ವೈದ್ಯರು ಸಮಾಜ ಬೆಳಗುವ ದೀಪವಾಗಬೇಕು: ಕುಪ್ಪೆ ಶ್ರೀನಿವಾಸ್
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜು.09: ನಾವು ನೀಡುವ ಒಂದು ಚಿಕ್ಕ ಸೇವೆಯಿಂದ ಸಾವಿರಾರು ಕುಟುಂಬಗಳ ದೀಪ ಬೆಳಗುತ್ತದೆ. ವೈದ್ಯರು ಸಮಾಜವನ್ನು ಬೆಳಗುವ ದೀಪಗಳಾಗಬೇಕೆಂದು ರಾಜ್ಯ ಆರೋಗ್ಯ ಇಲಾಖೆಯ ವಿಚಕ್ಷಣಾ ದಳದ ಅಧಿಕಾರಿ ಕುಪ್ಪೆ ಶ್ರೀನಿವಾಸ್ ಕರೆ ನೀಡಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರಗೆ ಭೇಟಿ ನೀಡಿ ವ್ಯವಸ್ಥೆಯ ಪರಿಶೀಲನೆ ನಡೆಸಿದ ಅವರು ಆಸ್ಪತ್ರೆಯ ವೈದ್ಯರು ಹಾಗೂ ಇತರ ಸಿಬ್ಬಂಧಿಗಳ ಸಭೆ ನಡೆಸಿ ಮಾತನಾಡಿದರು.
ರಾಜ್ಯ ಆರೋಗ್ಯ ವಿಚಕ್ಷಣಾ ದಳ ಲೋಕಾಯುಕ್ತದಂತೆ ಕೆಲಸ ಮಾಡುತ್ತಿದೆ. ವೈದ್ಯಕೀಯ ಸೇವೆಯಲ್ಲಿನ ತಪ್ಪು ಹುಡುಕುವುದು ನಮ್ಮ ಮುಖ್ಯ ಗುರಿಯಲ್ಲ. ಬದಲಾಗಿ ವೈದ್ಯರ ಸೇವೆ ಹಾಗೂ ವೈದ್ಯಕೀಯ ಸವಲತ್ತುಗಳು ಜನರಿಗೆ ತಲುಪುವಂತೆ ಮಾಡುವುದು ನಮ್ಮ ಮುಖ್ಯ ಗುರಿ. ಹಣ ಮಾಡುವುದು ವೈದ್ಯರ ಮುಖ್ಯ ಗುರಿಯಲ್ಲ. ಗಾಂಧಿ, ಅಂಬೇಡ್ಕರ್, ವಿವೇಕಾನಂದರಂತಹ ಆದರ್ಶ ಪುರುಷರ ಬಳಿ ಹಣವಿರಲಿಲ್ಲ. ಆದರೆ ಅವರ ಸೇವೆಯಿಂದ ಸಮಾಜಕ್ಕೆ ಬೆಳಕಾಗಿದೆ ಎಂದ ಶ್ರೀನಿವಾಸ್ ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂಧಿಗಳು ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಜನರಿಗೆ ನಂಬಿಕೆ ಬರುವಂತೆ ಕೆಲಸ ಮಾಡಬೇಕೆಂದರು.
