ಎಫ್‍ಟಿಕೆ ಕಿಟ್ ಮೂಲಕ ನೀರಿನ ಮಾದರಿ ಪರೀಕ್ಷಿಸುವ ವಿಧಾನ ಕುರಿತ ತರಬೇತಿ
ಸಂಜೆವಾಣಿ ವಾರ್ತೆ,
ವಿಜಯಪುರ,ಜು.9:ಜಿಲ್ಲಾ ಪಂಚಾಯತಿ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇವರ ಸಹಯೋಗದಲ್ಲಿ ಶನಿವಾರ ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ಒಂಭತ್ತು ನಿಯತಾಂಕಗಳ ಮೂಲಕ ನೀರಿನ ಮಾದರಿ ಎಫ್‍ಟಿಕೆ ಕಿಟ್ ಮೂಲಕ ಪರೀಕ್ಷಿಸುವ ವಿಧಾನದ ಕುರಿತ ತರಬೇತಿ ಜರುಗಿತು.
ಶುದ್ಧ ಕುಡಿಯುವ ನೀರಿನ ಮಾದರಿಯನ್ನು ಪ್ರಾಥಮಿಕ ಹಂತದಲ್ಲಿ ಗ್ರಾಮ ಪಂಚಾಯತಿಗಳಿಗೆ ಈಗಾಗಲೇ ನೀಡಲಾದ ಎಫ್‍ಟಿಕೆ ಕಿಟ್ ಮೂಲಕ ಪರೀಕ್ಷೆ ಮಾಡುವ ವಿಧಾನದ ಕುರಿತು ಜಿಲ್ಲೆಯ ಎಲ್ಲ ತಾಲೂಕಿನ ಕಾರ್ಯ ನಿರ್ವಾಹಕ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮವನ್ನು ಎರಡು ಹಂತದಲ್ಲಿ ಆಯೋಜಿಸಲಾಗಿತ್ತು.
ಜಿಲ್ಲಾ ಪಂಚಾಯತಿಯ ಉಪ ಕಾರ್ಯದರ್ಶಿ ವಿಜಯ ಅಜೂರ ಅವರು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕುಡಿಯುವ ನೀರನ್ನು ವ್ಯರ್ಥ ಮಾಡಬಾರದು. ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದ ನೀರು ಪೂರೈಕೆ ಪೈಪ್‍ಲೈನ್ ಮಾರ್ಗ ಸರಿಯಾಗಿರುವ ಬಗ್ಗೆ ನಿರಂತರ ಖಾತರಿಪಡಿಸಿಕೊಳ್ಳಬೇಕು. ದುರಸ್ತಿ ಕಾರ್ಯಗಳಿದ್ದರೆÀ ಆದ್ಯತೆಯ ಮೇರೆಗೆ ತೆಗೆದುಕೊಳ್ಳಬೇಕು. ವಿಳಂಬ ಮಾಡಕೂಡದು. ಜಲ ಮೂಲಗಳ ಹತ್ತಿರ ನೀರು ಒಂದೆಡೆ ಸಂಗ್ರಹ ಆಗದಂತೆ ಸ್ವಚ್ಛತೆ ಕಾಪಾಡಿಕೊಳ್ಳವುದು ಗ್ರಾಮ ಪಂಚಾಯತಿಯ ಜವಾಬ್ದಾರಿಯಾಗಿದೆ ಎಂದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯ ನಿರ್ವಾಹಕ ಅಭಿಯಂತರ ಬಸವರಾಜ ಕುಂಬಾರ ಅವರು ಮಾತನಾಡಿ, ಕುಡಿಯುವ ನೀರು ಪರೀಕ್ಷೆ ಬಹು ಮುಖ್ಯವಾಗಿದ್ದು, ಕಲುಷಿತ ನೀರು ಪೂರೈಕೆಯಾಗದಂತೆ ಮುನ್ನೆಚ್ಚರಿಕಾ ಕ್ರಮ ವಹಿಸುವುದು ಅತಿ ಅವಶ್ಯವಾಗಿದೆ. ಗ್ರಾಮ ಪಂಚಾಯತಿಯಡಿ ಬರುವ ಜಲ ಮೂಲಗಳನ್ನು ನಿಯಮಿತವಾಗಿ ಹಾಗೂ ಕಡ್ಡಾಯವಾಗಿ ಪರೀಕ್ಷಿಸಬೇಕು ಎಂದು ತಿಳಿಸಿದರು.
ಹಿರಿಯ ವಿಶ್ಲೇಷಕರು, ಪ್ರಯೋಗಾಲಯದ ಸಿಬ್ಬಂದಿ ಹಾಜರಿದ್ದು ಎಲ್ಲ ತಾಲೂಕಿನ ಪಂಚಾಯತ ಅಭಿವೃಧ್ಧಿ ಅಧಿಕಾರಿಗಳಿಗೆ ಒಂಭತ್ತು ನಿಯತಾಂಕಗಳ ಬಗ್ಗೆ ವಿವರವಾದ ತರಬೇತಿ ನಡೆಸಿಕೊಟ್ಟರು.
ಈ ಸಂದರ್ಭ ಜಿಲ್ಲಾ ಪಂಚಾಯತಿಯ ಸಹಾಯಕ ಯೋಜನಾಧಿಕಾರಿ ಅರುಣಕುಮಾರ ದಳವಾಯಿ ಸೇರಿದಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.