ಬಳ್ಳಾರಿ ನಗರಾಭಿವೃದ್ಧಿಗಾಗಿಸೂಕ್ತ ಕ್ರಮಕ್ಕೆ ಬಿ.ಎನ್.ಹೆಚ್.ಎಸ್ ಆಗ್ರಹ
ಸಂಜೆವಾಣಿ ವಾರ್ತೆ
ಬಳ್ಳಾರಿ, ಜು.08:  ನಗರವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ನಾಲ್ಕು ದಿಕ್ಕುಗಳಲ್ಲಿ ವಿಸ್ತಾರ ಗೊಳ್ಳುತ್ತಿದೆ. ಕಳೆದ ಒಂದು ದಶಕದಲ್ಲಿ ಎಲ್ಲಾ ವಿಧದ ವಾಹನಗಳ ಸಂಖ್ಯೆ ದ್ವಿಗುಣವಾಗಿದೆ, ಜನಸಂಖ್ಯೆಯು ಹೆಚ್ಚಿದೆ ಆದರೆ ಇದಕ್ಕನುಗುಣವಾಗಿ ಸಾರ್ವಜನಿಕ ಸೌಲಭ್ಯಗಳು ವಿಸ್ತರಣೆಯಾಗಿಲ್ಲ, ನಗರಪಾಲಿಕೆಯ ಕಾಮಗಾರಿಗಳು ನಿರಂತರವಾಗಿ ನಡೆಯುತ್ತಲಿದ್ದರೂ, ಅವು ಯೋಜನಾ ಬದ್ಧವಾಗಿರುವುದಿಲ್ಲ. ಆದ್ಯತೆಗೆ ಅನುಗುಣವಾಗಿರುವುದಿಲ್ಲ, ಅವುಗಳಲ್ಲಿ ಗುಣಮಟ್ಟದಲ್ಲಿ ಕೊರತೆ ಎದ್ದು ಕಾಣುತ್ತದೆ ಹಾಗೂ ನಿರ್ವಹಣೆ ಎನ್ನುವುದು ಶೂನ್ಯವಾಗಿದೆ. ಈ ಹಿನ್ನೆಲೆಯಲ್ಲಿ ನಗರದ ಅಭಿವೃದ್ಧಿಗೆ ಸೂಕ್ತಕ್ರಮ ಕೈಗೊಳ್ಳುವಂತೆ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸುವಂತೆ ಬಳ್ಳಾರಿ ನಾಗರೀಕ ಹೋರಾಟ ಸಮಿತಿ ಆಗ್ರಹಿಸಿದೆ.
ಪಾಲಿಕೆಯ ಮೇಯರ್ ಮುಲ್ಲಂಗಿ ನಂದೀಶ್ ಅವರನ್ನು ಭೇಟಿ ಮಾಡಿ ಮನವಿ ಪತ್ರವನ್ನು ಸಲ್ಲಿಸಿದ್ದು, ನಗರದ ಅಭಿವೃದ್ಧಿಯ ದೃಷ್ಠಿಯಿಂದ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದೆ.
 ಬೇಡಿಕೆಗಳು :
ನಗರದಿಂದ ಹತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ ವರ್ತುಲ ರಸ್ತೆ ನಿರ್ಮಿಸಿ, ಸುಧಾ ಕ್ರಾಸ್ ರೈಲ್ವೆ ಕ್ರಾಸಿಂಗ್ ಮೇಲೆ ಸೇತುವೆ ನಿರ್ಮಿಸಿ, ನಗರದ ಎಲ್ಲಾ ಬಡಾವಣೆಗಳಿಗೆ ಶುದ್ಧ ಕುಡಿಯುವ ನೀರನ್ನು ಪ್ರತಿ 3 ದಿನಕ್ಕೊಮ್ಮೆ ಸರಬರಾಜು ಮಾಡಿ. ಕುಡಿಯುವ ನೀರು ಚರಂಡಿ ನೀರಿನೊಂದಿಗೆ ಮಿಶ್ರಿತವಾಗುವುದನ್ನು ತಡೆಯಿರಿ, ಒಂದು ವರ್ಷದಿಂದ ನೆನೆಗುದಿಗೆ ಬಿದ್ದಿರುವ ರಾಯಲ್ ಸರ್ಕಲ್ ಗಡಿಯಾರ ಕಂಬವನ್ನು ತುರ್ತಾಗಿ ಪೂರ್ಣಗೊಳಿಸಿ, ಸಂಚಾರವನ್ನು ಸುಗಮಗೊಳಿಸುವಂತೆ ಮನವಿ ಮಾಡಿದ್ದಾರೆ. ಮೋತಿ ಸರ್ಕಲ್ ರೈಲ್ವೆ ಮೇಲ್ಸೇತುವೆ ಅಗಲೀಕರಣ ಮಾಡಲು ಕ್ರಮಕೈಗೊಳ್ಳಿ. ನಗರಾದ್ಯಂತ ಅವೈಜ್ಞಾನಿಕವಾಗಿ ರಸ್ತೆ ಮಾಡುವ ಬದಲಾಗಿ ರಸ್ತೆಗಳ ಮಟ್ಟವನ್ನು ಎತ್ತರಿಸದಂತೆ ಕ್ರಮ ಕೈಗೊಳ್ಳಿ, ಹಾಗೂ ಮಳೆ ನೀರು ಸರಾಗವಾಗಿ ಚಲಿಸಲು, ರಸ್ತೆ ಬದಿಗಳಲ್ಲಿ ಹೊರ ಚರಂಡಿ ನಿರ್ಮಿಸಿ. ಕಸ, ಮಣ್ಣು ತುಂಬಿ ನೀರು ಚಲಿಸದಂತಾಗಿ ದುರ್ನಾತ ಬೀರುತ್ತಿರುವ ಹೊರಚರಂಡಿಗಳನ್ನು ಸ್ವಚ್ಛಗೊಳಿಸಿ. ಒಳಚರಂಡಿ ವ್ಯವಸ್ಥೆಯನ್ನು ಸಮರ್ಪಕವಾಗಿ ದುರಸ್ತಿಗೊಳಿಸಿ, ಒಳಚರಂಡಿ ನೀರು ರಸ್ತೆ ಮೇಲೆ ಹರಿಯುವುದನ್ನು ತಡೆಗಟ್ಟಿ ಎಂದಿದ್ದಾರೆ.
