ಸೌಲಭ್ಯಕ್ಕೆ ಒತ್ತಾಯಿಸಿ ನಿಂಬರಗಾ ಗ್ರಾಪಂ ಮುಂದೆ ದಲಿತ ಸೇನೆ ಪ್ರತಿಭಟನೆ
ಆಳಂದ:ಜು.8: ತಾಲೂಕಿನ ನಿಂಬರಗಾ ಗ್ರಾಮದಲ್ಲಿ ಸಿದ್ಧಾರ್ಥ ಬಡಾವಣೆಗೆ ಮೂಲಸೌಲಭ್ಯಗಳನ್ನು ಕಲ್ಪಿಸುವಲ್ಲಿ ಇಲ್ಲಿನ ಅಭಿವೃದ್ಧಿ ಅಧಿಕಾರಿಗಳು ವಿಫಲರಾಗಿದ್ದು ಕೂಡಲೇ ಕ್ರಮ ಜರುಗಿಸಬೇಕು ಹಾಗೂ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿ ದಲಿತ ಸೇನೆಯ ತಾಲೂಕು ಘಟಕದ ಕಾರ್ಯಕರ್ತರು ಗ್ರಾಪಂ ಕಚೇರಿಯ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಆಗಮಿಸಿದ್ದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಾನಪ್ಪ ಕಟ್ಟಿಮನಿ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ ಸೇನೆಯ ತಾಲೂಕು ಅಧ್ಯಕ್ಷ ಚಂದ್ರಶಾ ಗಾಯಕವಾಡ ಮತ್ತು ಪ್ರಧಾನ ಕಾರ್ಯದರ್ಶಿ ದತ್ತಾತ್ರೆಯ ಕಟ್ಟಿಮನಿ ಅವರು, ನಿಂಬರಗಾದಲ್ಲಿ ಸರಿಯಾಗಿ ಚರಂಡಿಗಳಿಲ್ಲ. ಕುಡಿಯುವ ನೀರಿನ ಸಮಸ್ಯೆ ಎದುರಾದರು ಸ್ಪಂದನೆ ದೊರೆಯುತ್ತಿಲ್ಲ, ವಿದ್ಯುತ್ ಸಂಪರ್ಕವಿಲ್ಲದೆ ಪರದಾಡುವಂತಾಗಿದೆ. ರಸ್ತೆಯ ಜಂಗಲ್ ಕಟಿಂಗ ಕೈಗೊಳ್ಳುತ್ತಿಲ್ಲ ಎಂದು ಅವರು ಆಕ್ರೋಶ ಹೊರಹಾಕಿದರು.
ಮನವಿ ಸ್ವೀಕರಿಸಿದ ತಾಪಂ ಇಒ ಮಾನಪ್ಪ ಕಟ್ಟಿಮನಿ ಅವರು ಈ ಕುರಿತು ಸಂಬಂಧಿತ ಅಭಿವೃದ್ಧಿ ಅಧಿಕಾರಿಗಳಿಗೆ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಸೂಚನೆ ಕೈಗೊಳ್ಳಲಾಗುವುದು ಕಾಲಾವಕಾಶ ನೀಡಬೇಕು ಎಂದು ಭರವಸೆ ನೀಡಿದ ಅವರು, ಸ್ಥಳದಲ್ಲೇ ಹಾಜರಿದ್ದ ನೀರು ಸರಬರಾಜು ಇಂಜಿನಿಯರ್ ಮತ್ತು ಅಭಿವೃದ್ಧಿ ಅಧಿಕಾರಿಗಳಿಗೆ ಗ್ರಾಮಗಳಲ್ಲಿ ಸಮಸ್ಯೆಗಳನ್ನು ತಕ್ಷಣಕ್ಕೆ ಸ್ಪಂದಿಸಬೇಕು ಎಂದು ತಾಕೀತು ಮಾಡಿದ ಮೇಲೆ ಪ್ರತಿಭಟನಾಕಾರರು ಪ್ರತಿಭಟನೆ ಹಿಂದಕ್ಕೆ ಪಡೆದುಕೊಂಡರು.
ನಿಂಬರಗಾ ದಲಿತ ಸೇನೆ ಗ್ರಾಮ ಘಟಕದ ಅಧ್ಯಕ್ಷ ವಸಂತ ಎಂ. ಕುಮಸಿ, ಪ್ರಧಾನ ಕಾರ್ಯದರ್ಶಿ ಶಶಿಧರ್ ಎಂ. ನವರಂಗ, ಸಿದ್ಧಾರ್ಥ ನಗರ ನಿವಾಸಿ ಶಾಂತು ಕಾಂಬಳೆ, ಹಣಮಂತ ಬೆಣ್ಣಶಿರೂರ, ಬಸವರಾಜ ತೆಗನೂರ ಸೇರಿದಂತೆ ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು.