ವರದಕ್ಷಿಣೆ ಕಿರುಕುಳ ನೀಡಿ ಗರ್ಭಿಣಿ ಕೊಲೆ
ಕಲಬುರಗಿ,ಜು.9-ವರದಕ್ಷಿಣಿ ಕಿರುಕುಳ ನೀಡಿ 2 ತಿಂಗಳ ಗರ್ಭಿಣಿಯನ್ನು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ಹೊಡೆದು ಕೊಲೆ ಮಾಡಿರುವ ಬಗ್ಗೆ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಂಜಿತಾ ಮೃತಪಟ್ಟ ಮಹಿಳೆ. ಔರಾದ (ಬಿ) ಗ್ರಾಮದ ರಂಜಿತಾಳನ್ನು ಜೇವರ್ಗಿ ತಾಲ್ಲೂಕಿನ ಆಂದೋಲಾ ಗ್ರಾಮದ ಉಮೇಶ ಕಟ್ಟಿಮನಿ ಜೊತೆ ಮದುವೆ ಮಾಡಿಕೊಡಲಾಗಿತ್ತು. ಮದುವೆಯಾದ ಒಂದು ತಿಂಗಳವರೆಗೆ ಸರಿಯಾಗಿ ನೋಡಿಕೊಂಡ ಗಂಡನ ಮನೆಯವರು ನಂತರ ವರದಕ್ಷಿಣೆ ಕಿರುಕುಳ ನೀಡಲು ಆರಂಭಿಸಿದರು. ವಿಷಯ ತಿಳಿದು ರಂಜಿತಾ ತಂದೆ-ತಾಯಿ ಅಳಿಯನಿಗೆ ಮತ್ತು ಅವರ ಮನೆಯವರಿಗೆ ಬುದ್ಧಿ ಮಾತು ಹೇಳಿ ಬಂದಿದ್ದರು. ಇದಾದ ನಂತರ ಸ್ವಲ್ಪದಿನ ಸರಿಯಾಗಿದ್ದರು. ಮಗಳು ಎರಡು ತಿಂಗಳ ಗರ್ಭಿಣಿ ಎಂಬ ವಿಷಯ ತಿಳಿದು ಹಣ್ಣು ಹಂಪಲು ನೀಡಿ ಅಳಿಯ ಮತ್ತು ಅವರ ಮನೆಯವರಿಗೆ ಬುದ್ಧಿ ಮಾತು ಹೇಳಿ ಬಂದಿದ್ದರು. ಜು.8 ರಂದು ಬೆಳಿಗ್ಗೆ 9 ಗಂಟೆಗೆ ಉಮೇಶ ಅವರ ತಂದೆ ಬಸವರಾಜ ಅವರು ಕರೆ ಮಾಡಿ ನಿಮ್ಮ ಮಗಳ ಆರೋಗ್ಯ ಹದಗೆಟ್ಟಿದೆ ಬೇಗ ಬನ್ನಿ ಎಂದು ಹೇಳಿದ್ದರು. ಅಲ್ಲಿಗೆ ಹೋಗಿ ನೋಡಲಾಗಿ ರಂಜಿತಾ ಮೃತಪಟ್ಟಿದ್ದಳು. ಮನೆಯವರನ್ನು ವಿಚಾರಿಸಿದಾಗ ರಂಜಿತಾ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿಸಿದರು. ಆದರೆ ತಮ್ಮ ಮಗಳಿಗೆ ಅಳಿಯ ಉಮೇಶ, ಅತ್ತೆ ಸುನಂದಾ, ಮಾವ ಬಸವರಾಜ ಮತ್ತು ಮೈದುನ ರಾಕೇಶ ಅವರು ತವರು ಮನೆಯಿಂದ ವರದಿಕ್ಷಿಣೆ ತರುವಂತೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿ ಹೊಡೆದು ಕೊಲೆ ಮಾಡಿದ್ದಾರೆ ಎಂದು ಮೃತ ಮಹಿಳೆಯ ತಂದೆ ವಿಠ್ಠಲ ಸಮಗಾರ ಅವರು ದೂರಿನಲ್ಲಿ ತಿಳಿಸಿದ್ದಾರೆ.
ತನಿಖೆ ನಡೆದಿದೆ.