ಕನ್ನಡ ನಾಮಫಲಕ ಕಡ್ಡಾಯ: ಮುಂದಿನ ವಾರ ಸಾಹಿತ್ಯ ಪರಿಷತ್‍ನಿಂದ ಜನಜಾಗೃತಿ
ಕಲಬುರಗಿ:ಜು.09:ಕರ್ನಾಟಕ ರಾಜ್ಯದಲ್ಲಿ ವಹಿವಾಟು ನಡೆಸುವ ಎಲ್ಲ ಸರ್ಕಾರಿ, ಸ್ವಾಯತ್ತ ಮತ್ತು ಖಾಸಗಿ ಸಂಸ್ಥೆಗಳು, ಅಂಗಡಿಗಳ ಮೇಲೆ ಹಾಕುವ ನಾಮಫಲಕಗಳು ಕನ್ನಡದಲ್ಲಿರಬೇಕೆಂಬ ಆದೇಶ ಇದ್ದರೂ, ಇಲ್ಲಿಯವರೆಗೆ ಅದನ್ನು ಪಾಲಿಸದೇ ಇರುವ ಅಂಗಡಿಗಳ ಮಾಲೀಕರಿಗೆ ಮನವರಿಕೆ ಮಾಡಿಕೊಡಲು ಜಿಲ್ಲೆಯ ಕವಿ-ಸಾಹಿತಿಗಳು, ಕನ್ನಡಪರ ಮತ್ತು ಜನಪರ ಸಂಘಟನೆಗಳ ಪ್ರಮುಖರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಜನಜಾಗೃತಿ ಕಾರ್ಯಕ್ರಮವೊಂದನ್ನು ಮುಂದಿನ ವಾರದಲ್ಲಿ ನಡೆಸಲು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಿರ್ಧರಿಸಿದೆ ಎಂದು ಪರಿಷತ್ ಜಿಲ್ಲಾ ಅಧ್ಯಕ್ಷ ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ ಅವರು ತಿಳಿಸಿದ್ದಾರೆ.
ನಗರದ ಕನ್ನಡ ಭವನದಲ್ಲಿ ಮಂಗಳವಾರ ಜರುಗಿದ ಪರಿಷತ್ತಿನ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನ್ನಡ ಭಾಷೆಗೆ ಅಮೋಘ ಕೊಟ್ಟಿರುವ ಕಲಬುರಗಿ ಜಿಲ್ಲೆಯಲ್ಲಿ ಇಲ್ಲಿನ ಉದ್ದಿಮೆದಾರರು, ಅಂಗಡಿಗಳ ಮಾಲೀಕರು ತಮಗಿಷ್ಟ ಬಂದ ಭಾಷೆಗಳಲ್ಲಿ ನಾಮಫಲ ಹಾಕುವ ಮೂಲಕ ಕನ್ನಡವನ್ನು ಕಡೆಗಣಿಸುತ್ತಿದ್ದಾರೆ. ಹಾಗಾಗಿ ಅಂಥ ಅಂಗಡಿಗಳ ಮಾಲೀಕರಿಗೆ ಖಡಕ್ ಎಚ್ಚರಿಕೆ ಕೊಟ್ಟು ತಮ್ಮ ಅಂಗಡಿಗಳ ನಾಮಫಲಕಗಳನ್ನು ಕನ್ನಡದಲ್ಲಿ ಬರೆಸಬೇಕು ಎಂಬ ವಿಷಯವನ್ನು ಮನದಟ್ಟು ಮಾಡುವ ಉದ್ದೇಶ ಈ ಜನಜಾಗೃತಿ ಕಾರ್ಯಕ್ರಮದ್ದಾಗಿದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮುಂದಿನ ದಿನಗಳಲ್ಲಿ ಕನ್ನಡ ನಾಮ ಫಲಕಗಳ ಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದು, ನಮ್ಮ ಮಾತೃಭಾಷೆಯಾದ ಕನ್ನಡ ಭಾಷೆ ಉಳಿಸಿ, ಬೆಳೆಸಲು ಎಲ್ಲರೂ ನಮ್ಮೊಂದಿಗೆ ಕೈಜೋಡಿಸಬೇಕು ಎಂದು ಇದೇ ಸಂದರ್ಭದಲ್ಲಿ ಮನವಿ ಮಾಡಿಕೊಂಡ ಅವರು, ಕನ್ನಡ ಉಳಿಸುವ ಮತ್ತು ಬೆಳೆಸುವ ಬಹು ದೊಡ್ಡ ಜವಾಬ್ದಾರಿ ಪರಿಷತ್ತಿನ ಮೇಲೆ ಇದೆ ಎಂದರು.
ಪರಿಷತ್ ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಶಿವರಾಜ್ ಎಸ್. ಅಂಡಗಿ, ಧರ್ಮಣ್ಣ ಎಚ್. ಧನ್ನಿ, ಸಂಘಟನಾ ಕಾರ್ಯದರ್ಶಿ ರವೀಂದ್ರಕುಮಾರ್ ಭಂಟನಳ್ಳಿ, ಪ್ರಮುಖರಾದ ರಾಜೇಂದ್ರ ಮಾಡಬೂಳ್, ಶಕುಂತಲಾ ಪಾಟೀಲ್ ಜಾವಳಿ, ಸೋಮಶೇಖರಯ್ಯಾ ಹೊಸಮಠ್, ಗಣೇಶ್ ಚಿನ್ನಾಕಾರ್, ಸೈಯದ್ ನಜೀರುದ್ದೀನ್ ಮುತ್ತವಲಿ, ಡಾ. ರೆಹಮಾನ್ ಪಟೇಲ್, ಜೆ.ಎಸ್. ವಿನೋದಕುಮಾರ್, ಬಾಬುರಾವ್ ಪಾಟೀಲ್, ವಿದ್ಯಾಸಾಗರ್ ದೇಶಮುಖ್, ಧರ್ಮರಾಜ್ ಜವಳಿ, ಶಿವಾನಂದ್ ಪೂಜಾರಿ, ಶಿವಶರಣ್ ಹಡಪದ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.