ಮಟಕಾ: ಇಬ್ಬರ ಬಂಧನ
ಕಲಬುರಗಿ,ಜು.8-ನಗರದ ಸರಸ್ವತಿ ಗೋದಾಮು ಕಾಲೋನಿಯ ನೆಮ್ಮದಿ ಕೇಂದ್ರದ ಹತ್ತಿರ ಮತ್ತು ಖಾದ್ರಿ ಚೌಕ್‍ದಿಂದ ಗಂಗಾನಗರ ಕಡೆಗೆ ಹೋಗುವ ರಸ್ತೆಯಲ್ಲಿ ಮಟಕಾ ನಂಬರ್ ಬರೆದುಕೊಳ್ಳುತ್ತಿದ್ದ ಇಬ್ಬರನ್ನು ಸಿಸಿಬಿ ಘಟಕದ ಪೊಲೀಸರು ಬಂಧಿಸಿ 6,300 ರೂ.ನಗದು, ಮಟಕಾ ಚೀಟಿ ಮತ್ತು ಬಾಲ್ ಪೆನ್ ಜಪ್ತಿ ಮಾಡಿದ್ದಾರೆ.
ಸರಸ್ವತಿ ಗೋದಾಮು ಕಾಲೋನಿಯ ನೆಮ್ಮದಿ ಕೇಂದ್ರದ ಹತ್ತಿರ ಮಟಕಾ ನಂಬರ್ ಬರೆದುಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಿಸಿಬಿ ಘಟಕದ ಪಿಐ ದಿಲೀಪಕುಮಾರ ಬಿ.ಸಾಗರ, ಸಿಬ್ಬಂದಿಗಳಾದ ರವೀಂದ್ರಕುಮಾರ, ಶ್ರೀಶೈಲ್, ಸುನೀಲಕುಮಾರ ಅವರು ದಾಳಿ ನಡೆಸಿ ಆಳಂದ ಚೆಕ್ ಪೋಸ್ಟ್ ನಿವಾಸಿ ಮಂಜುನಾಥ ದೇವಾನಂದ ಕೊರಳ್ಳಿ (30) ಎಂಬಾತನನ್ನು ಬಂಧಿಸಿ 3,100 ರೂ.ನಗದು, ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ ಜಪ್ತಿ ಮಾಡಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ನಗರದ ಖಾದ್ರಿ ಚೌಕ್‍ದಿಂದ ಗಂಗಾನಗರ ಕಡೆಗೆ ಹೋಗುವ ರಸ್ತೆಯಲ್ಲಿ ಮಟಕಾ ನಂಬರ್ ಬರೆದುಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಿಸಿಬಿ ಘಟಕದ ಪಿಎಸ್‍ಐ ಶಿವಪ್ಪ, ಸಿಬ್ಬಂದಿಗಳಾದ ಅಶೋಕ ಕಟಕೆ, ಯಲ್ಲಪ್ಪ, ಶಿವಕುಮಾರ, ನಾಗರಾಜ ಅವರು ದಾಳಿ ನಡೆಸಿ ಆಳಂದ ತಾಲ್ಲೂಕಿನ ರುದ್ರವಾಡಿ ಗ್ರಾಮದ ಹಸನಸಾಬ ಚಾಂದಸಾಬ ಉಜಾಡೆ (40) ಎಂಬಾತನನ್ನು ಬಂಧಿಸಿ 3,200 ರೂ.ನಗದು, ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ ಜಪ್ತಿ ಮಾಡಿದ್ದಾರೆ.
ಬ್ರಹ್ಮಪುರ ಮತ್ತು ಆರ್.ಜಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ.