ಗೃಹಿಣಿಯ ಶಾಂತಿ-ಸಹನೆ ಸಮಾಜಕ್ಕೆ ಶ್ರೀರಕ್ಷೆ ; ಶಿವಶಾಂತವೀರ ಶರಣರು
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು. 08: ಗೃಹಿಣಿ ಸಚ್ಛಾರಿತ್ರವಂತಳಾದಲ್ಲಿ ಕುಟುಂಬದಲ್ಲಿ ಶಾಂತಿ – ನೆಮ್ಮದಿ ಮತ್ತು ಸಂತೋಷಗಳು ನೆಲೆಸಿ ಕುಟುಂಬವು ಸಂತೃಪ್ತವಾಗಿರುತ್ತದೆ ಎಂದು ಬಳಗಾನೂರು ಸುಕ್ಷೇತ್ರದ ಶಿವಶಾಂತವೀರ ಶರಣರು ಆಶೀರ್ವದಿಸಿದ್ದಾರೆ.
ನಗರದ ಬಸವಭವನದಲ್ಲಿ ಭಾನುವಾರ ನಡೆದ ಚಿಕೇನಕೊಪ್ಪದ ಶ್ರೀಚನ್ನವೀರ ಶರಣದ 29ನೇ ಪುಣ್ಯಸ್ಮರಣೆ ಹಾಗೂ 1008 ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ಮತ್ತು ಶ್ರೀ ಶಿವಶಾಂತವೀರ ಶರಣರ ತುಲಾಭಾರದ ಅಧ್ಯಕ್ಷತೆಯ ಆಶೀರ್ವಚನ ಮಾಡಿದರು.
ಪರರನ್ನು ವಂಚಿಸದೇ ಸ್ವಂತದ ದುಡಿಮೆಯಿಂದ – ಸ್ವಯಂಶ್ರಮದಿಂದ ಮಾಡಿದ ಸಂಪಾದನೆಯಿಂದ ಆ ಕುಟುಂಬದಲ್ಲಿ ಸದಾಕಾಲ ಆಹ್ಲಾದಕರ ವಾತಾವರಣ ಇರಲಿದೆ. ಸ್ವಂತದ ದುಡಿಮೆಯಿಂದ ಮಾಡಿದ ದಾನ-ಧರ್ಮದ ಪಾಲನೆ ಮತ್ತು ಸೇವೆಗಳು ಸದಾಕಾಲ ಶ್ರೇಷ್ಠವಾಗಿರುತ್ತವೆ ಎಂದರು.
ಗುರುವಿನ ಆಶೀರ್ವಚನಕ್ಕೆ ಭಕ್ತನ – ಅನುಯಾಯಿಯ ಬದುಕಿನಲ್ಲಿ ಏನನ್ನಾದರೂ ಬದಲಾವಣೆ ಮೂಡಿಸುವ ಶಕ್ತಿ ಇರುತ್ತದೆ. ಬಸವಾದಿ ಶರಣರ ತತ್ವಗಳನ್ನು – ಬದುಕನ್ನು ಲೋಕಕ್ಕೆ ತಿಳಿಸಲು ನಿಸ್ವಾರ್ಥ ಸೇವೆ ಸಲ್ಲಿಸಿದವರು ಚಿಕೇನಕೊಪ್ಪದ ಶ್ರೀ ಚನ್ನವೀರ ಶರಣರು ಎಂದರು.
ಈ ಲೋಕದಲ್ಲಿ ಪಡೆದ ಅಲೌಕಿಕ ಅನುಭವಗಳ ಮೂಲಕ ಸಮಾಜದಲ್ಲಿ ಕಾಯಕತತ್ವ ಮತ್ತು ಕಾಯಕಯೋಗಿಯಾಗಿ ಜೀವಿಸಿದವರು ಚನ್ನವೀರ ಶರಣರು. ನುಡಿದಂತೆ ನಡೆದವರು, ನಡೆದಂತೆ ನುಡಿದವರು ಚನ್ನವೀರ ಶರಣರು. ಕಾಯಕದ ಮೂಲಕ ಕೈವಲ್ಯವನ್ನು ಸಾಧಿಸಿದವರು ಗುರುಗಳು ಎಂದರು.
ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಹರ್ಲಾಪುರದ ಕೊಟ್ಟೂರೇಶ್ವರ ಮಠದ ಕೊಟ್ಟೂರೇಶ್ವರ ಮಹಾಸ್ವಾಮಿಗಳು, ಚನ್ನವೀರ ಶರಣರ ನಾಮಸ್ಮರಣೆಯಿಂದ ಪುಣ್ಯ ಪ್ರಾಪ್ತಿಯಾಗಲಿದೆ. ಸತ್ ಚಿಂತನೆಯಿಂದ ಜೀವನ ಪಾವನವಾಗಲಿದೆ. ಮುತ್ತೈದೆಯರಿಗೆ ಉಡಿ ತುಂಬುವ ಮೂಲಕ ನಾಡಿನ ಒಳಿತನ್ನು ಬಯಸುವ ಆಧ್ಯಾತ್ಮ ಶಕ್ತಿ ಹೆಚ್ಚಲಿದೆ ಎಂದರು.
ಶ್ರೀ ಚನ್ನವೀರ ಶರಣರು ಮೌನತಪಸ್ವಿಗಳಾಗಿ ಮಾಡಿದ ಸಾಧನೆ ಅಗಾಧವಾದದ್ದು. ಚನ್ನವೀರ ಶರಣರ ಆಧ್ಯಾತ್ಮ ಶಕ್ತಿ, ಧೈವೀ ಸಂಕಲ್ಪ ಮತ್ತು ಮಾತೆಯರಿಗೆ ಗೌರವಿಸುವ ಪರಿ ಮಹತ್ತರವಾದದ್ದು. ಸಮಾಜದಲ್ಲಿ ಮುತ್ತೈದೆಯರಿಗೆ ಉಡಿ ತುಂಬುವ ಮೂಲಕ ಸಮಾಜದಲ್ಲಿ ಮಹಿಳೆಯರ ಗೌರವವನ್ನು ಶರಣರು ಹೆಚ್ಚಿಸಿದರು ಎಂದರು.
ಚನ್ನವೀರ ಶರಣರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಕೊತ್ತಲಚಿಂತೆಯ ಶರಣಕುಮಾರ್ ಅವರು ಪ್ರಾರ್ಥನೆ ಸಲ್ಲಿಸಿದರು. ಸುಧಾಕರ ಅವರು ತಬಲಾ ಸಾಥ್ ನೀಡಿದರು. ಬಸವರಾಜ್ ಅಮಾತಿ ಅವರು, ಚಿಕೇನಕೊಪ್ಪ ಚನ್ನವೀರಶರಣರ ಮೌನ ಅಗಾಧವಾದ ಶಕ್ತಿಯನ್ನು ಹೊಂದಿತ್ತು. ಚನ್ನವೀರ ಶರಣರು ಮೌನಾಚರಣೆಯಲ್ಲೇ ಸಮಾಜದ ಅಂಕುಡೊಂಕುಗಳನ್ನು ತಿದ್ದುತ್ತಿದ್ದರು ಎಂದು ಪ್ರಾಸ್ತಾವಿಕ ಭಾಷಣದಲ್ಲಿ ತಿಳಿಸಿದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಕೆ.ಬಿ. ಸಿದ್ದಲಿಂಗಪ್ಪ ಅವರು ಕಾರ್ಯಕ್ರಮ ನಿರೂಪಿಸಿದರು.
ಹದಿಮೂರಕ್ಕೂ ಹೆಚ್ಚಿನ ಭಕ್ತಾಧಿಗಳು ಕುಟುಂಬ ಸಮೇತರಾಗಿ ಶಿವಶಾಂತವೀರ ಶರಣರ ತುಲಾಭಾರ ಸೇವೆಯನ್ನು ನೆರವೇರಿಸಿ, ಭಕ್ತಿಯನ್ನು ಸಮರ್ಪಿಸಿದರು.
ಗಣ್ಯರಾದ ಅಲ್ಲಂ ಪ್ರಶಾಂತ್, ಎಚ್. ತಿಮ್ಮನಗೌಡ, ರಾವೂರ್ ಸುನೀಲ್, ಎಂ. ಸಿದ್ಧರಾಮನಗೌಡ, ಕೆ.ಎ. ರಾಮಲಿಂಗಪ್ಪ, ಚಾನಾಳ್ ಶೇಖರ್, ರಾಜಗೋಪಾಲರೆಡ್ಡಿ, ಹರಹುಣಸಿಗಿಯ ಸಂಗನಗೌಡ ಪಾಟೀಲ್ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಿದ್ಧಾಂತ ಶಿಖಾಮಣಿ ಪಠಣ ಸಮಿತಿಯ ಸ್ವಯಂ ಸೇವಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಿದ್ಧಾಂತ ಶಿಖಾಮಣಿಯನ್ನು ಪಠಣ ಮಾಡಿ, ಅನೇಕರ ಗಮನ ಸೆಳೆದರು.