ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ
ಬಾಗಲಕೋಟೆ, ಜು8 : ಯಾವುದೇ ಒಂದು ಅಭಿವೃದ್ದಿ ಕಾರ್ಯಕ್ಕೆ ಕಾಮಗಾರಿ ಕೈಗೊಳ್ಳಲು ಕ್ರೀಯಾ ಯೋಜನೆ ರೂಪಿಸುವಲ್ಲಿ ಸಾರ್ವಜನಿಕರ ಅಭಿಪ್ರಾಯ ಅಗತ್ಯವಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಹೇಳಿದರು.
ಜಿಲ್ಲಾ ಪಂಚಾಯತ ನೂತನ ಸಭಾಭವನದಲ್ಲಿ ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ ಹಾಗೂ ಜಿಲ್ಲಾ ಪಂಚಾಯತ ಸಹಯೋಗದಲ್ಲಿ ಸಾಮಾಜಿಕ ಪರಿಶೋಧನಾ ಗ್ರಾಮಸಭೆ ಅಧ್ಯಕ್ಷತೆ ವಹಿಸುವ ಅಧಿಕಾರಿಗಳಿಗೆ ಹಮ್ಮಿಕೊಂಡ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ತೆಗೆದುಕೊಳ್ಳಬೇಕಾಗುತ್ತದೆ. ಇದಕ್ಕೆ ಸಾರ್ವಜನಿಕರ ಅಭಿಪ್ರಾಯ ಮುಖ್ಯವಾಗುತ್ತದೆ ಎಂದರು.
ರಸ್ತೆ ಸೇರಿದಂತೆ ಇತರೆ ವಿಶೇಷ ಕಾಮಗಾರಿಗಳ ಅನುಷ್ಟಾನದಲ್ಲಿ ಲೋಪದೋಷ ಕಂಡುಬರದಂತೆ ನೋಡಿಕೊಳ್ಳಬೇಕು. ಕಾಮಗಾರಿ ಅನುಷ್ಠಾನದಲ್ಲಿನ ನೂನ್ಯತೆ ಹಾಗೂ ದಾಖಲೆಗಳ ನಿರ್ವಹಣೆಯಲ್ಲಿ ಲೋಪವಾಗಬಾರದು. ಸರಕಾರದ ಪ್ರತಿಯೊಂದು ಯೋಜನೆಗಳು ಪಾರದರ್ಶಕತೆ ಅನುಸರಿಸಬೇಕು. ಹಾಗಾದರೆ ಮಾತ್ರ ಯೋಜನೆಗಳು ಸಫಲತೆ ಹೊಂದಲು ಸಾಧ್ಯವಾಗುತ್ತದೆ. ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳುವ ಮುನ್ನ ಗ್ರಾಮ ಸಭೆಗಳಲ್ಲಿ ಕೈಗೊಳ್ಳುವ ಕಾಮಗಾರಿ ಕುರಿತು ಸಾರ್ವಜನಿಕರಿಂದ ಅಭಿಪ್ರಾಯಗಳು ಪಡೆಯಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಗ್ರಾಮಸಭೆ ಅಧ್ಯಕ್ಷತೆ ವಹಿಸುವ ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ ಹಮ್ಮಿಕೊಂಡಿದ್ದು, ತರಬೇತಿಯ ಪೂರ್ಣ ಪ್ರಮಾಣದ ಲಾಭ ಪಡೆದುಕೊಳ್ಳಲು ತಿಳಿಸಿದರು.
ಕಾರ್ಯಾಗಾರದಲ್ಲಿ ಜಿ.ಪಂ ಉಪ ಕಾರ್ಯದರ್ಶಿ ಅಮರೇಶ ನಾಯಕ ಎಂ.ಜಿ.ಎನ್.ಆರ್.ಇ.ಜಿ.ಎ ಯೋಜನೆಯ ಮಾರ್ಗಸೂಚಿ, ಕೂಲಿ ಕಾರ್ಮಿಕರ ಹಕ್ಕು ಮತ್ತು ಆಯವ್ಯಯ, ಕಾಮಗಾರಿ ಪ್ರದರ್ಶನಗಳು, ಕಡ್ಡಾಯವಾಗಿ ಪಾಲಿಸಬೇಕಾದ ಅಂಶಗಳು, ಸಾಮಾಜಿಕ ಪರಿಶೋಧನಾ ನಿಯಗಳ ಬಗ್ಗೆ ತಿಳಿಸಿಕೊಟ್ಟರೆ, 15ನೇ ಹಣಕಾಸು ಆಯೋಗದ ಅನುದಾನ ಮಾರ್ಗಸೂಚಿಗಳು ಮತ್ತು ನಿಯಮಾವಳಿಗಳ ಬಗ್ಗೆ ಜಿ.ಪಂ. ಮುಖ್ಯ ಯೋಜನಾಧಿಕಾರಿ ಬಿ.ಆರ್.ಪುನಿತ್ ತಿಳಿಸಿಕೊಟ್ಟರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಕೆ.ನಂದನೂರ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆ ಮಾರ್ಗಸೂಚಿಗಳು ಮತ್ತು ನಿಯಮಾವಳಿ, ಪಿ.ಎಂ.ಪೋಷಣ್ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಕೇಶವ ಪೆಟ್ಲೂರ ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಯೋಜನೆ ಮಾರ್ಗಸೂಚಿ ಮತ್ತು ನಿಯಮಾವಳಿಗಳ ಬಗ್ಗೆ ತಿಳಿಸಿಕೊಟ್ಟರು. ಗ್ರಾಮಸಭೆ ಅಧ್ಯಕ್ಷತೆ ವಹಿಸುವ ನೋಡಲ್ ಅಧಿಕಾರಿಗಳ ಪಾತ್ರ ಮತ್ತು ಜವಾಬ್ದಾರಿಗಳ ಬಗ್ಗೆ ಜಿ.ಪಂ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಬಸವರಾಜ ಔರಸಂಗ ವಿವರವಾಗಿ ಹೇಳಿದರು.
ಕಾರ್ಯಾಗಾರದಲ್ಲಿ ಅಧಿಕಾರಿಗಳು ಉಪಸ್ಥಿತರಿದ್ದರು.