ಪತ್ರಿಕೆಗಳು ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸುವ ಕೆಲಸ ಮಾಡುತ್ತಿವೆ : ಮಾಜಿ ಶಾಸಕ ಡೊಂಗರಗಾಂವ
ಅಥಣಿ :ಜು.9: ಸ್ವಾತಂತ್ರ್ಯ ಹೋರಾಟದಲ್ಲಿ ಪತ್ರಿಕೆಗಳ ಪಾತ್ರ ಪ್ರಮುಖವಾಗಿತ್ತು. ದೇಶದ ಸ್ವತಂತ್ರ ಚಳುವಳಿಯಲ್ಲಿ ಹೋರಾಟಗಾರರಿಗೆ ಸ್ಪೂರ್ತಿ ತುಂಬಿದ ಪತ್ರಿಕೆಗಳು ಇಂದು ಪ್ರಜಾಪ್ರಭುತ್ವದ ಊರುಗೋಲಾಗಿ ಕೆಲಸ ನಿರ್ವಹಿಸುತ್ತಿದೆ.
ಸಮಾಜದ ಅಂಕುಡೊಂಕು ಎತ್ತಿ ತೋರಿಸುವಲ್ಲಿ ಯಶಸ್ವಿಯಾಗಿ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸುವ ಕೆಲಸ ಮಾಡುತ್ತಿವೆ ಎಂದು ಮಾಜಿ ಶಾಸಕ ಶಹಾಜಹಾನ ಡೊಂಗರಗಾಂವ ಹೇಳಿದರು.
ಅವರು ತಾಲೂಕಿನ ತೆಲಸಂಗ್ ಗ್ರಾಮದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಥಣಿ ತಾಲೂಕು ಕಾರ್ಯನಿರತ ಗ್ರಾಮೀಣ ಪತ್ರಕರ್ತರ ಸಂಘ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಇವುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು ಮಾಧ್ಯಮಗಳನ್ನು ಸಂವಿಧಾನದ ನಾಲ್ಕನೇ ಅಂಗ ಎಂದು ಕರೆಯುತ್ತಾರೆ. ಆ ನಂಬಿಕೆಯನ್ನು ಮಾಧ್ಯಮಗಳು ಉಳಿಸಿಕೊಳ್ಳಬೇಕು. ಕಲೆ ಸಂಸ್ಕøತಿ ಕೃಷಿ ಕ್ರೀಡೆ ವಾಣಿಜ್ಯ ಮತ್ತು ರಾಜಕಿಯ ಸೇರಿದಂತೆ ಪ್ರಚಲಿತ ವಿದ್ಯಮಾನಗಳಿಗೆ 3ನೇ ಕಣ್ಣಿನಂತೆ ವಸ್ತುನಿಷ್ಠವಾದ ಸುದ್ದಿಗಳು ಸಿಗುವುದು ಪತ್ರಿಕೆಗಳಲ್ಲಿ ಮಾತ್ರ ಎಂದರು.
