ಗಿಡ ಮರಗಳನ್ನು ಬೆಳಸುವದರಿಂದ ನೆಲ-ಜಲ ಸಂರಕ್ಷಿಣೆ
ಧಾರವಾಡ,ಜು.9: ಅರಣ್ಯ ಪ್ರದೇಶದಲ್ಲಿ ಪ್ರಾಣಿ, ಪಕ್ಷಿಗಳು ಯಾವುದೇ ವೈದ್ಯಕೀಯ ಉಪಚಾರ ವಿಲ್ಲದೇ ಆರೋಗ್ಯದಿಂದ ಬದಕುತ್ತವೆ, ಇದಕ್ಕೆ ಕಾರಣ ನಿಸರ್ಗ. ನಿಸರ್ಗದೊಂದಿಗೆ ನಮ್ಮ ಜೀವನವನ್ನು ಸಮ್ಮಿಳಿತ ಮಾಡಿದರೆ, ನಿಸರ್ಗ ರೋಗನಿರೋಧಕ ಶಕ್ತಿಯನ್ನು ಕೊಡುತ್ತದೆ. ಮರಗಳು ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವುದಲ್ಲದೇ ಮಣ್ಣಿನಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿಯನ್ನು ಹೆಚ್ಚಿಸುತ್ತವೆ ಎಂದು ನಿವೃತ್ತ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯಕುಮಾರ ಗೋಗಿ ಅವರು ಹೇಳಿದರು.
ಅವರು ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ) ಆವರಣದಲ್ಲಿ ಆಯೋಜಿಸಿದ ವನಮಹೋತ್ಸವ-2024 ಕಾರ್ಯಕ್ರಮವನ್ನು ಸಸಿಗಳನ್ನು ನೆಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು,
ಅಣೆಕಟ್ಟು ಪ್ರದೇಶದ ಮೇಲ್ಭಾಗದ ಪ್ರದೇಶದಲ್ಲಿ ಅರಣ್ಯದ ಮಹತ್ವ ಹೆಚ್ಚಾಗಿದೆ. ಮಳೆ ನೀರು ಹರಿದು ಬರುವ ಸಂದರ್ಭದಲ್ಲಿ ಮೇಲ್ಮಣ್ಣನ್ನೂ ಹೊತ್ತು ತರುವುದರಿಂದ ಅಣೆಕಟ್ಟೆಗಳಲ್ಲಿ ಹೂಳಿನ ಪ್ರಮಾಣ ಹೆಚ್ಚಾಗಿ ಯೋಜನೆಯ ಉದ್ದೇಶ ಈಡೇರುವುದಿಲ್ಲ. ಆದ್ದರಿಂದ ಹೆಚ್ಚು ಮರಗಿಡಗಳನ್ನು ನೆಡುವುದರ ಮೂಲಕ ನೀರಿನ ಹರಿವಿನ ವೇಗವನ್ನು ತಗ್ಗಿಸಿ ಭೂಮಿಯ ಸಂರಕ್ಷಣೆ ಮಾಡಬಹುದು. ವೃಕ್ಷಗಳು ಬರಿ ವೃಕ್ಷಗಳಲ್ಲ ಅವು ದೇವರು ಕೊಟ್ಟ ವರಗಳು. ಸೃಷ್ಟಿಯಲ್ಲಿನ ಎಲ್ಲ ಜೀವರಾಶಿಯ ಜೊತೆಗೆ ಸಹಭಾಳ್ವೆ ಮಾಡಬೇಕಾದರೆ ನಾವು ಬದುಕುವುದರ ಜೊತೆಗೆ ಇತರೆ ಜೀವಿಗಳು ಬದುಕಲು ಅವಕಾಶ ಮಾಡಿಕೊಡಬೇಕು. ಅದಕ್ಕಾಗಿ ಹೆಚ್ಚು ಹೆಚ್ಚು ಗಿಡ ಮರಗಳನ್ನು ಬೆಳೆಸಬೇಕು ಎಂದು ಅವರು ತಿಳಿಸಿದರು.
ಮನುಷ್ಯ ನಿಸರ್ಗದ ಜೊತೆ ಸಮೀಕರಣಗೊಂಡು ಬಾಳಬೇಕು. ಗಿಡಮರಗಳು ದೈವಸಮಾನವೆಂದು ನಮ್ಮ ಪೂರ್ವಜರು ಹೇಳಿದ್ದಾರೆ. ಆದರೆ ಮನುಷ್ಯ ಅಭಿವೃದ್ಧಿಯ ಪಥದಲ್ಲಿ ನಿಸರ್ಗಕ್ಕೆ ಸಾಕಷ್ಟು ಹಾನಿ ಮಾಡುತ್ತಿದ್ದಾನೆ. ಸಕಲ ಜೀವರಾಶಿಗಳಿಗೂ ನಿಸರ್ಗವೇ ಆಶ್ರಯತಾಣವೆಂದರು. ಪ್ರತಿಯೊಬ್ಬರು ಪ್ರತಿವರ್ಷ ಒಂದು ಗಿಡ ನೆಟ್ಟು ಪೋಷಿಸುವುದು ಇಂದಿನ ಅನಿವಾರ್ಯವಾಗಿದೆಯೆಂದರು.
