ಚಿನ್ನದ ಪದಕ ಮುಡಿಗೇರಿಸಿಕೊಂಡ ಗ್ಲೋಬಲ್ ಸೈನಿಕ ಅಕಾಡೆಮಿ ವಿದ್ಯಾರ್ಥಿ
ಬೀದರ್:ಜು.9: ಕರ್ನಾಟಕ ಸ್ಟೇಟ್ ರೈಫಲ್ ಅಸೋಸಿಯೇಷನ್ ಬೆಂಗಳೂರು ಇಂಡಿಯಾ ವತಿಯಿಂದ ಏರ್ಪಡಿಸಲಾದ ಕರ್ನಾಟಕ ರಾಜ್ಯ ಶೂಟಿಂಗ್ ಚಾಂಪಿಯನ್ ಶೀಪ್ ಸ್ಪರ್ಧೆಯಲ್ಲಿ ಗ್ಲೋಬಲ್ ಸೈನಿಕ ಅಕಾಡೆಮಿಯ ವಿದ್ಯಾರ್ಥಿ ವಿರೇಶ್ ಮಲ್ಲಿಕಾರ್ಜುನ ಜೂಜಾ ಅವರು ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕವನ್ನು ಗೆದ್ದಿರುತ್ತಾರೆ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಪ್ರಥಮ ಬಾರಿಗೆ ಶೂಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ಚರಿತ್ರೆ ನಿರ್ಮಿಸಿರುತ್ತಾರೆ.
ಗ್ಲೋಬಲ್ ಸೈನಿಕ ಅಕಾಡೆಮಿಯ ವಿರೇಶ್ ಮಲ್ಲಿಕಾರ್ಜುನ ಜೂಜಾ, ಸಮರ್ಥ ಖುಬಾ, ಸಾಯಿ ಕುಮಾರ್ ವಿದ್ಯಾರ್ಥಿಗಳ ತಂಡವು ರಾಜ್ಯಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ಒಳ್ಳೆಯ ಸಾಧನೆ ಮಾಡಿ 4 ನೇ ಸ್ಥಾನವನ್ನು ಪಡೆದಿದ್ದಾರೆ.ಹುಡುಗಿಯರ ತಂಡ ವಿಭಾ, ಅನುಷ್ಕಾ, ಸುಧೀಕ್ಷ ಉತ್ತಮ ಪ್ರದರ್ಶನ ತೋರಿರುತ್ತಾರೆ.ಮಕ್ಕಳ ಶ್ಲಾಘನಿಯ ಸಾಧನೆಯು ಬೀದರ ಜಿಲ್ಲೆಗೆ ಮಾತ್ರವಲ್ಲದೇ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಕೀರ್ತಿ ತಂದಿರುತ್ತದೆ, ಇದು ಗ್ಲೋಬಲ್ ಸೈನಿಕ ಅಕಾಡೆಮಿಗೆ ಹೆಮ್ಮೆಯ ವಿಷಯವಾಗಿದೆ .ಈ ಸಾಧನೆಯ ಮೂಲಕ ಗ್ಲೋಬಲ್ ಸೈನಿಕ ಅಕಾಡೆಮಿಯು ಇನ್ನೊಂದು ಗರಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.
ಮಕ್ಕಳ ಕಠಿಣ ಪರಿಶ್ರಮ, ಸತತ ಅಭ್ಯಾಸ ಮತ್ತು ಏಶಿಯಾಡ್ ಹಾಗೂ ಕಾಮನ್ ವೆಲ್ತ್ ಗೋಲ್ಡ್ ಮೆಡಲಿಸ್ಟ್ ಕ್ಯಾಪ್ಟನ್ ಪಲಂಗಪ್ಪಾ ಅವರ ಉತ್ತಮ ತರಬೇತಿ ಹಾಗೂ ಮಾರ್ಗದರ್ಶನದಿಂದ ಮಕ್ಕಳು ಈ ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ತನ್ನ ಕನಸನ್ನು ನನಸು ಮಾಡಿರುವ ವಿಜೇತ ಮಕ್ಕಳನ್ನು ಕಂಡು ಗ್ಲೋಬಲ್ ಸೈನಿಕ್ ಅಕಾಡೆಮಿಯ ಅಧ್ಯಕ್ಷರಾದ ಕರ್ನಲ್ ಶರಣಪ್ಪಾ ಸಿಕೇನ್ಪುರೆ ಅವರು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ವಿದ್ಯಾರ್ಥಿಗಳನ್ನು ಶೂಟಿಂಗ್ ಸ್ಪರ್ಧೆಗೆ ಸಿದ್ಧಗೊಳಿಸಿ ಹೆಚ್ಚಿನ ಸಾಧನೆ ಮಾಡುವಂತೆ ತರಬೇತಿ ನೀಡಲಾಗುವುದು ಹಾಗೂ ಬರುವ ದಿನಗಳಲ್ಲಿ ಸುಮಾರು 4-5 ವಿದ್ಯಾರ್ಥಿಗಳನ್ನಾದರೂ ರಾಷ್ಟ್ರಿಯ ಮಟ್ಟದ ಸ್ಪರ್ಧೆಗಳಿಗೆ ಅಣಿಗೊಳಿಸಿ ಉತ್ತಮ ಸಾಧನೆ ಮಾಡುವ ಗುರಿಯನ್ನು ಹೊಂದಿದ್ದೇವೆ ಎಂದು ತಿಳಿಸಿದರು.ವಿದ್ಯಾರ್ಥಿಗಳ ಸಾಧನೆಯನ್ನು ಶಾಲೆಯ ಮುಖ್ಯ ಶಿಕ್ಷಕಿ ಜ್ಯೋತಿ ರಾಗ , ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸ್ಪರ್ಧಾಳುಗಳಿಗೆ ಅಭಿನಂದನೆಗಳನ್ನು ಸಲ್ಲಿಸಿ ಹರ್ಷ ವ್ಯಕ್ತಪಡಿಸಿದರು.ಬೆಂಗಳೂರಿನಿಂದ ಬಂದ ಸ್ಪರ್ಧಾಳುಗಳಿಗೆ ಸಂಸ್ಥೆಯ ಅಧ್ಯಕ್ಷರು, ಮುಖ್ಯ ಗುರುಗಳು, ಪಾಲಕರು, ಶಿಕ್ಷಕರು ಎಲ್ಲ ಸಿಬ್ಬಂದಿ ವರ್ಗ ಆದರದ ಸ್ವಾಗತ ಕೋರಿ ಎಲ್ಲಾ ಸ್ಪರ್ಧಾಳುಗಳಿಗೆ ಹೂ ಮಾಲೆ ಹಾಕಿ ಭರ್ಜರಿಯಾಗಿ ಬರಮಾಡಿಕೊಂಡರು.