ಲಾರಿ ನಿಲುಗಡೆಗೆ ಸರ್ಕಾರಿ ನಿಯಮಾನುಸಾರ ಜಮೀನು
ಮಾಲೂರು.ಜು.೮- ಮಾಲೂರು ಕಂದಾಯ ವ್ಯಾಪ್ತಿಯ ಮಾಲೂರು ಟೇಕಲ್ ರಸ್ತೆಯ ಬಳಿ ಸ್ವಾಧೀನದಲ್ಲಿದ್ದ ಸರಕಾರಿ ಜಮೀನು ಪಟ್ಟಣದ ಅಬ್ದುಲ್ ರಜಾಕ್ ಎಂಬ ಕುಟುಂಬದವರ ಮನವೊಲಿಸಿ ಲಾರಿ ಅಸೋಸಿಯೇಷನ್ ನಿಲುಗಡೆಗೆ ಒಂದುವರೆ ಎಕರೆ ಜಮೀನು ಸರ್ಕಾರಿ ನಿಯಮಾನುಸಾರ ನೀಡಲಾಗುತ್ತಿದೆ. ಇದೊಂದು ಉತ್ತಮ ಬೆಳವಣಿಗೆ ಎಂದು ಶಾಸಕ ಕೆ ವೈ ನಂಜೇಗೌಡ ಹೇಳಿದರು.
ಪಟ್ಟಣದ ತಾಲೂಕು ಕಚೇರಿಯ ತಹಶೀಲ್ದಾರ್ ಸಭಾಂಗಣದಲ್ಲಿ ಲಾರಿ ಮಾಲೀಕರ ಸಂಘ ಹಾಗೂ ಅಬ್ದುಲ್ ರಜಾಕ್ ಕುಟುಂಬದವರ ಸಭೆ ನಡೆಸಿ ಮಾತನಾಡಿ, ಸುಮಾರು ವರ್ಷಗಳಿಂದ ಅಬ್ದುಲ್ ರಜಾಕ್ ಕುಟುಂಬದವರು ಮಾಲೂರು ಕಂದಾಯ ವ್ಯಾಪ್ತಿಯ ಸರ್ವೇ ನಂಬರ್ ೧೧೨ ಸರ್ಕಾರಿ ಜಮೀನಿನಲ್ಲಿ ಸ್ವಾಧೀನದಲ್ಲಿದ್ದು ಇತ್ತೀಚಿಗೆ ಲಾರಿ ಮಾಲೀಕರ ಸಂಘದವರು ಲಾರಿ ನಿಲುಗಡೆಗೆ ಜಮೀನು ಹುಡುಕಿ ಜಿಲ್ಲಾಧಿಕಾರಿಗಳ ಕಚೇರಿಗೆ ಮಂಜುರಾತಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಅಬ್ದುಲ್ ರಜಾಕ್ ಕುಟುಂಬದವರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಎರಡು ಕಡೆಯವರನ್ನು ಕರೆಸಿ ಸಭೆ ನಡೆಸಿ ಇಬ್ಬರನ್ನು ಮನವೊಲಿಸಿ ಸ್ವಾಧೀನದಲ್ಲಿರುವ ೪ ಎಕರೆ ಪೈಕಿ ಒಂದುವರೆ ಎಕರೆ ಲಾರಿ ನಿಲ್ದಾಣಕ್ಕೆ ಬಿಟ್ಟು ಕೊಡಲು ರಜಾಕ್ ಕುಟುಂಬದವರಿಗೆ ಸೂಚಿಸಲಾಗಿದೆ, ಸುಮಾರು ವರ್ಷಗಳಿಂದ ಭೂಸ್ವಾಧೀನದಲ್ಲಿರುವ ಕುಟುಂಬದವರಿಗೆ ಲಾರಿ ಮಾಲೀಕರ ಸಂಘದಿಂದ ಸೂಕ್ತ ಪರಿಹಾರ ನೀಡಲು ಒಪ್ಪಿದ ಹಿನ್ನೆಲೆಯಲ್ಲಿ ಲಾರಿ ಮಾಲೀಕರಿಗೆ ಒಂದುವರೆ ಎಕರೆ ಜಮೀನು ಮಂಜೂರು ಮಾಡಲು ಸರ್ವೆ ಸ್ಕೆಚ್ ನಡೆಸಿ ಜಿಲ್ಲಾಧಿಕಾರಿಗಳಿಗೆ ಕಡತ ರವಾನಿಸಲು ತೀರ್ಮಾನಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಮುನಿರಾಜು, ಕಾರ್ಯದರ್ಶಿ ರಾಮಕೃಷ್ಣಪ್ಪ, ಉಪಾಧ್ಯಕ್ಷ ಪಾಪುರೆಡ್ಡಿ, ಗೌರವಾಧ್ಯಕ್ಷ ಕೃಷ್ಣಪ್ಪ, ನಿರ್ದೇಶಕರಾದ ಶಫಿವುಲ್ಲಾ ಖಾನ್, ಬಸವರಾಜ್, ಕೃಷ್ಣರೆಡ್ಡಿ, ಮಂಜುನಾಥ್, ಜಾಕೀರ್ ಖಾನ್, ಶ್ರೀರಾಮ್, ಶಂಕರ್, ಎಚ್ ಆರ್ ಮಂಜುನಾಥ್, ಇನ್ನಿತರರು ಹಾಜರಿದ್ದರು.