ಗುಳೇದಗುಡ್ಡದಲ್ಲಿ ಜಗನ್ನಾಥಸ್ವಾಮಿ ರಥೋತ್ಸವ
ಗುಳೇದಗುಡ್ಡ,ಜು9: ಓಡಿಸ್ಸಾ ರಾಜ್ಯದ ವಿಶ್ವವಿಖ್ಯಾತ ಪುರಿ ಜಗನ್ನಾಥ ರಥೋತ್ಸವ ಕಣ್ಮುಂಬಿಕೊಳ್ಳಲು ದೇಶದ ನಾನಾ ಭಾಗಗಳಿಂದ ಲಕ್ಷಾಂತರ ಜನರು ಪುರಿಗೆ ತೆರಳುತ್ತಾರೆ. ಆದರೆ ಕರ್ನಾಟದ ಬಾಗಲಕೋಟ ಜಿಲ್ಲೆಯ ಗುಳೇದಗುಡ್ಡದಲ್ಲಿಯೇ ಜಗನ್ನಾಥಸ್ವಾಮಿ ದೇವರ ರಥೋತ್ಸವ ನಡೆಯುತ್ತಿರುವುದು ವಿಶೇಷ.
ಹೌದು ಗುಳೇದಗುಡ್ಡದಲ್ಲಿನ ಮಾರವಾಡಿ ಸಮಾಜದ ಜಗದೀಶ ಮಂದಿರದ ಜಗನ್ನಾಥ ದೇವರ ರಥೋತ್ಸವ ಪುರಿ ಜಗನ್ನಾಥ ದೇವರ ರಥೋತ್ಸವದಂದೇ ನಡೆಯುತ್ತದೆ. ಮಾರವಾಡಿ ಸಮಾಜದವರು ಜಗನ್ನಾಥ ದೇವರ ಭಕ್ತರು. ಪಟ್ಟಣದಲ್ಲಿ ಸಾಕಷ್ಟು ಜನರು ಮಾರವಾಡಿ ಸಮಾಜದ ಜನರಿದ್ದು, ಇಲ್ಲಿ ವ್ಯಾಪಾರ ವಹಿವಾಟಿನಲ್ಲಿ ತೊಡಗಿಕೊಂಡಿದ್ದಾರೆ. ಇಲ್ಲಿನ ಮಾರವಾಡಿ ಸಮಾಜದ ಜನರು ದೂರದ ಓಡಿಸ್ಸಾರಾಜ್ಯದ ಪುರಿಗೆ ಹೋಗುವ ಬದಲು, ಗುಳೇದಗುಡ್ಡ ಪಟ್ಟಣದಲ್ಲಿಯೇ 120 ವರ್ಷಗಳ ಹಿಂದೆಯೇ ಪುರಿ ಜಗನ್ನಾಥ ಮಂದಿರವನ್ನು ನಿರ್ಮಿಸಿ, ಜಗನ್ನಾಥ ದೇವರನ್ನು ಪ್ರತಿಷ್ಠಾಪಿಸಿದರು. ಪುರಿ ಜಗನ್ನಾಥಸ್ವಾಮಿ ರಥೋತ್ಸವ ನಡೆಯವ ದಿನದಂದೇ ಇಲ್ಲಿ ರಥೋತ್ಸವ ನಡೆಯುತ್ತದೆ.
ಭಾನುವಾರ ಬೆಳಿಗ್ಗೆ ಶ್ರೀ ಜಗನ್ನಾಥಸ್ವಾಮಿ ದೇವರ ಮಹಾರಥೋತ್ಸವ ಪಟ್ಟಣದ ಜಗದೀಶ ದೇವಸ್ಥಾನದಿಂದ ಆರಂಭಗೊಂಡು ಅರಳಿಕಟ್ಟಿ, ಪುರಸಭೆ, ಕಾಬ್ರಾ ಓಣಿ, ಸರಾಫ ಬಜಾರ, ಕಂಠಿಪೇಟೆ, ಚೌಬಜಾರ ಮೂಲಕ ಹಾದು ಮರಳಿ ಜಗದೀಶ ದೇವಸ್ಥಾನ ತಲುಪಿತು. ಜಗನ್ನಾಥಸ್ವಾಮಿ ದೇವರ ರಥೋತ್ಸವದ ನಿಮಿತ್ತ ದೇವರಿಗೆ ವಿಶೇಷ ಅಲಂಕಾರ, ಪೂಜೆ ನೆರವೇರಿಸಲಾಯಿತು. ಸಂಜೆ ವಿಶೇಷ ಅಟಕಾ ಪೂಜೆ ನಡೆಯಿತು.
