ಶ್ರೀ ನೀಲಕಂಠೇಶ್ವರ ವಿದ್ಯಾಸಂಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣ: ಶಾಸಕರ ಮೆಚ್ಚುಗೆ
ಸಂಜೆವಾಣಿ ವಾರ್ತೆ
ನಂಜನಗೂಡು:ಜು.09: ತಾಲ್ಲೂಕಿನ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ಶ್ರೀ ನೀಲಕಂಠೇಶ್ವರ ವಿದ್ಯಾಸಂಸ್ಥೆಯು ಗುಣಮಟ್ಟದ ಶಿಕ್ಷಣವನ್ನು ನೀಡಿ ಪ್ರತಿಭಾವಂತರನ್ನು ಸಮಾಜಕ್ಕೆ ನೀಡುತ್ತಿರುವುದರ ಬಗ್ಗೆ ಶಾಸಕ ದರ್ಶನ್ ಧ್ರುವನಾರಾಯಣ್ ಸಂಸ್ಥೆಯ ಕಾರ್ಯಸಾಧನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅವರು ಇಂದು ಶ್ರೀ ನೀಲಕಂಠೇಶ್ವರ ವಿದ್ಯಾಸಂಸ್ಥೆಯಲ್ಲಿ ನಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಮಂತ್ರಿ ಮಂಡಲ ರಚನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಎಸ್‍ಎಸ್‍ಎಲ್‍ಸಿ ಪರೀಕ್ಷೇಯಲ್ಲಿ ಇಲ್ಲಿನ ವಿದ್ಯಾರ್ಥಿಗಳು ಕೇವಲ 2 ವರ್ಷಗಳಲ್ಲಿ ಉತ್ತಮ ಸಾಧನೆ ಮಾಡಿ ಜಿಲ್ಲಾ ಮಟ್ಟದ ಗಮನ ಸೆಳೆದಿರುವುದಕ್ಕೆ ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಗಳನ್ನು ಪ್ರಶಂಶಿಸಿದರು. ಭಾರತ ದೇಶದ ಸಂವಿಧಾನಕ್ಕೆ ಗೌರವ ಕೊಡುವಂತಹ ಮಂತ್ರಿ ಮಂಡಲ ರಚನೆಯಂತಹ ಕಾರ್ಯಕ್ರಮವನ್ನು ಇಲ್ಲಿ ಆಯೋಜಿಸಿರುವುದು ಒಂದು ಉತ್ತಮವಾದ ಪ್ರಕ್ರಿಯೆ ಎಂದ ಅವರು ಮಂತ್ರಿ ಮಂಡಲಕ್ಕೆ ಆಯ್ಕೆಯಾಗಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶುಭಾರೈಸಿದರು. ನಿಮಗೆ ವಹಿಸಿರುವ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಮಾರಂಭದಲ್ಲಿ ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಎಂ.ಎ.ಕುಮಾರಸ್ವಾಮಿ ರವರು ಮಾತನಾಡಿ, ಸಂಸ್ಥಾಪಕರಾದ ದಿ|| ಸೋಮಶೇಖರ್, ದಿ|| ಅಂಕಣ್ಣ, ದಿ|| ಬಿ.ವಿ.ಬಾಲಸುಬ್ರಮಣ್ಯಂ ನವರನ್ನು ಸ್ಮರಿಸಿಕೊಂಡ ಅವರು 1990 ರಲ್ಲಿ ಈ ಸಂಸ್ಥೆ ಪ್ರಾರಂಭಗೊಂಡಿದ್ದು, 180 ಮಕ್ಕಳಿಂದ 600 ಕ್ಕೂ ಹೆಚ್ಚು ಮಕ್ಕಳು ವಿದ್ಯಾರ್ಜನೆ ಮಾಡುತ್ತಿದ್ದು, 7ನೇ ತರಗತಿಯಿಂದ ಕಳೆದ 2 ವರ್ಷದಿಂದ 10ನೇ ತರಗತಿವರೆಗೆ ಪ್ರಾರಂಭಿಸಿದ್ದು, ಪ್ರಥಮ ವರ್ಷದಲ್ಲಿ ಎಸ್‍ಎಸ್‍ಎಲ್‍ಸಿ 30 ಮಕ್ಕಳು 98% ಫಲಿತಾಂಶ ಪಡೆದು 2ನೇ ವರ್ಷದಲ್ಲಿ 100 ಕ್ಕೆ 100% ವನ್ನು ಪಡೆದು ದಾಖಲೆ ಮಾಡಿರುವುದಾಗಿ ತಿಳಿಸಿದರು. ಶ್ರಮ ವಹಿಸಿದ ಶಿಕ್ಷಕ ವೃಂದವನ್ನು ಈ ಸಮಯದಲ್ಲಿ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಪ್ರೌಡಶಾಲೆಯ ಶಿಕ್ಷಕರಿಗೆ 10 ಸಾವಿರ ನಗದು ಬಹುಮಾನ, ಪ್ರೈಮರಿ ಶಾಲೆಯ ಶಿಕ್ಷಕರಿಗೆ 5 ಸಾವಿರ, ಡಿ-ಗ್ರೂಪ್ ನೌಕರರಿಗೆ 2 ಸಾವಿರ ನಗದು ಬಹುಮಾನಗಳನ್ನು ನೀಡಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ 1ನೇ ಸ್ಥಾನಕ್ಕೆ 5 ಸಾವಿರ, 2ನೇ ಸ್ಥಾನ 3 ಸಾವಿರ, 3ನೇ ಸ್ಥಾನ 2 ಸಾವಿರ, 4ನೇ ಸ್ಥಾನ ಪಡೆದವರಿಗೆ 1 ಸಾವಿರ ನೀಡಲಾಗಿದೆ. ಬಹುಮಾನ ಮತ್ತು ನೆನೆಪಿನ ಕಾಣಿಕೆಗಳನ್ನು ನೀಡಲಾಯಿತು.
ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಶಿಕ್ಷಕ ವೃಂದದವರಿಗೆ ಸರ್ಕಾರದ ಎಲ್ಲಾ ಸವಲತ್ತುಗಳನ್ನು ನೀಡುತ್ತಿದ್ದು, ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಮಧ್ಯಮ ವರ್ಗದ ವಿದ್ಯಾರ್ಥಿಗಳೇ ಅತಿಹೆಚ್ಚು ಇರುವುದು ವಿಶೇಷ ಎಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದ ಬಿಇಒ ಸುರೇಶ್ ರವರು ಮಾತನಾಡಿ ಶ್ರೀ ನೀಲಕಂಠೇಶ್ವರ ವಿದ್ಯಾಸಂಸ್ಥೆಯು ಇಂದಿನ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮತ್ತು ವ್ಯವಸ್ಥಿತವಾಗಿ ಮಾಡಿದ್ದು, ಇಲ್ಲಿ ವ್ಯಾಸಂಗ ಮಾಡುತ್ತಿರುವ ಮತ್ತು ಭೋದನೆ ಮಾಡುತ್ತಿರುವ ಜೊತೆಗೆ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲರಿಗೂ ನಗದು ಬಹುಮಾನ ನೀಡುತ್ತಿರುವುದು ಒಂದು ಉತ್ತಮವಾದ ಕಾರ್ಯಸಾಧನೆಯಾಗಿದೆ ಎಂದು ಆಡಳಿತ ಮಂಡಳಿಯವರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬ್ಲಾಕ್ ಅಧ್ಯಕ್ಷರಾದ ಕುರಟ್ಟಿ ಮಹೇಶ್, ಸಿ.ಎಂ.ಶಂಕರ್, ತಾಪಂ ಮಾಜಿ ಅಧ್ಯಕ್ಷ ನಾಗೇಶ್‍ರಾಜ್, ನಗರಸಭಾ ಸದಸ್ಯೆ ಶ್ವೇತಲಕ್ಷ್ಮಿ ಸತೀಶ್‍ಗೌಡ, ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಕೆ.ಎಸ್.ಅರುಣೇಶ್, ಉಪಾಧ್ಯಕ್ಷರಾದ ಎಸ್.ಲತಾ, ಜಂಟಿಕಾರ್ಯದರ್ಶಿ ಎಂ.ಎಸ್.ಮಂಜುಳಾ, ಮುಖ್ಯೋಪಾಧ್ಯಾಯರಾದ ರಾಜೇಶ್ವರಿ, ಕೋ-ಆರ್ಡಿನೇಟರ್ ಮಮತಾ, ಅಡ್ವೈಜರ್ ಮಂಜುಳಾ, ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ಅಧ್ಯಕ್ಷರಾದ ನಟರಾಜ್, ಶಿಕ್ಷಣ ಸಂಯೋಜಕರಾದ ಇಸಿಒ ರಮೇಶ್, ದೈಹಿಕ ಶಿಕ್ಷಕ ರಾಜಶೇಖರ್, ಭೋದಕ, ಭೋದಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.