ಐಇಸಿ ಕೌಶಲ್ಯ ಅಭಿವೃದ್ದಿ ಕಾರ್ಯಕ್ರಮ-ಪ್ರಮಾಣಪತ್ರ ವಿತರಣೆ
ಸಂಜೆವಾಣಿ ವಾರ್ತೆ
ಹನೂರು ಜು 9 :- ಹನೂರು ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಇವರ ಸಹಯೋಗದೊಂದಿಗೆ ಶ್ರೀ ವಾತ್ಸಲ್ಯ ಸೋಷಿಯಲ್ ಮತ್ತು ಕಲ್ಚರಲ್ ಸೊಸೈಟಿ (ರಿ) ಚಿತ್ರದುರ್ಗ, ನರ್ಮ್-ಐ.ಹೆಚ್.ಎಸ್.ಡಿ.ಪಿ ಯೋಜನೆಯ ಐ.ಇ.ಸಿ ಕೌಶಲ್ಯ ಅಭಿವೃದ್ದಿ ಕಾರ್ಯಕ್ರಮದಲ್ಲಿ ಪ್ರಮಾಣಪತ್ರ ವಿತರಣೆ ಮಾಡಿದರು.
ಬಳಿಕ ಹನೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅಶೋಕ್. ಆರ್ ಮಾತನಾಡಿ, ಮಹಿಳೆಯರು ಸ್ವ-ಉದ್ಯೋಗದಲ್ಲಿ ತೊಡಗಿಸಿಕೊಂಡರೆ ಮಾತ್ರ ಕುಟುಂಬನಿರ್ವಹಣೆ ಜೊತೆಗೆ ಆರ್ಥಿಕವಾಗಿ ಮುಂದೆ ಬರಲು ಸಾಧ್ಯ. ಹೆಣ್ಣು ಅಬಲೆಯಲ್ಲ, ಕೇವಲ ಮನೆಕೆಲಸಕ್ಕೆ ಸೀಮಿತವಾಗದೆ ಇಡೀ ಸಮಾಜದಲ್ಲಿ ಎಲ್ಲ ಕ್ಷೇತ್ರದಲ್ಲೂ ಇಂದು ಸಾಧನೆಯ ಹಾದಿಯಲ್ಲಿ ಸಾಗುತ್ತಿದ್ದಾರೆ ಹೀಗಾಗಿ ಉತ್ತಮ ಬದುಕುಕಟ್ಟಿಕೊಳ್ಳಲು ಸ್ವ-ಉದ್ಯೋಗಕ್ಕೆ ಅನುಕೂಲಕರವಾದ ತರಭೇತಿಯನ್ನು ಪಡೆದುಕೊಂದು ಅದರಲ್ಲಿ ಒಂದಷ್ಟು ಆದಾಯ ಪಡೆದುಕೊಂಡರೆ ಕುಟುಂಬನಿರ್ವಹಣೆಗೆ ಸಹಕಾರಿಯಾಗಲಿದೆ ಈ ನಿಟ್ಟಿನಲ್ಲಿ ಮಹಿಳೆಯರು ಬಟ್ಟೆ ವಿನ್ಯಾಸ ಬಗ್ಗೆ ತರಭೇತಿ ಹೊಂದಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಶ್ರೀ ವಾತ್ಸಲ್ಯ ಸೋಷಿಯಲ್ ಮತ್ತು ಕಲ್ಚರಲ್ ಸೊಸೈಟಿಯ ಕಾರ್ಯದರ್ಶಿ ಸೌಮ್ಯ ಮಾತನಾಡಿ, ಗ್ರಾಮೀಣ ಭಾಗದ ಮಹಿಳೆಯರಿಗೆ ಸ್ಯಾರಿ, ಕುಚ್ಚು ಜೋಡಣೆ ಮಾಡುವ ಕೆಲಸ ಸಹಕಾರಿಯಾಗಲಿದೆ. ಸುಮಾರು 50 ಮಹಿಳೆಯರಿಗೆ ಪ್ರಮಾಣಪತ್ರ ವಿತರಣೆ ಮಾಡಲಾಗಿದೆ ಇದನ್ನು ಸದ್ಬಳಕೆ ಮಾಡಿಕೊಂಡು ಮಹಿಳೆಯರು ಆರ್ಥಿಕವಾಗಿ ಪ್ರಗತಿಯತ್ತ ಸಾಗಬೇಕು ಎಂದರು.
ಈ ಸಂದರ್ಭದಲ್ಲಿ ಸ್ಯಾರಿ,ಕುಚ್ಚು ತರಭೇತಿ ಶಿಕ್ಷಕರಾದ ಶಾರದ, ಹನೂರು ಪಟ್ಟಣ ಪಂಚಾಯಿತಿ ಸಿಬ್ಬಂಧಿ ಜಯಶೀಲ ಸೇರಿದಂತೆ ಮಹಿಳೆಯರು ಇದ್ದರು.