ಝೀಕಾ ವೈರಸ್ ಬಗ್ಗೆ ಜನರು ಮುನ್ನೆಚ್ಚರಿಕೆ ವಹಿಸಿ
ಕಲಬುರಗಿ:ಜು.8 : ರಾಜ್ಯದಲ್ಲಿ ಝೀಕಾ ವೈರಸ್ ಕಾಯಿಲೆ ಪ್ರಕರಣಗಳು ಕಂಡುಬರುತ್ತಿವೆ. ಇದರ ಬಗ್ಗೆ ಎಲ್ಲೆಡೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಝೀಕಾ ವೈರಸ್ ಸೋಂಕಿತ ಈಡಿಸ್ ಜಾತಿಯ ಸೊಳ್ಳೆ ಕಡಿಯುವದರಿಂದ ಜನರಿಗೆ ಹರಡುತ್ತದೆ. ಇದು ಸೊಳ್ಳೆ ಹಗಲಿನ ವೇಳೆಯಲ್ಲಿ ಕಡಿಯುವದರಿಂದ ಜನರು ಜಾಗೃತರಾಗಿಬೇಕು ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್.ಕೇಶ್ವಾರ ಸಲಹೆ ನೀಡಿದರು.
ನಗರದ ಶೇಖರೋಜಾದಲ್ಲಿರುವ ಶಹಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಕೇಂದ್ರ ಮತ್ತು ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಏರ್ಪಡಿಲಾಗಿದ್ದ ಝೀಕಾ ವೈರಸ್ ಕಾಯಿಲೆಯ ಜಾಗೃತಿ ಕಾರ್ಯಕ್ರಮದಲ್ಲಿ ಜನಜಾಗೃತಿ ಮೂಡಿಸುವ ಕರ ಪತ್ರಗಳನ್ನು ಸಾರ್ವಜನಿಕರಿಗೆ ವಿತರಿಸಿ ನಂತರ ಅವರು ಮಾತನಾಡುತ್ತಿದ್ದರು.
ಜ್ವರ, ದದ್ದು ಉಂಟಾಗುವುದು, ತಲೆನೋವು, ಕೀಲು ನೋವು ಕಣ್ಣು ಕೆಂಪಾಗುವುದು, ಸ್ನಾಯು ನೋವು ಬರುವುದು ಝೀಕಾ ವೈರಸ್ ಕಾಯಿಲೆಯ ಸಾಮಾನ್ಯ ಲಕ್ಷಣಗಳಾಗಿವೆ. ಅನೇಕ ಜನರು ಇವುಗಳ ಲಕ್ಷಣಗಳು ಕಂಡುಬರದಿದ್ದರು ಕೂಡಾ ಕಾಯಿಲೆ ಹೊಂದಿರುತ್ತಾರೆ. ಇದಕ್ಕೆ ನಿರ್ಧಿಷ್ಟವಾದ ಯಾವುದೇ ಔಷಧಿ ಇರುವುದಿಲ್ಲ. ಸೊಳ್ಳೆಗಳಿಂದ ರಕ್ಷಣೆ ಪಡೆಯುವುದೇ ಇದಕ್ಕೆ ಮದ್ದಾಗಿದೆ. ವಿಶೇಷವಾಗಿ ಗರ್ಭಿಣಿ ಮಹಿಳೆಯರು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದರು.
ಮುನ್ನೆಚ್ಚರಿಕೆ ಕ್ರಮಗಳಾದ ಕಾಯಿಸಿ, ಆರಿಸಿದ ನೀರನ್ನು ಸೇವಿಸುವುದು, ಮನೆಯ ಸುತ್ತ-ಮುತ್ತಲಿನ ಪರಿಸರ ಸ್ವಚ್ಛತೆ ಕಾಪಾಡುವುದು, ಸಂಪೂರ್ಣ ಮೈ ಮುಚ್ಚುವಂತಹ ಬಟ್ಟೆಗಳನ್ನು ಧರಿಸುವುದು, ಸೊಳ್ಳೆ ಪರದೆಗಳನ್ನು ಬಳಸುವುದು, ಕೀಟ ನಿವಾರಕಗಳನ್ನು ಸಿಂಪಡಿಸುವುದು ಮುಂಜಾಗ್ರತಾ ಕ್ರಮಗಳಾಗಿವೆ. ಕಾಯಿಲೆಯ ಲಕ್ಷಣಗಳನ್ನು ಕಾಣಿಸಿದರೆ ವೈದ್ಯರನ್ನು ಸಂಪರ್ಕಿಸಿ, ಚಿಕಿತ್ಸೆ ಪಡೆಯಬೇಕು. ಇದರ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು ಎಂದರು.
ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್. ಬಿರಾದಾರ, ನಿವೃತ್ತ ಮುಖ್ಯ ಶಿಕ್ಷಕ ಬಸಯ್ಯಸ್ವಾಮಿ ಹೊದಲೂರ, ಮುಖ್ಯ ಶಿಕ್ಷಕ ದೇವೇಂದ್ರಪ್ಪ ಗಣಮುಖಿ, ಶಿಕ್ಷಕ ಪ್ರಭಾಕರ ವಾಕಡೆ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ರೇಷ್ಮಾ ನಕ್ಕುಂದಿ, ಗಂಗಾಜ್ಯೋತಿ ಗಂಜಿ, ನಾಗೇಶ್ವರಿ ಮುಗಳಿವಾಡಿ, ಜಗನಾಥ ಗುತ್ತೇದಾರ, ಗುರುರಾಜ ಕೈನೂರ್ ಸೇರಿದಂತೆ ಇನ್ನಿತರರಿದ್ದರು.