ಡೆಂಗ್ಯೂ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲು ಮುಖ್ಯಾಧಿಕಾರಿ ಆರ್.ಅಶೋಕ ಸೂಚನೆ
ಸಂಜೆವಾಣಿ ವಾರ್ತೆ
ಹನೂರು ಜು 9 :- ಹನೂರು ಪಟ್ಟಣ ಪಂಚಾಯಿತಿಗೆ ಹನೂರು ಪ್ರಾಥಮಿಕ ಆರೋಗ್ಯ ಇಲಾಖೆಯ ಸಿಬ್ಬಂಧಿಗಳ ತಂಡ ಸೋಮವಾರ ಭೇಟಿ ನೀಡಿ ಡೆಂಘೀ/ಡೆಂಗ್ಯೂ ತಡೆಗಟ್ಟುವ ಸಂಬಂಧ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವ ಬಗ್ಗೆ ಮುಖ್ಯಾಧಿಕಾರಿ ಅಶೋಕ.ಆರ್ ಅವರ ಜೊತೆ ಚರ್ಚೆ ನಡೆಸಿದರು.
ಬಳಿಕ ಮುಖ್ಯಾಧಿಕಾರಿ ಅಶೋಕ.ಆರ್ ಮಾತನಾಡಿ, ಹನೂರಿನಲ್ಲಿ ಒಟ್ಟು 13 ವಾರ್ಡು ಇದ್ದು, ಸ್ಲಂ ಬಡಾವಣೆ ಒಳಗೊಂಡಿದೆ ಇವುಗಳಿಗೆ ಹೆಚ್ಚಿನ ಆಧ್ಯತೆ ನೀಡಿ ಡೆಂಘೀ/ಡೆಂಗ್ಯೂ ಜ್ವರ ತಡೆಗಟ್ಟುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲು ಜಿಲ್ಲಾಢಳಿತವು ಸಹ ಸೂಚನೆ ನೀಡಿದೆ ಹೀಗಾಗಿ ಎಲ್ಲ ಸದಸ್ಯರಿಗೆ ಮಾಹಿತಿ ನೀಡಿ ಆರೋಗ್ಯ ಇಲಾಖೆ ಜೊತೆಗೆ ಪಟ್ಟಣ ಪಂಚಾಯಿತಿ ಆಡಳಿತವು ಜಂಟಿಯಾಗಿ ವಾರ್ಡುಳಿಗೆ ಭೇಟಿ ನೀಡಲಾಗುವುದು. ಬಡಾವಣೆಗಳಲ್ಲಿ ಔಷಧಿ, ಬ್ಲಿಚಿಂಗ್‍ಪೌಡರ್ ಸಿಂಪಡಣೆ ಸೇರಿದಂತೆ ಕುಡಿಯುವ ನೀರು ವಾಟರ್ ಟ್ಯಾಂಕ್ ಸ್ವಚ್ಛತೆಗೆ ಒತ್ತು ನೀಡಲಾಗುವುದು ಎಂದರಲ್ಲದೆ ಸರ್ವೆ ಸಮೀಕ್ಷೆಗೆ ಪೂರ್ಣ ಸಹಕಾರ ನೀಡಲಾಗುವುದು ಎಂದರು.
ಇದೆ ವೇಳೆ ಪಿಹೆಚ್‍ಓ ಶಾಂತಮ್ಮ.ಎ ಮಾತನಾಡಿ, ಹನೂರಿನಲ್ಲಿ ಆರೋಗ್ಯ ಇಲಾಖೆ ವತಿಯಿಂದ ವೈಧ್ಯಾಧಿಕಾರಿ ಪುಷ್ಪರಾಣಿ ನೇತೃತ್ವದಲ್ಲಿ ಪ್ರತಿ ಶುಕ್ರವಾರದಂದು ಸರ್ವೆ ಮಾಡಲಾಗುತ್ತಿದ್ದು, ಡೆಂಘೀ/ಡೆಂಗ್ಯೂ ಪ್ರಕರಣ ಕಂಡು ಬಂದರೆ ಆರೋಗ್ಯ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿಗೆ ಮಾಹಿತಿ ನೀಡಲಾಗುವುದು. ಈಗಾಗಲೇ ಮನೆಮನೆಗೆ ತೆರಳಿ ಸಮೀಕ್ಷೆ ಮಾಡಲಾಗುತ್ತಿದ್ದು ಇದಕ್ಕೆ ಪಟ್ಟಣ ಪಂಚಾಯಿತಿಯವರು ಸಹ ಸಹಕಾರ ನೀಡಬೇಕಿದೆ ಎಂದರು.
ಬಡಾವಣೆಯ ಜನರು ನೀರು ಶೇಖರಣೆ ಮಾಡಿದ್ದನ್ನು ಮುಚ್ಚಿಡಬೇಕು. ವಾರಕ್ಕೆ ಎರಡು ಬಾರಿ ಆಗಾಗ್ಗೆ ಖಾಲಿ ಮಾಡಬೇಕು, ಸುತ್ತಮುತ್ತ ಜಾಗಗಳಲ್ಲಿ ಸ್ವಚ್ಚತೆ ಕಾಪಾಡಿಕೊಂಡು ಸೊಳ್ಳೆಗಳು ಹರಡದಂತೆ ನೋಡಿಕೊಳ್ಳಬೇಕು. ಹೆಚ್ಚಿನ ಜ್ವರ, ತಲೆನೋವು, ವಾಂತಿ, ಸ್ನಾಯು, ಮೂಳೆ ಹಾಗೂ ಕೀಲು ನೋವು ಇನ್ನಿತರ ರೋಗ ಲಕ್ಷಣಗಳು ಕಂಡು ಬಂದರೆ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ಸಂಧರ್ಭದಲ್ಲಿ ಹನೂರು ಪ್ರಾಥಮಿಕ ಆರೋಗ್ಯ ಅಧಿಕಾರಿ(ಪಿಹೆಚ್‍ಓ) ಶಾಂತಮ್ಮ.ಎ, ಸಮುದಾಯ ಆರೋಗ್ಯಾಧಿಕಾರಿ ಸುಧಾಸೆಲ್ವಿ, ಆಶಾ ಕಾರ್ಯಕರ್ತೆ ಶೀಲಾ.ಎಸ್ ಸೇರಿದಂತೆ ಪಟ್ಟಣ ಪಂಚಾಯಿತಿ ಸಿಬ್ಬಂಧಿ ಜಯಶೀಲ ಇದ್ದರು.