ನಾಗೇನಹಳ್ಳಿಯಲ್ಲಿ ಶಾಸಕ ಗವಿಯಪ್ಪ ಜನ ಸಂಪರ್ಕಮೂಲ ಸೌಕರ್ಯ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ
ಸಂಜೆವಾಣಿ ವಾರ್ತೆ
ವಿಜಯನಗರ, ಜು.08: ಶಾಸಕ ಎಚ್.ಆರ್.ಗವಿಯಪ್ಪ ಅವರು ಶನಿವಾರ ತಾಲ್ಲೂಕಿನ ನಾಗೇನಹಳ್ಳಿಯಲ್ಲಿ ಜನ ಸಂಪರ್ಕ ಸಭೆ ನಡೆಸಿ, ಗ್ರಾಮದಲ್ಲಿ ಸಂಚರಿಸಿ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲಿಸಿದರು.
ಸಾರ್ವಜನಿಕರ ಕುಂದು ಕೊರತೆ ಆಲಿಸಿದ ಶಾಸಕರಿಗೆ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ಸ್ಥಾಪಿಸಬೇಕೆಂದು ಎಸ್‍ಡಿಎಂಸಿ ಅಧ್ಯಕ್ಷ ಡಿ.ರವಿಶಂಕರ್ ಹಾಗೂ ಇತರರು ಮನವಿ ಮಾಡಿದರು. ಇದೇ ವೇಳೆ ಅಗತ್ಯವಿರುವ ಕಡೆ ಚರಂಡಿ, ಕಾಂಕ್ರೀಟ್ ರಸ್ತೆಗಳ ನಿರ್ಮಾಣ, ಕುಡಿಯುವ ನೀರಿನ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಇದೇ ವೇಳೆ ಶಾಸಕರು ಸೂಚಿಸಿದರು.
ಬಳಿಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕೊಠಡಿ ಉದ್ಘಾಟಿಸಿ, ಸರ್ಕಾರಿ ಶಾಲೆಯಲ್ಲಿ ಆರಂಭಗೊಂಡಿರುವ ಆಂಗ್ಲ ಮಾಧ್ಯಮ ಎಲ್‍ಕೆಜಿ, ಯುಕೆಜಿಗೆ ಚಾಲನೆ ನೀಡಿದರು. ಬಳಿಕ ಅಂಗನವಾಡಿ ಭೇಟಿ ನೀಡಿ ಮಕ್ಕಳಿಗೆ ಪೋಷಕ ಉಂಡೆಗಳನ್ನು ತಿನ್ನಿಸಿದರು.
ಗ್ರಾಮ ಪಂಚಾಯತಿ ಅಧ್ಯಕ್ಷ ಎಂ.ದುರ್ಗಪ್ಪ, ಉಪಾಧ್ಯಕ್ಷರಾದ ಟಿ ಸವಿತಾ, ತಾಲ್ಲೂಕು ಪಂಚಾಯಿತಿ ಇಒ ಹರೀಶ್, ಚಂದ್ರಶೇಖರ್, ಅಲ್ಲಾಭಕ್ಷ ಇತರರು ಇದ್ದರು.
ವಿವಿಧ ಕಾಮಗಾರಿಗಳ ಉದ್ಘಾಟನೆ:
ಶಾಸಕ ಗವಿಯಪ್ಪ ಅವರು ಬೆನಕಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನರೇಗ ಯೋಜನೆ ಅಡಿಯಲ್ಲಿ ಅಂದಾಜು 15.70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಅಡುಗೆ ಕೋಣೆ ಮತ್ತು ಡೈನಿಂಗ್ ಹಾಲ್ ಮತ್ತು 3 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಹೈಟೆಕ್ ಶೌಚಾಲಯವನ್ನು ಉದ್ಘಾಟಿಸಿದರು.
ನಂತರ 82 ಡಣಾಪುರ ಗ್ರಾಮಕ್ಕೆ ಭೇಟಿ ನೀಡಿ 46.70 ಲಕ್ಷ ರೂ. ವೆಚ್ಚದ ಜಲಜೀವನ್ ಮಿಷನ್ ಮನೆ ಮನೆಗೆ ಗಂಗೆ ಕಾಮಗಾರಿಯನ್ನು ಉದ್ಘಾಟಿಸಿದರು. ಅಲ್ಲಿಯ ಮುಖ್ಯ ಸಮಸ್ಯೆಯಾದ ವಸತಿ ನಿವೇಶನಗಳಿಗೆ ಹಂಚಿಕೆಗೆ ಸಂಬಂಧಿಸಿದಂತೆ ಬೇಗನೆ ಇತ್ಯರ್ಥಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಚುನಾವಣೆಯಲ್ಲಿ ಗೆದ್ದು ಬಂದು ನಿಮ್ಮೊಂದಿಗೆ ಸಂಭ್ರಮಿಸುವುದಕ್ಕಿಂತ ಅಧಿಕಾರಿಗಳೊಂದಿಗೆ ನಿಮ್ಮ ಗ್ರಾಮಕ್ಕೆ ಬಂದು ನಿಮ್ಮ ಸಮಸ್ಯೆಗಳಿಗೆ ಧ್ವನಿಯಾಗಿದ್ದೇನೆ. ನಿಮ್ಮೂರಿನ ಯಾವುದೇ ಸಮಸ್ಯೆಯಿದ್ದರೂ, ತ್ವರಿತಗತಯಲ್ಲಿ ಪರಿಹರಿಸಲು ಬದ್ಧನಾಗಿದ್ದೇನೆ.
– ಎಚ್.ಆರ್.ಗವಿಯಪ್ಪ, ಶಾಸಕ.