕೃಷ್ಣ ದೊಡ್ಡಮನಿ ಅವರು ಬಿಡುಗಡೆ ಮಾಡುವರು. ಅಧ್ಯಕ್ಷತೆಯನ್ನು ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ವಹಿಸುವರು. ಮುಖ್ಯ ಅತಿಥಿಗಳಾಗಿ ತೆಲಂಗಾಣ ರಾಜ್ಯದ ಪರಿಷತ್ ಸದಸ್ಯೆ ಶ್ರೀಮತಿ ಸುರಭಿ ವಾಣಿದೇವಿ, ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್, ಅತಿಥಿಗಳಾಗಿ ದಿ ಐಡಿಯಲ್ ಫೈನ್ ಆರ್ಟ್ ಸಂಸ್ಥೆಯ ಅಧ್ಯಕ್ಷ ರಾಜಶೇಖರ್ ಕೆ. ಪಾಟೀಲ್, ಅಭಿನಂದನಾ ಗ್ರಂಥದ ಸಂಪಾದಕರಾದ ಡಾ. ಕಾಶಿನಾಥ್, ಡಾ. ಸತೀಶಕುಮಾರ್ ಪಿ. ವಲ್ಲೇಪುರ್ ಅವರು ಆಗಮಿಸುವರು. ಅಭಿನಂದನಾ ಗ್ರಂಥದ ಕುರಿತು ಡಾ. ಎಂ.ಎಸ್. ಮೂರ್ತಿ ಅವರು ಮಾತನಾಡುವರು ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಡಾ. ಪೂರ್ಣಿಮಾ ಪಾಟೀಲ್, ಶಿಲ್ಪಾ ಪಾಟೀಲ್, ಡಾ. ಕಾಶಿನಾಥ್ ಡಿ., ಡಾ. ಸತೀಶ್ ವಲ್ಲೆಪೂರೆ, ಡಾ. ಹೆಚ್.ವಿ. ಮಂತಟ್ಟಿ, ಮೊಹ್ಮದ್ ಅಯಾಜುದ್ದೀನ್ ಪಟೇಲ್, ನಾರಾಯಣ್ ಎಂ. ಜೋಶಿ ಮುಂತಾದವರು ಉಪಸ್ಥಿತರಿದ್ದರು.