ನಾನೊಬ್ಬ ರೈತನ ಮಗ. ಆಸ್ಪತ್ರೆಗಳ ಸುಧಾರಣೆ ಮತ್ತು ಆಸ್ಪತ್ರೆಗೆ ಬರುವ ಬಡ ರೈತರ ಬಗ್ಗೆ ನಾನು ಸದಾ ಯೋಚಿಸುತ್ತೇನೆ. ನಾನು ಮೊದಲು ದೇಶದ ಒಬ್ಬ ನಾಗರೀಕ. ಅನಂತರ ಸರ್ಕಾರಿ ಅಧಿಕಾರಿ ಎಂದ ಶ್ರೀನಿವಾಸ್ ಬಡ ರೈತರು ಖಾಸಗಿ ಚಿಕಿತ್ಸೆಗೆ ಹೋದರೆ ತಮ್ಮ ಮನೆ ಮಠ ಮಾರಿಕೊಳ್ಳಬೇಕಾಗಿದೆ. ಶೇ 05 ರಷ್ಟು ಕರ್ತವ್ಯ ಲೋಪ ವೈದ್ಯಕೀಯ ಸಿಬ್ಬಂಧಿಗಳಿಂದ ಆರೋಗ್ಯ ಇಲಾಖೆಗೆ ಕೆಟ್ಟ ಹೆಸರು ಬರುತ್ತಿದೆ. ಪಾಪದ ಹಣದಲ್ಲಿ ಬದುಕುವ ನೀಚ ಮಟ್ಟಕ್ಕೆ ವೈದ್ಯರು ಇಳಿಯಬಾರದು. ಸಮಾಜದ ಸುಲಿಗೆ ಮಾಡಲು ನಾವು ಶಿಕ್ಷಣ ಪಡೆಯಬೇಕಾ?. ಹಣ ಪಡೆಯುವುದು ಮಾತ್ರ ಬ್ರಷ್ಟಾಚಾರವಲ್ಲ. ಸರ್ಕಾರದ ಸವಲತ್ತುಗಳನ್ನು ಜನರಿಗೆ ತಲುಪಿಸದೆ ವಂಚಿಸುವುದೂ ಕೂಡ ಬ್ರಷ್ಟಾಚಾರವೇ ಎಂದರು.
ವೈದ್ಯರಿಗೆ ಅತಿ ಹೆಚ್ಚು ಗೌರವ ಕೊಡುವ ದೇಶ ನಮ್ಮದು. ನಮ್ಮ ಸೇವೆಗಾಗಿ ಜನ ವೈದ್ಯರನ್ನು ದೇವರ ಸ್ಥಾನಕ್ಕೆ ಇಟ್ಟಿದ್ದಾರೆ. ವೈದ್ಯರು ಜನರ ಕಷ್ಠ ನಿವಾರಿಸುವ ದೇವರಾಗಬೇಕು. ಆಸ್ಪತ್ರೆ ನಮ್ಮದಲ್ಲ. ಬದಲಾಗಿ ಅದು ಸಾರ್ವಜನಿಕರಿಗೆ ಸೇರಿದ್ದು. ನಿಮ್ಮನ್ನು ಹುಡುಕಿಕೊಂಡು ರೋಗಿಗಳು ಬರುವುದರಿಂದಲೇ ನಿಮಗೆ ವೈದ್ಯಕೀಯ ವೃತ್ತಿ ದೊರಕಿದೆ. ಆಸ್ಪತ್ರೆಗಳಲ್ಲಿ ಜನರಿಗೆ ಗುಣಾತ್ಮಕ ಚಿಕಿತ್ಸೆ ನೀಡುವ ಮೂಲಕ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಜನರಿಗೆ ನಂಬಿಕೆ ಹುಟ್ಟಿಸಬೇಕೆಂದು ಕರೆ ನೀಡಿದ ಶ್ರೀನಿವಾಸ್ ನಾವು ರೋಗಿಗಳ ಮುಂದೆ ಕೈಚಾಚಿದರೆ ನಮ್ಮ ಮಾನವನ್ನು ನಾವು ಮಾರಿಕೊಂಡಂತೆ. ಪ್ರೀತಿ ಮತ್ತು ದಯೆ ನಮ್ಮ ರಕ್ತದಲ್ಲಿರಬೇಕು. ಆಸ್ಪತ್ರೆಗೆ ಬರುವ ಪ್ರತಿಯೊಬ್ಬ ರೋಗಿಯ ಜೊತೆ ಸೌಜನ್ಯದಿಂದ ವರ್ತಿಸಬೇಕು. ನಗು ಆರೋಗ್ಯದ ಲಕ್ಷಣ. ವೈದ್ಯರು ಸದಾ ನಗುಮುಖದಿಂದ ಸೇವೆ ಸಲ್ಲಿಸುವ ಮೂಲಕ ದೇವರು ನಮಗೆ ಕೊಟ್ಟಿರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು.
ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಮಾಡಿಸುವ ಹೆರಿಗೆಯಿಂದ ಹಿಡಿದು ಪ್ರತಿಯೊಂದು ಚಿಕಿತ್ಸೆಗೂ ಸರ್ಕರದಿಮದ ಹಣ ಬರುತ್ತದೆ. ಪ್ರಸಕ್ತ ವರ್ಷದಲ್ಲಿ ನೀಡಿದ ಸೇವೆಗಾಗಿ ಸರ್ಕಾರದಿಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ 1.45 ಕೋಟಿ ಹಣ ಬಂದಿದೆ. ಇದರ ಜೊತೆಗೆ ಲ್ಯಾಬ್ ಟೆಸ್ಟಿಂಗ್ ಮತ್ತಿತರ ಸೇವೆಗಳ ಮೂಲಕವೂ ಆಸ್ಪತ್ರೆಗೆ ಹಣ ಬರುತ್ತದೆ. ರಾಜ್ಯ ಸರ್ಕಾರವೂ ವಾರ್ಷಿಕ 30-40 ಲಕ್ಷ ಹಣವನ್ನು ಆಸ್ಪತ್ರೆಯ ಸೇವಾ ವ್ಯವಸ್ಥೆಗೆ ನೀಡುತ್ತಿದೆ. ಇಲ್ಲಿನ ಆದಾಯದ ಹಣ ಬಳಕೆ ಮಾಡಿ ಪಾರದರ್ಶಕ ಟೆಂಡರ್ ಮೂಲಕ ನೇರವಾಗಿ ಔಷಧಿ ಕಂಪನಿಗಳ ಮೂಲಕವೇ ಅಗತ್ಯ ಔಷಧಿಗಳನ್ನು ಕಡಿಮೆ ಬೆಲೆಗೆ ಖರೀದಿಸಿ ರೋಗಿಗಳಿಗೆ ನೀಡಬಹುದು. ಎಲ್ಲಾ ಬಗೆಯ ಔಷಧಿಗಳೂ ಆಸ್ಪತ್ರೆಯಲ್ಲಿ ಲಭ್ಯವಿದೆ. ವೈದ್ಯರು ಯಾವುದೇ ಕಾರಣಕ್ಕೂ ಹೊರಗಿನ ಔಷಧಿ ಅಂಗಡಿಗಳಿಗೆ ಚೀಟಿ ಬರೆಯಬಾರದು.
ಆಸ್ಪತ್ರೆಗೆ ಬರುವ ಎಲ್ಲಾ ನಾಗರೀಕರಿಗೂ ಸರ್ಕಾರಿ ಸವಲತ್ತಿನ ಬಗ್ಗೆ ಅರಿವು ಮೂಡಿಸಿ. ಇಲಾಖೆಯ ಯಶಸ್ಸಿನಲ್ಲಿ ನೀವೆಲ್ಲರೂ ಪಾಲುದಾರರಾಗಿ ಎಂದು ಕುಪ್ಪೆ ಶ್ರೀನಿವಾಸ್ ಕರೆ ನೀಡಿದರು.
ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ. ಸೋಮಶೇಖರ್, ತಾಲೂಕು ಆರೋಗ್ಯಧಿಕಾರಿ ಡಾ.ಅಜಿತ್, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಶಶಿಧರ್ ಸೇರಿದಂತೆ ಆಸ್ಪತ್ರೆಯ ಎಲ್ಲಾ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂಧಿಗಳು ಹಾಜರಿದ್ದರು.