ವಿದ್ಯಾರ್ಥಿಗಳಿಗೆ ಬಸವರಾಜ ಬಯ್ಯಾನರವರು ಆಶಾಕಿರಣ
ಬೀದರ:ಜು.9: ಬಸವರಾಜ ಬಯ್ಯಾನವರು ಬಸವಕಲ್ಯಾಣದ ಬಸವೇಶ್ವರ ಐಟಿಐ ಕಾಲೇಜಿನಲ್ಲಿ ಅಧ್ಯಾಪಕರಾಗಿ 28 ವರ್ಷ ಯಾವುದೇ ಕಪ್ಪು ಚುಕ್ಕೆಯಿಲ್ಲದೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ್ದಾರೆ. ಕೈಗಾರಿಕಾ ಕಂಪನಿಗಳೊಂದಿಗೆ ನಿಕಟ ಸಂಪರ್ಕವನ್ನಿಟ್ಟುಕೊಂಡು ಸಾವಿರಾರು ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನವಿತ್ತು ಅವರಿಗೆ ಉದ್ಯೋಗ ದೊರಕುವಂತೆ ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆ ಸಂಸ್ಕಾರ ಕೂಡ ಕೊಟ್ಟಿದ್ದಾರೆ. ಎಷ್ಟೋ ಬಡ ವಿದ್ಯಾರ್ಥಿಗಳಿಗೆ ಆಪದ್ಬಾಂಧವರಾಗಿ, ಹಿತಚಿಂತಕರಾಗಿ ಅವರ ಶಿಕ್ಷಣಕ್ಕೆ ನೆರವಾಗಿದ್ದಾರೆ ಎಂದು ಬಸವೇಶ್ವರ ಐಟಿಐ ಕಾಲೇಜಿನ ಪ್ರಾಚಾರ್ಯರಾದ ಜ್ಞಾನರೆಡ್ಡಿ ಬೋಳಿಂಗೆರವರು ಹೇಳಿದರು. ಅವರು ಬಸವಕಲ್ಯಾಣ ತಾಲೂಕಿನ ಇಸ್ಲಾಂಪೂರ ಗ್ರಾಮದಲ್ಲಿ ಬಸವರಾಜ ಬಯ್ಯಾನರಿಗೆ ವಯೋನಿವೃತ್ತಿ ನಿಮಿತ್ತ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿ ಮಾತನಾಡಿದರು.
ಮುಂದುವರೆದು ಬಸವರರಾಜ ಬಯ್ಯಾನರವರು ವಿದ್ಯಾರ್ಥಿಗಳೊಂದಿಗೆ, ಅವರ ಪಾಲಕರೊಂದಿಗೆ ಉತ್ತಮ ಸ್ನೇಹವಿಟ್ಟುಕೊಂಡು ಅವರ ಕೌಟುಂಬಿಕ ಸಮಸ್ಯೆಗಳನ್ನು ಆಲಿಸಿ ಪರಿಹರಿಸಿದ್ದಾರೆ. ಇವತ್ತು ಜಿಲ್ಲೆಯಲ್ಲಿ ಬಸವಕಲ್ಯಾಣದ ಬಸವೇಶ್ವರ ಐಟಿಐ ಕಾಲೇಜಿಗೆ ಉತ್ತಮ ಹೆಸರಿದೆ. ಇದರ ಬೆಳವಣಿಗೆಗೆ ಬಸವರಾಜರ ಯೋಗದಾನ ಬಹಳಷ್ಟಿದೆ. ಈ ಕಾಲೇಜಿನಲ್ಲಿ ವಿದ್ಯಾರ್ಥಿ, ಪಾಲಕ, ಬೋಧಕ, ಆಡಳಿತವರ್ಗದವರ ಮಧ್ಯೆ ಕೌಟುಂಬಿಕ ವಾತಾವರಣ ನಿರ್ಮಾಣಗೊಳ್ಳಲು ಇವರು ಕಾರಣಕರ್ತರಾಗಿದ್ದಾರೆ. ಇವರ ಬೋಧನೆ, ಸಾಧನೆ ಸೇವೆ, ದಕ್ಷತೆ, ಆದರ್ಶವ್ಯಕ್ತಿತ್ವ ನೋಡಿ ಸಂಸ್ಥೆಯ ಆಡಳಿತ ಮಂಡಳಿಯವರು ಇವರಿಗೆ ಸಂಸ್ಥೆಯಲ್ಲಿ ಮುಂದುವರಿಸಲು ತೀರ್ಮಾನಿಸಿದ್ದಾರೆ. ಇವರ ಮುಂದುವರಿಕೆಗೆ ವಿದ್ಯಾರ್ಥಿ ಮತ್ತು ಪಾಲಕರ ಆಗ್ರಹವೂ ಇದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ ಸಾಹಿತಿ ರಮೇಶ ಪುಟ್ಟಾರವರು ಮಾತನಾಡುತ್ತಾ, ಬಸವರಾಜ ಬಯ್ಯಾನರವರು ಅಜಾತ ಶತ್ರುವಾಗಿದ್ದಾರೆ. ಇವರು ಕಾಲೇಜಿನ ಜೊತೆ ಊರಿನ ಅಭಿವೃದ್ಧಿಗೂ ಶ್ರಮಿಸಿದ್ದಾರೆ. ವಿದ್ಯಾರ್ಥಿಗಳ ಮತ್ತು ಊರಿನವರ ಪಾಲಿಗೆ ಬೆಸ್ಟ್ ಫ್ರೆಂಡ್, ಫಿಲಾಸಫರ್ ಮತ್ತು ಗೈಡ್ ಆಗಿದ್ದಾರೆ ಎಂದು ಹೇಳಿದರು. ಹಿರಿಯ ಶಿಕ್ಷಕರಾದ ಗುಂಡಪ್ಪ ಧುಂಪಾರವರು ಮಾತನಾಡುತ್ತಾ, ಇಂದಿನ ಶಿಕ್ಷಣ ಕ್ಷೇತ್ರ ವ್ಯಾಪಾರೀಕರಣವಾಗಿದೆ. ಉನ್ನತ ವ್ಯಾಸಾಂಗ ಬಡವರಿಗೆ ಕೈಗೆಟುಕದಂತಾಗಿದೆ. ಬಸವರಾಜರೆಡ್ಡಿಯವರು ಗುರು-ಶಿಷ್ಯ ಸಂಬಂಧ ಘನಿಷ್ಠಗೊಳಿಸಿದ್ದಾರೆ. ಸಂಸ್ಥೆ ಮತ್ತು ವಿದ್ಯಾರ್ಥಿಗಳ ಏಳಿಗೆಗೂ ಶ್ರಮಿಸಿದ್ದಾರೆ. ಇವರ ಶೈಕ್ಷಣಿಕ ಸೇವೆ ಗುರುತಿಸಿ ಸರ್ಕಾರ ರಾಜ್ಯ ಮಟ್ಟದ ಸೂಕ್ತ ಗೌರವ ನೀಡಬೇಕಾಗಿತ್ತು. ಊರವರು ಇವರÀ ಸೇವೆ, ಸಾಧನೆ ಗುರುತಿಸಿ ಹೃದ್ಯಾಂತವಾಗಿ ಸನ್ಮಾನಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ಸನ್ಮಾನ ಸ್ವೀಕರಿಸಿ ಬಸರಾಜ ಬಯ್ಯಾನರವರು ಮಾತನಾಡುತ್ತಾ, ಜನನಿ ಜನ್ಮಭೂಮಿ ಸಂಬಂಧ ಅನ್ಯಾದೃಶ್ಯವಾಗಿರುತ್ತದೆ. ನನ್ನೂರಾದ ಇಸ್ಲಾಂಪೂರ ಗ್ರಾಮದ ಸನ್ಮಾನ ನನ್ನ ಸೇವೆಗೆ ವರಪ್ರದವಾಗಿದೆ. ನನ್ನ ಒಳ್ಳೆಯ ಕೆಲಸಗಳಿಗೆ ಇದು ಪ್ರೇರಣಾದಾಯಕವಾಗಿದೆ. ನಿವೃತ್ತಿ ನಂತರ ನನಗೆ ಇಂದು ಬಹಳಷ್ಟು ಗೌರವ ಪ್ರಾಪ್ತವಾಗುತ್ತಿದೆ. ಒಳ್ಳೆ ಕೆಲಸ ಕಾರ್ಯಗಳಿಗೆ ಸಮಾಜದಲ್ಲಿ ಯಾವತ್ತೂ ಗೌರವಾದರ ಹೆಚ್ಚಿಗಿರುತ್ತದೆ ಎಂಬುದು ಇದರಿಂದ ಮನದಟ್ಟಾಗುತ್ತದೆ. ನಾನು ಮುಂದೆಯೂ ರಚನಾತ್ಮಕ ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದರು.
