ಬೆಳೆಗೆ ರೋಗಬಾಧೆ
ಲಕ್ಷ್ಮೇಶ್ವರ:- ತಾಲೂಕಿನ ರೈತರ ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳಲ್ಲಿ ಒಂದಾದ ಹೆಸರು ಬೆಳೆಗೆ ಈಗ ಅಲ್ಲಲ್ಲಿ ರೋಗಗಳು ಕಾಣತೊಡಗಿವೆ.
ರೈತರು ಮಳೆಯ ಕೊರತೆಯ ಮಧ್ಯೆಯು ಮಹದಾಶೆಯಿಂದ ಬಿತ್ತನೆ ಮಾಡಿರುವ ಹೆಸರು ಮತ್ತು ಗೋವಿನ ಜೋಳಕ್ಕೆ ಕೀಟ ಮತ್ತು ರೋಗ ಬಾಧೆಗಳು ಕಂಡುಬರುತ್ತವೆ.
ತಾಲೂಕಿನ ಯಳವತ್ತಿ ಮಾಗಡಿ ಮಧ್ಯದ ರೈತರ ಜಮೀನ್ ಒಂದರಲ್ಲಿ ಹೆಸರು ಬೆಳೆಗೆ ಹಳದಿ ರೋಗ ಕಂಡು ಬಂದಿದೆ ಈಗ ರೈತರು ಚಿಂತಕ್ರಾಂತರಾಗಿದ್ದು, ಜಮೀನಿನಲ್ಲಿನ ಎಲ್ಲಾ ಬೆಳೆಗೂ ಈ ಸಾಂಕ್ರಾಮಿಕ ರೋಗ ಹಬ್ಬಿ ಕಾಯಿಗಳು ಸಹ ಹಳದಿಯಾಗಿ ಕಳಪೆ ಮಟ್ಟದ ಹೆಸರು ಬರುವ ಸಾಧ್ಯತೆ ಇದೆ.
ಕೃಷಿ ಇಲಾಖೆಯ ಮೂಲಗಳಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ ತಾಲೂಕಿನಲ್ಲಿ 4,000 ಹೆಕ್ಟರ್ ಹೆಸರು ಬೆಳೆ ಗುರಿ ನಿಗದಿಪಡಿಸಲಾಗಿತ್ತು. ಆದರೆ ವಾಸ್ತವದಲ್ಲಿ ಹೆಸರು ಬೆಳೆ ಹತ್ತಾರು ಸಾವಿರ ಹೆಕ್ಟೇರಿನಲ್ಲಿ ರೈತರು ಬಿತ್ತನೆ ಮಾಡಿದ್ದಾರೆ. ನಂತರದ ಸ್ಥಾನ ಮೆಕ್ಕೆಜೋಳಕ್ಕೆ ಸುಮಾರು 10,000 ಹೆಕ್ಟರ್ ಬಿತ್ತನೆ ಗುರಿ ಹೊಂದಲಾಗಿತ್ತು. ಇದು ಸಹ ಗುರಿಮೀರಿ ಬಿತ್ತನೆಯಾಗಿರುವ ಸಾಧ್ಯತೆ ಇದೆ.
ಒಟ್ಟಾರೆ ಸದ್ಯ ಕಾಣಿಸಿಕೊಂಡಿರುವ ಹೆಸರುಬೇಳೆಯೇ ಹಳದಿ ರೋಗ ಉಲ್ಬಣಗೊಂಡರೆ ರೈತರು ಹೆಸರು ಬೆಳೆಯ ಇಳುವರಿ ಸಹ ಕಡಿಮೆಯಾಗಲಿದೆ.
ಈ ಕುರಿತು ಕೃಷಿ ಇಲಾಖೆಯ ಸಹಾಯಕ ಕೃಷಿ ಅಧಿಕಾರಿ ಚಂದ್ರಶೇಖರ ಗೌಡ ನರಸಮ್ಮನವರ ಪ್ರತಿಕ್ರಿಯೆ ನೀಡಿ, ಹೆಸರುಬೆಳೆಗೆ ಕಾಣಿಸಿಕೊಂಡಿರುವ ಹಳದಿ ರೋಗದ ಭಾದೆಯಿಂದ ಉಂಟಾಗಿರುವ ಬಳ್ಳಿಗಳನ್ನು ಕೂಡಲೇ ತೆಗೆದುಹಾಕಿ ಭೂಮಿಯಲ್ಲಿ ಗುಂಡಿ ತೋಡಿ ಮುಚ್ಚಬೇಕು, ಏಕೆಂದರೆ ಇದೊಂದು ಸಾಂಕ್ರಾಮಿಕ ರೋಗವಾಗಿದ್ದು ರೈತರು ಹೆಸರು ಜಮೀನಿನಲ್ಲಿ ಕಂಡುಬಂದಿರುವ ಇಂತಹ ಬೆಳೆಗಳನ್ನು ಕೂಡಲೇ ತೆಗೆದು ಹಾಕಬೇಕು ಎಂದರು.