ರಥೋತ್ಸವದಲ್ಲಿ ನಾಸಿಕ, ಇಚ್ಚಲಕರಂಜಿ, ಇಳಕಲ್ಲ, ರಾಯಚೂರ, ಪುಣೆ, ಸೋಲ್ಲಾಪೂರ, ಪಂಡರಾಪೂರ, ಬಾಗಲಕೋಟ, ಮಹಾರಾಷ್ಟ್ರ, ಸೂರತ ಸೇರಿದಂತೆ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದರು.
ಜಗನ್ನಾಥಸ್ವಾಮಿ ದೇವರ ರಥೋತ್ಸವದಲ್ಲಿ ಮಾರವಾಡಿ ಸಮಾಜದ ಯುವಕ ಮಿತ್ರರು ಭಕ್ತಿ ಗೀತೆಗಳನ್ನು ಹಾಡಿದರೆ ಸಮಾಜದ ಮಹಿಳೆಯರು, ಯುವತಿಯರು ಭಕ್ತಿ ಗೀತೆಗಳಿಗೆ ಸಾಂಪ್ರದಾಯಿಕ ನೃತ್ಯ ಮಾಡಿ ಸಂಭ್ರಮಿಸಿ ಭಕ್ತಿ ಮೆರೆದರು. ಯುವಕ ಮಂಡಳದಿಂದ ಭಜನೆ ನಡೆಯಿತು.
ರಥಯಾತ್ರೆಯಲ್ಲಿ ಶ್ರೀ ಜಗದೀಶ ದೇವಸ್ಥಾನದ ಅರ್ಚಕರಾದ ಜಗದೀಶ ಪುರೋಹಿತ, ಶ್ಯಾಮಜೀ ಪುರೋಹಿತ, ದೇವಸ್ಥಾನ ಟ್ರಸ್ಟನ ನಾರಾಯಣದಾಸ ಮುಂದಡಾ, ಕಿಸನಗೋಪಾಲ ಸೋನಿ, ಸೂರಜ್ ಧರಕ, ಘನಶ್ಯಾಮದಾಸ ರಾಠಿ, ಕಮಲಕಿಶೋರ ಮಾಲಪಾಣಿ, ಸತ್ಯನಾರಾಯಣ ರಾಠಿ, ಬಂಕಟ ಝಂವರ, ಘನಶ್ಯಾಮದಾಸ ಇನಾನಿ, ಗೋಪಾಲ ಭಟ್ಟಡ, ಸುರೇಶ ಇನಾಣಿ, ವೇದಗೋಪಾಲ ಸೋನಿ, ಅಶೋಕ ಕಾಬ್ರಾ, ಮುರಳಿ ತಿವಾರಿ, ಸಂಪತಕುಮಾರ ರಾಠಿ, ಶ್ರೀಕಾಂತ ಸೋನಿ, ರಾಧೇಶ್ಯಾಮ ಮುಂದಡಾ, ಗೋಪಾಲ ಮಾಲಪಾಣಿ, ದಾಮು ಮಾಲಪಾಣಿ, ಗೋವಿಂದ ಬೂತಡಾ, ಜುಗಲ್ ಮರ್ದಾ, ಜುಗಲ್ ವರ್ಮಾ, ಜಗದೀಶ ರಾಠಿ, ಆನಂದ ಕಾಬ್ರಾ ಮತ್ತಿತರರು ಇದ್ದರು.