ಮುಖ್ಯ ಶಿಕ್ಷಕಿಯಾದ ಶ್ರೀಮತಿ ಆಶಾ ಶ್ರೀನಿವಾಸರಡ್ಡಿಯವರು ಮಾತನಾಡುತ್ತಾ, ಮಧ್ಯದಲ್ಲಿ ಶಾಲೆ ಬಿಟ್ಟ ಬಹಳಷ್ಟು ವಿದ್ಯಾರ್ಥಿಗಳಿಗೆ ಮತ್ತು ಗೃಹಿಣಿಯರಿಗೆ ಇವರು ಮತ್ತೆ ಶಾಲೆ ಸೇರುವಂತೆ ಮಾಡಿದ್ದಾರೆ. ಗೃಹಿಣಿಯಾಗಿರಬೇಕಾದ್ದ ನಾನು ಇವರಿಂದಾಗಿಯೇ ಇಂದು ಮುಖ್ಯ ಶಿಕ್ಷಕಿಯಾಗಿ ನಿಮ್ಮ ಮುಂದಿದ್ದೇನೆ. ನನ್ನಂತೆ ಬಹಳಷ್ಟು ಜನ ಇವರಿಂದ ಮುಂದೆ ಬಂದಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ರುಕ್ಮೋದ್ದಿನ್ ಇಸ್ಲಾಂಪೂರರವರು ಮಾತನಾಡುತ್ತಾ, ಬಸವರಾಜ ಬಯ್ಯಾನರವರು ಇಸ್ಲಾಂಪೂರ ಗ್ರಾಮದ ಹೆಮ್ಮೆಯ ಸುಪುತ್ರರಾಗಿದ್ದಾರೆ. ಇವರಲ್ಲಿ ಅಗಾಧವಾದ ಜ್ಞಾನ ಸಂಪತ್ತಿದೆ. ಇವರು ಉತ್ತಮ ಸಮಾಲೋಚಕರೂ ಆಗಿದ್ದಾರೆ. ಅಧ್ಯಯನಶೀಲರಾಗಿದ್ದಾರೆ. ಪ್ರಖರ ಚಿಂತಕರೂ ವಾಗ್ಮಿಗಳೂ ಆಗಿದ್ದಾರೆ. ಇವರ ಸಕಾಲಿಕ ಮಾರ್ಗದರ್ಶನ ಮತ್ತು ಸಹಾಯದಿಂದಾಗಿ ಬಹಳಷ್ಟು ಬಡ ವಿದ್ಯಾರ್ಥಿಗಳು ಉನ್ನತ ಸ್ಥಾನಮಾನ ಸಂಪಾದಿಸಿದ್ದಾರೆ. ಇವರು ಉತ್ತಮ ಬರಹಗಾರರು ಮತ್ತು ಬೋಧಕರೂ ಆಗಿದ್ದಾರೆ. ಬಸವರಾಜರಡ್ಡಿಯವರಲ್ಲಿ ರಾಷ್ಟ್ರಪ್ರೇಮ, ಸಂಸ್ಕøತಿ ಪ್ರೇಮ, ಸಮಾಜಪ್ರೇಮ ಅಗಾಧವಾಗಿದೆ. ಇವರ ಬರಹಗಳು, ಚಿಂತನೆಗಳು, ಬೋಧನೆಗಳು ಪುಸ್ತಕ ರೂಪದಲ್ಲಿ ಹೊರಬರಲಿ ಮತ್ತು ಇವರಿಗೆ ರಾಜ್ಯ ರಾಷ್ಟ್ರ ಮಟ್ಟದ ಮನ್ನಣೆ ಪ್ರಾಪ್ತವಾಗಲಿ ಎಂದರು.
ಕಾರ್ಯಕ್ರಮದಲ್ಲಿ ನಾಗರಡ್ಡಿ ರಂಗಂಪಲ್ಲೆ, ವಿಠ್ಠಲರೆಡ್ಡಿ ಬೆಲಮಕುಂಡಾ, ಸುಭಾಸ ಬೆಲಮಕುಂಡಾ, ಪ್ರಭು ಕೌಡಾಳೆ, ಬಾಬು ಗೋಟೂರು, ರಾಮಚಂದ್ರ ಪೂಜಾರಿ, ಡಾ.ಅನೀಲ ಪೂಜಾರಿ, ಅನೀಲ ಚಾಂದೆ, ಮಾರುತಿ ಕೋಲೆ, ಶಿವರಾಜ ಧುಂಪಾ, ಆಕಾಶ ಸಿಂಗೆ ಮುಂತಾದವರು ಭಾಗವಹಿಸಿದರು