 ನಗರದ ಎಲ್ಲಾ ರಸ್ತೆಗಳಲ್ಲಿ ಕುಣಿಗಳನ್ನು (ಪಾಟ್ ಹೋಲ್ಸ್) ಮುಚ್ಚಲು ಕ್ರಮ ಕೈಗೊಳ್ಳಿ, ನಗರಾದ್ಯಂತ ಎಲ್ಲಾ ರಸ್ತೆಗಳ ಎರಡು ಬದಿಗಳಲ್ಲಿ ಗಿಡಗಳನ್ನು ನೆಟ್ಟು ನಿರ್ವಹಣೆ ಮಾಡಿ, ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಯನ್ನು ಈ ಹಿಂದೆ ಇದ್ದಂತೆ ಸಂಪೂರ್ಣ ಜವಾಬ್ದಾರಿಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ವಹಿಸಿ. ನಿರ್ವಹಣೆಗೆ ಅವಶ್ಯಕ ಹಣವನ್ನು ನೀಡುವಂತೆ ಕೋರಿದ್ದಾರೆ..         ಬೀದಿ ನಾಯಿಗಳ ಹಾವಳಿಯಿಂದ ಈಗಾಗಲೇ ಅನೇಕ ಜನ ಅಪಘಾತಕ್ಕೆ ಬಲಿಯಾಗಿದ್ದಾರೆ. ಇವುಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಿ, ಬಿಡಾಡಿ ದನಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಿ. ನಗರದಲ್ಲಿ ಬೀದಿ ದೀಪ ಇಲ್ಲದೆಡೆ. ಬೀದಿ ದೀಪಗಳನ್ನು ನಿರ್ಮಿಸಿ, ನಗರದಲ್ಲಿ ಸಿಟಿ ಬಸ್ಸುಗಳ ಸಂಖ್ಯೆಯನ್ನು ಹೆಚ್ಚಿಸಬೇಕು, ಜನ ನಿಬಿಡ ಪ್ರಮುಖ ರಸ್ತೆಗಳಲ್ಲಿ ಶೌಚಾಲಯ/ಮೂತ್ರಾಲಯಗಳನ್ನು ನಿರ್ಮಿಸಿ., ಸತ್ಯನಾರಾಯಣ ಪೇಟೆ, ಕೆಳಸೇತುವೆಯಲ್ಲಿ ಚರಂಡಿ ನೀರು ನಿಲ್ಲದಂತೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಿ ಎಂದಿದ್ದಾರೆ, ತಾರಾನಾಥ ಆಸ್ಪತ್ರೆಯ ಎದುರುಗಡೆ ರಸ್ತೆ ಡಿವೈಡರ್ ತೆರವುಗಳಿಸಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಅನುಕೂಲ ಮಾಡಿಕೊಡಿ, ನೀರಿನ ಪೈಪ್ ಹಾಗೂ ಒಳಚರಂಡಿ ರಿಪೇರಿ ಮಾಡುವ ಸಂದರ್ಭದಲ್ಲಿ ಅಗೆತ ಮಾಡಿದ ರಸ್ತೆಗಳನ್ನು ಪುನಃ ಸರಿಪಡಿಸಿ, ನಗರದ ಉದ್ಯಾನವನ ಸೇರಿದಂತೆ ಖಾಸಗಿ ಮನೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಉತ್ಪತಿಯಾಗುವ ಎಲೆ ಕಸವನ್ನು ಸುಟ್ಟು ಹಾಕದೆ, ಸಂಗ್ರಹಣೆ ಮಾಡಿ, ಗೊಬ್ಬರವನ್ನಾಗಿ ಮಾರ್ಪಡಿಸಬೇಕು ಎಂದಿದೆ.
ಮನವಿ ಪತ್ರ ಸಲ್ಲಿಸಿದ ಸಂದರ್ಭದಲ್ಲಿ ಬಿ.ಎನ್.ಹೆಚ್.ಎಸ್ ಸಂಚಾಲಕರಾದ ಸೋಮಶೇಖರ ಗೌಡ, ನಿವೃತ್ತ ಮುಖ್ಯ ಇಂಜಿನಿಯರ್ ಉದ್ದಿಹಾಳ್, ನಿವೃತ್ತ ಉಪನ್ಯಾಸಕರು ನರಸಣ್ಣ, KUWS ನ ನಿವೃತ್ತ ನೌಕರರು ಮುರ್ತುಜಾ ಸಾಬ್, ಗುರುರಾಜ್, ಬಾಬು, ಚಂದ್ರಶೇಖರ, ನಾಗರತ್ನ, ಡಾ.ಪ್ರಮೋದ್, ಶಾಂತಾ ಮುಂತಾದವರು ಉಪಸ್ಥಿತರಿದ್ದರು.
One attachment • Scanned by Gmail