ನಾಳೆ ಚಾ.ನಗರದಲ್ಲಿ ಕಾಂಗ್ರೆಸ್ ಕೃತಜ್ಞತೆ ಸಮಾವೇಶದಲ್ಲಿ ಸಿಎಂ, ಡಿಸಿಎಂ ಭಾಗಿ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು. 7- ಚಾಮರಾಜನಗರ ಲೋಕಸಭಾ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಸಮಾವೇಶ ಜು. 10 ರ ಬುಧವಾರ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಅಯೋಜನೆ ಮಾಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸಚಿವರು , ಸಂಸದರು ಭಾಗವಹಿಸಲಿದ್ದಾರೆ ಎಂದು ಎಂಐಎಸ್‍ಎಲ್ ಅಧ್ಯಕ್ಷ ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿ ತಿಳಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ನಡೆದ ಕಾಂಗ್ರೆಸ್ ಪ್ರಮುಖ ಮುಖಂಡರು ಹಾಗೂ ಪದಾಧಿಕಾರಿಗಳ ಪೂರ್ವ ಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಚಾಮರಾಜನಗರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸುನೀಲ್ ಬೋಸ್ ಅವರನ್ನು 1.88 ಲಕ್ಷ ಮತಗಳ ಅಂತರದಲ್ಲಿ ಕ್ಷೇತ್ರದ ಮತದಾರರು ಗೆಲ್ಲಿಸಿದ್ದು, ಎಂಟು ವಿಧಾನಸಭಾ ಕ್ಷೇತ್ರಗಳನ್ನೋಳಗೊಂಡ ಲೋಕಸಭಾ ಕ್ಷೇತ್ರದ ಕೇಂದ್ರ ಸ್ಥಾನದಲ್ಲಿ ಮತದಾರರಿಗೆ ಕೃತಜ್ಞತೆ ಹಾಗೂ ಅಭಿನಂದನಾ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಬೆಳಗ್ಗೆ 11 ಗಂಟೆಗೆ ಸಮಾವೇಶ ಆರಂಭವಾಗಲಿದ್ದು, ಚಾಮರಾಜನಗರ ಜಿಲ್ಲೆ ಹಾಗೂ ಕ್ಷೇತ್ರದಿಂದ ಹೆಚ್ಚು ಕಾರ್ಯಕರ್ತರು ಹಾಗೂ ಮುಖಂಡರು ಈ ಸಮಾವೇಶದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿಕೊಡಬೇಕೆಂದು ಎಂದರು.
ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಎಚ್.ಸಿ. ಮಹದೇವಪ್ಪ, ಕೆ. ವೆಂಕಟೇಶ್ , ಸಂಸದ ಸುನೀಲ್ ಬೋಸ್, ಮೈಸೂರು ಹಾಗೂ ಚಾ.ನಗರ ಜಿಲ್ಲೆಯ ಶಾಸಕರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಚಾ.ನಗರ ಕ್ಷೇತ್ರದಿಂದ ಹೆಚ್ಚಿನ ಕಾರ್ಯಕರ್ತರು ಮುಖಂಡರು ಭಾಗವಹಿಸುವ ನಿಟ್ಟಿನಲ್ಲಿ ಪಕ್ಷದ ಪ್ರಮುಖ ಕಾರ್ಯಯೋಜನೆ ರೂಪಿಸಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ. ಮರಿಸ್ವಾಮಿ ಮಾತನಾಡಿದ, ಇದೊಂದು ಐತಿಹಾಸಿಕ ಸಮಾವೇಶವಾಗಿದ್ದು, 8 ವಿಧಾನಸಭಾ ಕ್ಷೇತ್ರಗಳ ಮತದಾರರು ಜಿಲ್ಲಾ ಕೇಂದ್ರದಲ್ಲಿ ಸಮಾವೇಶಗೊಳ್ಳಲಿದ್ದಾರೆ. ಇದಕ್ಕಾಗಿ ಇನ್ನು ಮೂರು ದಿನಗಳ ಕಾಲವಕಾಶದಲ್ಲಿ ಪಕ್ಷದ ಪ್ರತಿಯೊಬ್ಬರ ಕಾರ್ಯಕರ್ತರು ಭಾಗವಹಿಸುವ ಜೊತೆಗೆ ಹೆಚ್ಚಿನ ಮಂದಿ ಸಮಾವೇಶದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು. ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಮಾಡಲಾಗಿದ್ದು, ಅಂಬೇಡ್ಕರ್ ಕ್ರೀಡಾಂಗಣ, ಖಾಸಗಿ ಬಸ್ ನಿಲ್ದಾಣವನ್ನು ಸಿದ್ದಪಡಿಸಲಾಗುತ್ತಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಆರ್. ಮಹದೇವ್, ಚಿಕ್ಕಮಹದೇವ್, ಬ್ಲಾಕ್ ಅಧ್ಯಕ್ಷ ಹಾಗೂ ಚುಡಾ ಅಧ್ಯಕ್ಷ ಮಹಮದ್ ಅಸ್ಗರ್, ಎ.ಎಸ್. ಗುರುಸ್ವಾಮಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲತಾ ರಾಜಶೇಖರ್ ಜತ್ತಿ, ಪದ್ಮ ಪುರುಷೋತ್ತಮ್, ಶಿವಕುಮಾರ್, ಸೈಯದ್ ರಫಿ. ಎಎಚ್‍ಎನ್ ಖಾನ್, ಬಿಸಲವಾಡಿ ರವಿ, ವಡ್ಡರಹಳ್ಳಿ ಶೇಖರಪ್ಪ, ಮೊದಾಲದವರು ಇದ್ದರು.