ಯುವ ಕಾಂಗ್ರೆಸ್ ಮುಖಂಡ ಚಿದಾನಂದ ಸವದಿ ಮಾತನಾಡಿ, ಸಮಾಜದಲ್ಲಿ ಪತ್ರಕರ್ತರ ಮೇಲೆ ದೊಡ್ಡ ಜವಾಬ್ದಾರಿಯಿದೆ. ಜನರು ಪತ್ರಕರ್ತರ ಮೇಲಿಟ್ಟಿರುವ ನಂಬಿಕೆ. ವಿಶ್ವಾಸ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಮಾಜಮುಖಿಯಾಗಿ ಕರ್ತವ್ಯ ನಿರ್ವಹಿಸಬೇಕು. ದೇಶದ ಅಭಿವೃದ್ಧಿ ವಿಷಯದಲ್ಲಿ ಪತ್ರಿಕೆಗಳ ಹಾಗೂ ಗ್ರಾಮೀಣ ಪತ್ರಕರ್ತರ ಪಾತ್ರ ಹಿರಿದಾಗಿದೆ. ಡಿಜಿಟಲ್ ತಂತ್ರಜ್ಞಾನ ಅದೆಷ್ಟೇ ಮುಂದುವರೆದಿದ್ದರೂ ನಿತ್ಯ ಬೆಳಿಗ್ಗೆ ಪತ್ರಿಕೆಗಳನ್ನ ಓದಲೇ ಬೇಕು. ಅಂದಾಗ ಮಾತ್ರ ನಿತ್ಯದ ದಿನಚರಿ ಸುಮಗವಾಗಿ ಸಾಗಲು ಮನಸ್ಸು ಸಹಕರಿಸುವುದು. ಇಂದು ಜನರಲ್ಲಿ ಓದುವ ಹವ್ಯಾಸ ಕಡಿಮೆ ಆಗುತ್ತಿರುವುದು ವಿಪರ್ಯಾಸ. ನಿತ್ಯ ಪತ್ರಿಕೆಗಳನ್ನು ಓದುವ ಹವ್ಯಾಸ ಪ್ರತಿ ಮನೆಯೆ ಪಾಠವಾಗಬೇಕು. ಬೆರಳ ತುದಿಯಲ್ಲಿಯೇ ಜಗತ್ತೂ ಇದ್ದರೂ ಪತ್ರಿಕೆಗಳನ್ನು ಓದುವ ಹವ್ಯಾಸ ಮಕ್ಕಳಲ್ಲಿ ಬೆಳಸದೇ ಇದ್ದರೆ ಮಾತೃ ಭಾಷಾ ಜ್ಞಾನ ಸಾಹಿತ್ಯಾಸಕ್ತಿ ಹಾಗೂ ಸತ್ಯ ನಿಷ್ಠೆಯ ಮೇಲೆ ಬಹುದೊಡ್ಡ ಹೊಡೆತ ಬೀಳುತ್ತದೆ ಎಂದರು.
ಹಿರಿಯ ಪತ್ರಕರ್ತ ವಾಸುದೇವ ಹೆರಕಲ್ ಉಪನ್ಯಾಸ ನೀಡಿ, ಕನ್ನಡ ಭಾಷೆಯ ಮೇಲೆ ಪ್ರಭುತ್ವ ಸಾಧಿಸಿದ ವಿದ್ಯಾರ್ಥಿಗಳು ಪತ್ರಿಕಾ ರಂಗಕ್ಕೆ ಬರಬೇಕು. ಬರೆಯುವ ಕೌಶಲ್ಯದ ಜೊತೆಗೆ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ವಿದೇಶಿ ಭಾಷಗಳನ್ನು ಕಲಿತರೆ ದೇಶ ವಿದೇಶಗಳ ಪತ್ರಿಕೆಗಳಲ್ಲಿಯೂ ಕೂಡಾ ವಿಪುಲ ಅವಕಾಶಗಳನ್ನು ಪಡೆಯಬಹುದು. ಗ್ರಾಮೀಣ ವರದಿಗಾರರಲ್ಲಿ ದೂರ ಮತ್ತು ಸೂಕ್ಷ್ಮ ದೃಷ್ಠಿ ಇದ್ದಲ್ಲಿ ದೇಶದ ಅನೇಕ ಸಮಸ್ಯೆಗಳ ಪರಿಹಾರಕ್ಕೆ ಜೀವ ತುಂಬಬಹುದು ಎಂದರು.
