ಡೆಂಘೆ ಜ್ವರದ ಬಗ್ಗೆ ಮುಂಜಾಗ್ರತೆ ವಹಿಸುವುದು ಅಗತ್ಯ
ಕಲಬುರಗಿ:ಜು.8 :ರಾಜ್ಯದಲ್ಲಿ ಇತ್ತಿಚಿಗೆ ಡೆಂಘೆ ಜ್ವರದ ಪ್ರಮಾಣ ಹೆಚ್ಚಳವಾಗುತ್ತಿದ್ದು ಸಾರ್ವಜನಿಕರು ಅದರ ಬಗ್ಗೆ ಮುಂಜಾಗ್ರತೆ ವಹಿಸುವುದು ಅಗತ್ಯವಾಗಿದೆ. ತೀವ್ರವಾದ ಜ್ವರ, ವಿಪರೀತ ತಲೆನೋವು, ಕಣ್ಣು ಹಾಗೂ ಕೀಲು ನೋವು, ಬಾಯಿ, ವಸಡು, ಮೂಗಿನಿಂದ ರಕ್ತಸ್ರಾವವಾಗುವುದು, ಚರ್ಮದ ಮೇಲೆ ಅಲ್ಲಲ್ಲಿ ರಕ್ತದ ಗುರುತುಗಳ ಲಕ್ಷಣಗಳು ಕಂಡುಬಂದರೆ ಇವು ಡೆಂಘೆ ಜ್ವರದಾಗಿವೆ. ಆಗ ತಕ್ಷಣವೇ ತಜ್ಞ ವೈದ್ಯರನ್ನು ಸಂಪರ್ಕಿಸಿ, ರಕ್ತ ಪರೀಕ್ಷೆ ಮಾಡಿಸಿಕೊಂಡು, ಪತ್ತೆಯಾದರೆ ಚಿಕಿತ್ಸೆ ಪಡೆಯಬೇಕು ಎಂದು ಶಹಾಬಜಾರ ಯುಪಿಎಚ್‍ಸಿಯ ವೈದ್ಯಾಧಿಕಾರಿ ಡಾ.ಅನುಪಮಾ ಎಸ್.ಕೇಶ್ವಾರ ಸಲಹೆ ನೀಡಿದ್ದಾರೆ.
ನಗರದ ಶೇಖರೋಜಾದಲ್ಲಿ ಶಹಬಜಾರ ‘ನಗರ ಪ್ರಾಥಮಿಕ ಆರೋಗ್ಯ ಕೇಂದ್ರ’ ಮತ್ತು ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ಡೆಂಘಿ ಜ್ವರದ ಜಾಗೃತಿ ಕಾರ್ಯಕ್ರಮ’ದಲ್ಲಿ ಅವರು ಮಾತನಾಡುತ್ತಿದ್ದರು.
ಎಲ್ಲೆಡೆ ಮಳೆಯಾಗುತ್ತಿದ್ದು ಡೆಂಘಿ ಜ್ವರದ ಪ್ರಕರಣಗಳು ಹೆಚ್ಚಾಗುತ್ತಿವೆ. ಈಡಿಸ್ ಇಜಿಪ್ಟೀ ಎಂಬ ಸೊಳ್ಳೆಯಿಂದ ಇದು ಉತ್ಪತ್ತಿಯಾಗಿ, ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಈ ಸೊಳ್ಳೆಗಳು ಸ್ವಚ್ಛ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ ಮತ್ತು ಹಗಲಿನ ಹೊತ್ತಿನಲ್ಲಿ ಮನುಷ್ಯರನ್ನು ಕಚ್ಚುತ್ತವೆ. ಇದಕ್ಕ್ಕೆ ಯಾವುದೇ ನಿರ್ದಿಷ್ಟ ಔಷಧಿ ಅಥವಾ ಲಸಿಕೆ ಇಲ್ಲ. ಸೊಳ್ಳೆ ಪರದೆ ಬಳಕೆ, ಮನೆಯ ಸುತ್ತ-ಮುತ್ತ ನೀರು ನಿಲ್ಲದಂತೆ ನೋಡಿಕೊಂಡು ಸ್ವಚ್ಛತೆ ಕಾಪಾಡುವುದು, ಸೊಳ್ಳೆಗಳ ನಿಯಂತ್ರಣ ಕ್ರಮದ ಅನುಸರಿಸುವಿಕೆ, ನೀರಿನ ತೊಟ್ಟೆಯನ್ನು ಆಗಾಗ್ಗೆ ತೊಳೆಯುವುದು, ಬಯಲು ತ್ಯಾಜ್ಯಗಳಾದ ಟಯರ್, ಎಳೆ ನೀರಿನ ಚಿಪ್ಪು, ಒಡೆದ ಬಾಟಲಿಯಲ್ಲಿ ಮಳೆ ನೀರು ಸಂಗ್ರಹವಾಗದಂತೆ ಎಚ್ಚರ ವಹಿಸುವಂತಹ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ಡೆಂಘೆ ಜ್ವರ ಬರದಂತೆ ತಡೆಯಬಹುದಾಗಿದೆ ಎಂದು ತಿಳಿಸಿದರು.
ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್. ಬಿರಾದಾರ, ಮುಖ್ಯ ಶಿಕ್ಷಕ ದೇವೇಂದ್ರಪ್ಪ ಗಣಮುಖಿ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ರೇಷ್ಮಾ ನಕ್ಕುಂದಿ, ನಾಗೇಶ್ವರಿ ಮುಗಳಿವಾಡಿ, ಮಂಗಲಾ ಚಂದಾಪುರೆ, ಜಗನಾಥ ಗುತ್ತೇದಾರ, ಗುರುರಾಜ ಕೈನೂರ್, ಸಂಗಮ್ಮ ಅತನೂರ, ಗಂಗಾಜ್ಯೋತಿ ಗಂಜಿ, ಶ್ರೀದೇವಿ ಸಾಗರ, ಚಂದ್ರಕಲಾ ಮಠಪತಿ, ನಾಗಮ್ಮ ಚಿಂಚೋಳಿ, ಸಿದ್ರಾಮ ಹೊಸಮನಿ ಸೇರಿದಂತೆ ಇನ್ನಿತರರು ಇದ್ದರು.