ವೈದ್ಯಕೀಯ ಕಾಲೇಜುಗಳಿಗೆ ದಂಡ: ಖಂಡನೆ
ಕಲಬುರಗಿ:ಜು.09: ಕರ್ನಾಟಕದ ವೈದ್ಯಕೀಯ ಕಾಲೇಜುಗಳಿಗೆ ದಂಡ ವಿಧಿಸಿರುವ ಎನ್‍ಎಂಸಿಯ ಏಕಪಕ್ಷೀಯ ನಡೆಯನ್ನು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಅವರು ಖಂಡಿಸಿದ್ದಾರೆ ಎಂದು ಜಿಲ್ಲಾ ಕಾರ್ಯದರ್ಶಿ ತುಳಜರಾಮ್ ಎನ್.ಕೆ., ಅವರು ತಿಳಿಸಿದ್ದಾರೆ.
ರಾಜ್ಯದ ಹಲವು ವೈದ್ಯಕೀಯ ಕಾಲೇಜುಗಳಿಗೆ ನೋಟಿಸ್ ಜಾರಿ ಮಾಡಿರುವ ಎನ್‍ಎಂಸಿಯು, ಕಾಲೇಜು ನಡೆಸಲು ಅಪೇಕ್ಷಿತ ಗುಣಮಟ್ಟವನ್ನು ಹೊಂದದಿರುವುದಕ್ಕೆ ದಂಡವಿಧಿಸಿದೆ. ರಾಜ್ಯದ 13 ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ 11 ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ದಂಡ ವಿಧಿಸಲಾಗಿದೆ. ದಂಡದ ಮೊತ್ತವು 2 ಲಕ್ಷ ರೂ.ಗಳಿಂದ 15 ಲಕ್ಷದ ವರೆಗೂ ಇದೆ. ವೈದ್ಯಕೀಯ ಕಾಲೇಜುಗಳು ಅಪೇಕ್ಷಿತ ಗುಣವಟ್ಟವನ್ನು ಕಾಪಾಡಲೇಬೇಕು, ಆದರೆ ಈ ರೀತಿ ದಂಡ ವಿಧಿಸುವುದು ಅತ್ಯಂತ ಅಪ್ರಜಾತಾಂತ್ರಿಕವಾಗಿದೆ ಎಂದು ಅವರು ಹೇಳಿಕೆಯಲ್ಲಿ ಆಕ್ಷೇಪಿಸಿದ್ದಾರೆ.
ಎನ್‍ಎಂಸಿಯ ಈ ನಡೆಯು ಗುಣಮಟ್ಟದ ಶಿಕ್ಷಣದ ಮೂಲ ಉದ್ದೇಶಕ್ಕೆ ವಿರುದ್ಧವಾಗಿದೆ. ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸಿಬ್ಬಂದಿಗಳ ಸಂಖ್ಯೆಯು ಕಡಿಮೆ ಇದ್ದು ಮೂಲ ಸೌಕರ್ಯಗಳು ಅವಶ್ಯಕ ಮಟ್ಟದಲ್ಲಿ ಇರದಿದ್ದರೆ, ಇದರ ಜವಾಬ್ದಾರಿ ಹೊತ್ತು ಸಿಬ್ಬಂದಿಗಳನ್ನು ನೇಮಕಾತಿ ಮಾಡಿಕೊಳ್ಳುವ ಮತ್ತು ಸಮರ್ಪಕ ಸೌಕರ್ಯಗಳನ್ನು ಒದಗಿಸುವ ಜವಾಬ್ದಾರಿಯನ್ನು ಆಡಳಿತ ವರ್ಗವೇ ವಹಿಸಿಕೊಳ್ಳಬೇಕು ಮತ್ತು ಆ ನಿಟ್ಟಿನಲ್ಲಿ ಸಮರ್ಪಕ ಅನುದಾನ ಒದಗಿಸಬೇಕು. ಸರ್ಕಾರಿ ವೈದ್ಯಕೀಯ ಕಾಲೇಜುಗಳ ಅವ್ಯವಸ್ಥೆಯ ಕುರಿತು ಹಲವಾರು ವರದಿಗಳು ವಿವರಿಸಿವೆ. ರಾಜ್ಯ ಸರ್ಕಾರ ಅಥವಾ ಎನ್‍ಎಂಸಿ ಈ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ. ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಣಕಾಸು ಸಹಾಯ ಒದಗಿಸುವುದರ ಬದಲಿಗೆ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್‍ಆರ್‍ಐ ಕೋಟ ತೆರೆದು ದುಡ್ಡು ಮಾಡಲು ಯತ್ನಿಸುತ್ತಿದೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
ವೈದ್ಯಕೀಯ ಶಿಕ್ಷಣವನ್ನು ಉತ್ತಮಪಡಿಸುವ ತನ್ನ ಜವಾಬ್ದಾರಿಯಿಂದ ಕೈ ತೊಳೆದುಕೊಳ್ಳುವ ಧೋರಣೆಯನ್ನು ಎನ್‍ಎಂಸಿಯ ಈ ನಡೆಯು ಎತ್ತಿ ತೋರಿಸುತ್ತಿದೆ. ಮತ್ತು ವೈದ್ಯಕೀಯ ಶಿಕ್ಷಣವನ್ನು ಅಭಿವೃದ್ಧಿಪಡಿಸಲು ಸಮರ್ಪಕ ಹಣಕಾಸು ಒದಗಿಸುವಂತೆ ಒತ್ತಾಯಿಸಿದ ಅವರು, ಬದಲಿಗೆ ಆಳ್ವಿಕರ ಪ್ರಮಾದಕ್ಕೆ ಶಿಕ್ಷಣ ಸಂಸ್ಥೆಯ ಮೇಲೆ ದಂಡವನ್ನು ಹೇರುವುದು ಶಿಕ್ಷಣದ ಸತ್ವಕ್ಕೆ ಧಕ್ಕೆ ಉಂಟು ಮಾಡುವುದರಿಂದ ಎಂದಿಗೂ ಅದು ರೂಢಿಯಾಗಬಾರದು ಎಂದು ತಿಳಿಸಿದ್ದಾರೆ.