ಸಾನಿಧ್ಯ ವಹಿಸಿದ್ದ ಹಿರೇಮಠದ ವೀರೇಶ್ವರ ದೇವರು ಮಾತನಾಡಿ, ಎಲ್ಲ ವಿಷಯಗಳಲ್ಲಿ ಅಪಾರ ಪಾಂಡಿತ್ಯ ಪಡೆಯಲು ಪತ್ರಿಕಗಳು ಸಹಕಾರಿಯಾಗುತ್ತವೆ. ಸಾಮಾಜಿಕ ಜವಾಬ್ದಾರಿಯನ್ನು ಅರಿತು ಕೆಲಸ ಮಾಡುವ ಪತ್ರಿಕೆಗಳು ಅದೆಷ್ಟೇ ತಂತ್ರಜ್ಞಾನ ಮುಂದುರೆದರೂ ತನ್ನ ಅಭಿರುಚಿ ಕಳೆದುಕೊಳ್ಳುವುದಿಲ್ಲ. ಅಂದು ಇಂದು ಮುಂದೆ ಎಂದೆಂದಿಗೂ ಪತ್ರಿಕೆಗಳಲ್ಲಿ ಮಾತ್ರ ವಸ್ತುನಿಷ್ಠ ವರದಿ ಸಾಧ್ಯವಿದ್ದು, ಪತ್ರಿಕೆಗಳು ಉಳುವಿಗಾಗಿ ಸಾರ್ವಜನಿಕರು ಜಾಹೀರಾತು ನೀಡಿ ಸಹಕರಿಸಿ ಎಂದ ಅವರು ಡಿಜಿಟಲ್ ಯುಗದಲ್ಲಿಯೂ ಮುದ್ರಣ ಮಾದ್ಯಮವನ್ನು ಉಳಿಸಿ ಬೆಳೆಸುತ್ತಿರುವ ಕನ್ನಡ ನಾಡಿಗೆ ಸಾಹಿತ್ಯದ ಶಕ್ತಿ ಕೊಡುತ್ತಿರುವ ಗ್ರಾಮೀಣ ಪತ್ರಕರ್ತರಿಗೆ ಅನೇಕ ಸಮಸ್ಯೆಗಳು ಹೆಗಲೇರಿವೆ. ತೀರ್ವ ಸಮಸ್ಯೆಗಳಿದ್ದರೂ ಪತ್ರಿಕಾ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿರುವ ಗ್ರಾಮೀಣ ಪತ್ರಕರ್ತರ ಕೂಗಿಗೆ ಸರಕಾರ ಕಿವಿಗೊಡಬೇಕಿದೆ ಎಂದರು.
ಪ್ರಾಚಾರ್ಯ ಶಿವಾನಂದ ಹಾಲಳ್ಳಿ, ಗ್ರಾಪಂ ಅಧ್ಯಕ್ಷೆ ಭಾರತಿ ಲೋಕಂಡೆ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸಮಾಜಕ್ಕೆ ಚಿಕತ್ಸೆಯನ್ನು ಕೊಡುವಂತಹ ಕೆಲಸ ಪತ್ರಕರ್ತರಿಂದ ಆಗಬೇಕು, ಸತ್ಯದ ಮಾರ್ಗದಲ್ಲಿ ಪತ್ರಕರ್ತರು ಸಾಗಬೇಕು. ಇಂದಿನ ದಿನಮಾನಗಳಲ್ಲಿ
ಪತ್ರಿಕೋದ್ಯಮ ಮೊದಲಿನಂತೆ ಉಳಿದಿಲ್ಲ. ನಕಲಿ ಪತ್ರಕರ್ತರ ಹಾವಳಿಯೂ ಹೆಚ್ಚುತ್ತಿದೆ. ಪತ್ರಕರ್ತರ ಮೇಲೆ ಸಾಮಾಜಿಕ ಜವಾಬ್ದಾರಿ ಹೆಚ್ಚಿದೆ. ಪತ್ರಿಕೋದ್ಯಮ ಉಳಿಸಿ ಬೆಳೆಸುವ ಜವಾಬ್ದಾರಿ ಜನರ ಮೇಲೂ ಇದೆ. ವಸ್ತು ನಿಷ್ಟ ವರದಿ ಪ್ರಕಟಿಸುವಲ್ಲಿ ಇಂದಿಗೂ ಪತ್ರಿಕೆಗಳು ತಮ್ಮ ಸ್ಥಾನವನ್ನು ಹಿರಿದಾಗಿಸಿಕೊಂಡಿವೆ.