ಮತ್ತು ಬರಿಸುವ ಪಾನೀಯ ಕುಡಿಸಿ ಮಹಿಳೆ ಮೇಲೆ ಅತ್ಯಾಚಾರ: ಆರೋಪಿಗೆ 3 ವರ್ಷ ಕಠಿಣ ಶಿಕ್ಷೆ, 1 ಲಕ್ಷ ರೂ.ದಂಡ
ಕಲಬುರಗಿ,ಜು.9-ವಿವಾಹಿತ ಮಹಿಳೆಗೆ ಮತ್ತುಬರಿಸುವ ಪಾನೀಯ ನೀಡಿ ಅತ್ಯಾಚಾರ ಮಾಡಿ, ಆಕೆಯ ಅಶ್ಲೀಲ ಛಾಯಾಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಆರೋಪಿಗಳಿಗೆ ಇಲ್ಲಿನ 5ನೇ ಹೆಚ್ಚುವರಿ ವಿಶೇಷ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 3 ವರ್ಷ ಕಠಿಣ ಶಿಕ್ಷೆ ಮತ್ತು 1 ಲಕ್ಷ ರೂ.ದಂಡ ವಿಧಿಸಿದೆ.
2018 ರಲ್ಲಿ ಆಳಂದ ತಾಲ್ಲೂಕಿನ ಹಿತ್ತಲಶಿರೂರ ಗ್ರಾಮದ ಸಾಗರ ತಂದೆ ಬಾಬು ರಂಜರಣಗಿ ಎಂಬಾತ ಮಹಿಳೆಯ ಪತಿ ಮನೆಯಲ್ಲಿ ಇಲ್ಲದೇ ಇರುವ ಸಂದರ್ಭದಲ್ಲಿ ಮನೆಗೆ ತೆರಳಿ ಮತ್ತು ಬರಿಸುವ ಪಾನೀಯ ಕುಡಿಸಿ ಅತ್ಯಾಚಾರ ಮಾಡಿ ಅಶ್ಲೀಲ ಛಾಯಾಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ. ಆರೋಪಿಯ ಈ ಕೃತ್ಯವನ್ನು ಬಾಬು ತಿಪ್ಪಣ್ಣ ರಂಜಣಗಿ ಮತ್ತು ಅನೀಲಕುಮಾರ ಬಾಬು ರಂಜಣಗಿ ಬೆಂಬಲಿಸಿದ್ದರು. ಈ ಸಂಬಂಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ತನಿಖಾಧಿಕಾರಿಗಳಾದ ದಿಲೀಪಕುಮಾರ ಸಾಗರ ಮತ್ತು ಬಸವರಾಜ ತೇಲಿ ಅವರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ 5ನೇ ಹೆಚ್ಚುವರಿ ವಿಶೇಷ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಚಂದ್ರಶೇಖರ ಕರೋಶಿ ಅವರು, ಪ್ರಮುಖ ಆರೋಪಿ ಸಾಗರ ರಂಜಣಗಿಗೆ 3 ವರ್ಷ ಕಠಿಣ ಶಿಕ್ಷೆ ಮತ್ತು 1 ಲಕ್ಷ ರೂ.ದಂಡ, ಎರಡನೇ ಮತ್ತು ಮೂರನೇ ಆರೋಪಿಗಳಾದ ಬಾಬು ಮತ್ತು ಅನೀಲಕುಮಾರಗೆ ತಲಾ 10 ಸಾವಿರ ರೂ.ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಹಯಾಳಪ್ಪ ಎನ್.ಬಳಬಟ್ಟಿ ವಾದ ಮಂಡಿಸಿದ್ದರು.