ತಂಬಾಕು ದಾಳಿ ಹೆಚ್ಚಿಸಲು ಕ್ರಮವಹಿಸಿ
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜು.೯; ತಿಂಗಳಿಗೆ ಒಂದೆರೆಡು ತಂಬಾಕು ದಾಳಿಗಳು ಮಾತ್ರ ಆಗುತ್ತಿದ್ದು, ತಂಬಾಕು ದಾಳಿಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ತಾಲ್ಲೂಕಿನಾದ್ಯಂತ ತಂಬಾಕು ಕಾರ್ಯಾಚರಣೆ ನಡೆಸುವಾಗ ಪೊಲೀಸ್ ಇಲಾಖೆಯವರು ಹೆಚ್ಚಿನ ಸಹಕಾರ ನೀಡಬೇಕು ಎಂದು ಚಿತ್ರದುರ್ಗ ತಹಶೀಲ್ದಾರ್ ಡಾ.ನಾಗವೇಣಿ ಹೇಳಿದರು.ನಗರದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಈಚೆಗೆ ನಡೆದ ಕೋಟ್ಪಾ-2003ರ ಕಾಯ್ದೆಯ ತಾಲ್ಲೂಕುಮಟ್ಟದ ಸಮನ್ವಯತ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಗ್ರಾಮೀಣ ಮಟ್ಟದಲ್ಲಿ ತಂಬಾಕು ದಾಳಿಗಳನ್ನು ಕೈಗೊಳ್ಳಬೇಕು ಮತ್ತು ಪ್ರತಿ ದಿನ ಕಸ ವಿಲೇವಾರಿ ವಾಹನಗಳಲ್ಲಿ ತಂಬಾಕು ನಿಯಂತ್ರಣ ಕುರಿತಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಆಡಿಯೋ ಜಿಂಗಲ್ಸ್‍ಗಳ ಮೂಲಕ ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸುವಂತೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸುವಂತೆ ತಾಲ್ಲೂಕು ಕಾರ್ಯನಿರ್ವಾಹಕಾಧಿಕಾರಿಗಳಿಗೆ ತಿಳಿಸಿದರು.ಶಾಲೆಗಳ ಸುತ್ತ-ಮುತ್ತ 100 ಗಜದ ವ್ಯಾಪ್ತಿಯಲ್ಲಿ ತಂಬಾಕು ದಾಳಿಯನ್ನು ಕೈಗೊಂಡು, ತಂಬಾಕು ಮಾರಾಟ ಮಾಡದಂತೆ, ಯಾವ ಶಾಲೆಗಳ ಹತ್ತಿರ ತಂಬಾಕು ಮಾರಾಟವಾಗುತ್ತಿದೆಯೋ ಅಂತಹ ಶಾಲೆಗಳ ಪಟ್ಟಿಯನ್ನು ಮಾಡಿ, ತಂಬಾಕು ದಾಳಿಯನ್ನು ಕೈಗೊಳ್ಳುವುದು. ಪ್ರತಿಯೊಂದು ಶಾಲೆಗಳ ಹತ್ತಿರ ತಂಬಾಕು ಮಾರಾಟವಾಗದಂತೆ ಮತ್ತು ಪ್ರತಿ ಮೂರು ತಿಂಗಳಿಗೊಮ್ಮೆ ಶಾಲಾ ತಂಬಾಕು ನಿಯಂತ್ರಣ ಸಭೆಯನ್ನು ನಡೆಸುವಂತೆ ಹಾಗೂ ಎಲ್ಲಾ ಶಾಲೆಗಳನ್ನು ತಂಬಾಕು ಮುಕ್ತ ಶಾಲೆಗಳೆಂದು ಮಾಡುವ ನಿಟ್ಟಿನಲ್ಲಿ ಮುಖ್ಯೋಪಾಧ್ಯಾಯರು ಸೂಕ್ತ ಕ್ರಮ ವಹಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.ಚಿತ್ರದುರ್ಗ ತಾಲ್ಲೂಕಿನ ಎಲ್ಲಾ ಸರ್ಕಾರಿ ಕಚೇರಿಗಳನ್ನು ತಂಬಾಕು ಮುಕ್ತ ಕಚೇರಿಗಳಾಗಿ ಮಾಡಬೇಕೆಂದು ಇಲಾಖೆಯ ಎಲ್ಲಾ ಕಚೇರಿ ಮುಖ್ಯಸ್ಥರಿಗೆ ಸೂಚಿಸಿದ ಅವರು, ಪ್ರತಿ ದಿನ ಕಸ ವಿಲೇವಾರಿ ವಾಹನಗಳಲ್ಲಿ ತಂಬಾಕು ನಿಯಂತ್ರಣ ಕುರಿತಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಆಡಿಯೋ ಜಿಂಗಲ್ಸ್‍ಗಳ ಮೂಲಕ ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸಬೇಕು ಎಂದು ನಗರಸಭೆ ಪೌರಾಯುಕ್ತರಿಗೆ ಸೂಚಿಸಿದರು.