ನಿವೃತ್ತ ನೌಕರರಿಗೆ ಪಿಂಚಣಿ ನೀಡಲು ಒತ್ತಾಯ
ಸಂಜೆವಾಣಿ ನ್ಯೂಸ್
ಮೈಸೂರು: ಜು.09:- ನಿವೃತ್ತ ನೌಕರರಿಗೆ ಪಿಂಚಣಿ ನೀಡಲು ಸತಾಯಿಸಿ ಕೇಂದ್ರ ಸರ್ಕಾರ ಮತ್ತು ಭವಿಷ್ಯ ನಿಧಿ ಸಂಸ್ಥೆ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ಇಪಿಎಸ್ 95, ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಗಾಯತ್ರಿಪುರಂನ ಭವಿಷ್ಯ ನಿಧಿ ಕಚೇರಿ ಎದುರು ಜಮಾವಣೆಗೊಂಡ ಸಂಘದ ಸದಸ್ಯರು ವಿವಿಧ ಘೋಷಣೆಗಳನ್ನು ಕೂಗಿ ಕೇಂದ್ರ ಸರ್ಕಾರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಸರ್ವೋಚ್ಛ ನ್ಯಾಯಾಲಯ ಕಳೆದ ಎರಡು ವರ್ಷಗಳ ಹಿಂದೆಯೇ ನಿವೃತ್ತ ನೌಕರರಿಗೆ ಪಿಂಚಣಿ ನೀಡುವ ಸಂಬಂಧ ಸ್ಪಷ್ಟ ಆದೇಶ ಹೊರಡಿಸಿ ಅನುಷ್ಠಾನಗೊಳಿಸುವಂತೆ ಸೂಚನೆ ನೀಡಿದೆ. ಆದರೆ, ಕೇಂದ್ರ ಸರ್ಕಾರ ಮತ್ತು ಭವಿಷ್ಯ ನಿಧಿ ಸಂಸ್ಥೆಯ ಅಧಿಕಾರಿಗಳು ನ್ಯಾಯಾಲಯದ ಆದೇಶ ಗಾಳಿ ತೂರಿ ನಿವೃತ್ತ ನೌಕರರನ್ನು ವಂಚಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಪಿಂಚಣಿಯನ್ನೆ ನಂಬಿ ಬದುಕುತ್ತಿರುವ ಲಕ್ಷಾಂತರ ನಿವೃತ್ತ ನೌಕರರಿಗೆ ಪಿಂಚಣಿ ನೀಡಲು ನಿರಾಸಕ್ತಿ ತೋರುವುದರ ಜತೆಗೆ ನಿಮಯಗಳನ್ನು ಗೊಂದಲ ಮಾಡಿ ಅನ್ಯಾಯ ಮಾಡುತ್ತಿದ್ದಾರೆ. ಈ ಬಗ್ಗೆ ಕೂಡಲೇ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾರ್ಮಿಕ ಸಚಿವರು ಮದ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಬೇಡಿಕೆಗಳು: ಮಾಸಿಕ ಪಿಂಚಣಿ 9 ಸಾವಿರ ರೂ.ಪಿಂಚಣಿ ಜತೆಗೆ ಡಿಎ ನೀಡಬೇಕು. ನಿವೃತ್ತ ಪತಿ, ಪತ್ನಿ ಮರಣ ಹೊಂದಿದರೆ ಶೇಕಡಾ ನೂರರಷ್ಟು ಪಿಂಚಣಿ ನೀಡಬೇಕು. ಇಪಿಎಸ್ ನಿವೃತ್ತ ನೌಕರರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ಸೌಲಭ್ಯ ನೀಡಬೇಕು.
ಹಾಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕ ನೌಕರರಿಗೆ ವರ್ಷಕ್ಕೆ 15 ದಿನ ಗ್ರಾಚ್ಯುಯಿಟಿಯನ್ನು 20 ದಿನಕ್ಕೆ ಹೆಚ್ಚಿಸಬೇಕು. ಹಿಂದೆ ಇದ್ದಂತೆ ರೇಲ್ವೆ ಪ್ರಯಾಣ ದರದಲ್ಲಿ ರಿಯಾಯಿತಿ ನೀಡಬೇಕು. ದೇಶದ ಎಲ್ಲಾ ಕೈಗಾರಿಕೆಗಳಲ್ಲಿ ದುಡಿಯುವ ಅಸಂಘಟಿತ ಕಾರ್ಮಿಕರಿಗೆ ಮಾಸಿಕ 30000 ರೂ ವೇತನ ನೀಡಬೇಕು. ಇಪಿಎಫ್ ವ್ಯಾಪ್ತಿಗೆ ಒಳಪಡದ ನಿವೃತ್ತ ಕಾರ್ಮಿಕ ನೌಕರರಿಗೆ ಮಾಸಿಕ 5 ಸಾವಿರ ರೂ.ಪಿಂಚಣಿ ನೀಡಬೇಕು. 2022ರ ಸೃಪ್ರೀಂಕೋರ್ಟ್ ನ್ಯಾಯಪೀಠದ ತೀರ್ಪಿನಂತೆ ಸ್ವಯಂ ಗೊಂದಲ ಸೃಷ್ಟಿಸದೆ ಹೆಚ್ಚುವರಿ ಪಿಂಚಣಿ ನೀಡಬೇಕು. ಸೆಪ್ಟೆಂಬರ್ 2014 ನಂತರದ ನೌಕರರಿಗೆ ತ್ವರಿತ ಗತಿಯಲ್ಲಿ ಪಿಂಚಣಿ ನೀಡಬೇಕು.
ಇಪಿಎಸ್ 95 ಸಮನ್ವಯ ಸಮಿತಿ ನಾಗಪುರದ ರಾಷ್ಟ್ರೀಯ ಅಧ್ಯಕ್ಷ ಪ್ರಕಾಶ್ ಎಂಡೆ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಪಾಠಕ್, ಸದಸ್ಯ ಹಾಸನದ ರಾಮ ಭದ್ರಯ್ಯ, ಜಿಲ್ಲಾ ಸಮಿತಿಯ ಅಧ್ಯಕ್ಷ ಸ್ವಾಮಿಶೆಟ್ಟಿ, ಉಪಾಧ್ಯಕ್ಷ ನರಸಿಂಹರಾಜು, ಪ್ರಧಾನ ಕಾರ್ಯದರ್ಶಿ ಆರ್.ಜಿ.ಮೋಹನ್ ಕೃಷ್ಣ, ಜಂಟಿ ಕಾರ್ಯದರ್ಶಿ ವಿವೇಕಾನಂದ, ಖಜಾಂಚಿ ಎ.ಪಿ.ಶಿವಕುಮಾರ್ ಇನ್ನಿತರರು ಹಾಜರಿದ್ದರು.