ಧಾರವಾಡ ಪೀಠ ಕರ್ನಾಟಕ ಉಚ್ಛನ್ಯಾಯಾಲಯದ ಅಪರ ವಿಲೇಖನಾಧಿಕಾರಿ ಶಾಂತವೀರ ಶಿವಪ್ಪ ಅವರು ಮಾತನಾಡಿ, ವನ್ಯ ಸಂಪತ್ತಿನ ರಕ್ಷಣೆ ಕೇವಲ ಇಲಾಖೆಯ ಕಾರ್ಯವಲ್ಲ. ಪ್ರತಿಯೊಬ್ಬ ನಾಗರೀಕರು ಗಿಡಗಳನ್ನು ನೆಡುವುದರ ಜೊತೆಗೆ ಸಂಕರಕ್ಷಣೆ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ವಾಲ್ಮಿ ಸಂಸ್ಥೆಯ ನಿರ್ದೇಶಕ ಡಾ. ರಾಜೇಂದ್ರ ಪೋದ್ದಾರ ಅವರು ಮಾತನಾಡಿ, ಜಾಗತೀಕರಣ, ವಾಣಿಜ್ಯೀಕರಣ ಮತ್ತು ನವ ಉದಾರೀಕರಣ, ಅರ್ಥಶಾಸ್ತ್ರ ಸಿದ್ಧಾಂತ ಅಡಿಯಲ್ಲಿ ಲಾಭವೇ ಸರ್ವಸ್ವ ಆಗಿರುವಾಗ ವ್ಯೆಯಕ್ತಿಕ ಲಾಭಕ್ಕಾಗಿ ನೈಸರ್ಗಿಕ ಸಂಪನ್ಮೂಲಗಳ ಹನನವಾಗುತ್ತಿದೆ. ಭಾರತ ಸಾವಿರಾರು ವರ್ಷಗಳಿಂದ ತನ್ನದೇ ಆದ ಸುಸ್ಥಿರ ಅರ್ಥಶಾಸ್ತ್ರದ ಸಿದ್ದಾಂತಗಳನ್ನು ಮೈಗೂಡಿಸಿಕೊಂಡಿದೆ. ಭಕ್ತಿ ಪರಂಪರೆ, ವಚನ ಪರಂಪರೆಗಳ ಆಧಾರದ ಮೇಲೆ ನಿಸರ್ಗದ ಸಂಪನ್ಮೂಲಗಳ ಸಂರಕ್ಷಣೆಯನ್ನು ಸಾಧಿಸಲಾಗುತ್ತಿತ್ತು. ಇದೀಗ ಪಾಶ್ಚಿಮಾತ್ಯ ಸಂಸ್ಕøತಿಯ ಪ್ರಭಾವದಿಂದ ಲಾಭಕೋರತನ ಮತ್ತು ಕೊಳ್ಳುಬಾಕತನ ಹೆಚ್ಚಾಗುತ್ತಿರುವುದು ವನ್ಯ ಸಂಪನ್ಮೂಲದ ನಾಶಕ್ಕೆ ಕಾರಣವಾಗುತ್ತಿದೆ. ಇದನ್ನು ತಡೆಗಟ್ಟು ಜಾಗೃತಿ ಹಾಗೂ ಅನುಷ್ಠಾನ ಅವಶ್ಯಕವಾಗಿದೆ ಎಂದು ತಿಳಿಸಿದರು.
ಭಾರತೀಯರು ನಿಸರ್ಗವನ್ನು ಭೂತಾಯಿಯನ್ನು ದೈವತ್ವಕ್ಕೆ ಹೋಲಿಸಿ ನಿಸರ್ಗಕ್ಕನುಗುಣವಾಗಿ ಸುಸ್ಥಿರ ಜೀವನ ನಡೆಸುತ್ತಿದ್ದರು. ಈಗ ನಾವು ಸುಸ್ಥಿರ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟು ನೆಲ-ಜಲ ನಿಸರ್ಗದ ಕುರಿತು ಚಿಂತನ ಮಂತನ ಮಾಡುವ ಅಗತ್ಯವಿದೆಯೆಂದರು. ನವ ಉದಾರೀಕರಣ, ಅರ್ಥಶಾಸ್ತ್ರದಿಂದ ಪಾಶ್ಚಾತ್ಯ ರಾಷ್ಟ್ರಗಳು, ನೈಸರ್ಗಿಕ ಮೂಲಗಳನ್ನು ಖಾಲಿ ಮಾಡುತ್ತಿದೆ. ಭಾರತೀಯ ಅರ್ಥಶಾಸ್ತ್ರ ಸುಸ್ಥಿರ ಅಭಿವೃದ್ಧಿಗೆ ಮಹತ್ವ ನೀಡಿದೆಯೆಂದರು.
ವಲಯ ಅರಣ್ಯ ಸಂರಕ್ಷಣಾಧಿಕಾರಿಪ್ರದೀಪ ಪವಾರ, ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯದ ನಿರ್ದೇಶಕ ಡಾ. ಮಂಜುನಾಥ ಘಾಟೆ, ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರು ಮತ್ತು ಜಲ ಸಂಪನ್ಮೂಲ ಇಲಾಖೆಯ ಅಭಿಯಂತರರು ಮತ್ತು ವಾಲ್ಮಿ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.