ನಿವೇಶನ ಹಂಚಿಕೆಯಲ್ಲಿ ಸಿಎಂ ಪಾತ್ರವಿಲ್ಲ
ಸಂಜೆವಾಣಿ ನ್ಯೂಸ್
ಮೈಸೂರು: ಜು.09:- ಮುಡಾದ 50:50 ಅನುಪಾತದ ನಿವೇಶನ ಹಂಚಿಕೆಯಲ್ಲಿ ಸಿಎಂ ಪಾತ್ರವಿಲ್ಲ. ಅನಗತ್ಯವಾಗಿ ಅವರ ಹೆಸರನ್ನು ಎಳೆದು ತರುತ್ತಿದ್ದಾರೆ. ತನಿಖೆಯಾಗಿ ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಎಂಡಿಎ ಅಧ್ಯಕ್ಷ ಕೆ. ಮರೀಗೌಡ ತಿಳಿಸಿದರು.
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 50:50 ಅನುಪಾತದಲ್ಲಿ ನಿವೇಶನ ಕೊಡುವುದಕ್ಕೆ ಗೆಜೆಟ್ ನೋಟಿಫಿಕೇಷನ್ ಆಗಿದೆ. 50:50 ಅನುಪಾತದಲ್ಲಿ ಪರಿಹಾರ ನೀಡುವುದಕ್ಕೂ ಆದೇಶ ಆಗಿದೆ ಎಂದರು.
ಸಿಎಂಗೆ ಕಡಿಮೆ ಪರಿಹಾರ ನೀಡಲಾಗಿದೆ: ಇಡೀ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬ ಕಾನೂನಾತ್ಮಕವಾಗಿ ಇದೆ. ಮುಡಾ ವತಿಯಿಂದ ಸಿಎಂ ಕುಟುಂಬಕ್ಕೆ 75 ಸಾವಿರ ಚದರ ಅಡಿ ಜಾಗ ಕೊಡಬೇಕಿತ್ತು. ಆದರೆ ಕೊಟ್ಟಿರುವುದು ಕೇವಲ 38 ಸಾವಿರ ಚದರ ಅಡಿಯಾದರೂ ನಮ್ಮ ನಾಯಕರು ಅಷ್ಟಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಹಿನಕಲ್ ಸರ್ವೆ ನಂ.211ರಲ್ಲಿ 3.05 ಗುಂಟೆ ಜಮೀನು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 1981ರಲ್ಲಿ ಭೂ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆದರೆ, 1984ರಲ್ಲಿ ಕೈ ಬಿಡಲಾಯಿತು. ಅದಕ್ಕೆ 2024ರ ಜೂ.12ರಂದು ಪರಿಹಾರ ಕೊಟ್ಟಿದ್ದರು. ಒಟ್ಟು 36,753 ಚದರ ಅಡಿಗೆ ಪರಿಹಾರ ಕೊಡಲಾಗಿತ್ತು. ಇದಕ್ಕಾಗಿ ವಿಜಯನಗರದ ವಿವಿಧ ಬಡಾವಣೆಗಳಲ್ಲಿ 20 ನಿವೇಶನ ಕೊಟ್ಟು ಆದೇಶಿಸಲಾಗಿತ್ತು. ಈಗ ಆ ಆದೇಶಕ್ಕೂ ತಡೆ ಬಿದ್ದಿದೆ ಎಂದು ಅವರು ಹೇಳಿದರು.
2015ರಲ್ಲಿ ಗೆಜೆಟ್ ನೋಟಿಫಿಕೇಷನ್ ಆಗಿ, 60:40 ಅನುಪಾತದಲ್ಲಿ ನೀಡಬೇಕು ಎಂದು ಆದೇಶ ಆಗಿತ್ತು. ಇದಾದ ಬಳಿಕ 2020ರಲ್ಲಿ 50:50 ಅನುಪಾತದಲ್ಲಿ ನಿವೇಶನ ನೀಡುವುದಕ್ಕೆ ಪ್ರಾಧಿಕಾರದ ನಿರ್ಣಯವಾಗಿದೆ ಎಂದು ತಿಳಿಸಿದರು.
ಬದಲಿ ನಿವೇಶನ ಪಡೆದವರಲ್ಲಿ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಕೂಡ ಒಬ್ಬರು. ಅವರ ಪತ್ನಿ ಶಾಂತಮ್ಮ ಹೆಸರಿನಲ್ಲಿ 2017ರಲ್ಲಿ 60*40 ಅಳತೆಯ ಬದಲಿ ನಿವೇಶನ ಪಡೆದಿದ್ದಾರೆ ಎಂದರು.
ಸಿಎಂ ಸಿದ್ದರಾಮಯ್ಯ ಆಪ್ತ ಹಿನಕಲ್ ಪಾಪಣ್ಣಗೆ ಮುಡಾದಲ್ಲಿ ಬದಲಿ ನಿವೇಶನ ಹಂಚಿಕೆ ಮಾಡಲಾಗಿದೆ ಎಂಬ ಆರೋಪವಿದೆ. ಇದನ್ನೂ ತಡೆ ಹಿಡಿಯಲಾಗಿದೆ. ಈ ಮೊದಲು ನ್ಯಾಯಾಲಯದ ಆದೇಶದಂತೆ ಬದಲಿ ನಿವೇಶನ ಹಂಚಿಕೆ ಆಗಿತ್ತು. ಹಂಚಿಕೆ ವೇಳೆ ತಪ್ಪಾಗಿದೆ ಎಂದು ಗೊತ್ತಾಗಿ, ಈಗ ಅದನ್ನೂ ತಡೆ ಹಿಡಿಯಲಾಗಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಕೆ.ಹರೀಶ್ ಗೌಡ, ರಮೇಶ್ ಬಂಡಿಸಿದ್ದೇಗೌಡ, ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಸೇರಿದಂತೆ ಹಲವರು ಇದ್ದರು.