ಜಾತ್ರೆ ಹಬ್ಬ ಹರಿದಿನಗಳು ಸೌಹಾರ್ದತೆ ಭಾವನೆಗಳದ್ದಾಗಿವೆ:ಡಿಎಸ್‍ಪಿ ನಂದಗಾವಿ
ತಾಳಿಕೋಟೆ:ಜು.8: ಈ ಹಿಂದಿನಿಂದ ಆಚರಿಸಿಕೊಂಡು ಬರಲಾಗುತ್ತಿರುವ ಜಾತ್ರೆ ಉತ್ಸವಗಳು ಹಾಗೂ ಹಬ್ಬ ಹರಿದಿನಗಳು ಸೌಹಾರ್ದತೆ ಭಾವನೆಗಳನ್ನು ಮೂಡಿಸುವಂತವುಗಳಾಗಿವೆ ಅಂತಹ ಆಚರಣೆಯತ್ತ ಮುನ್ನುಗ್ಗಿದ ಇಂದಿನ ದಿನಮಾನದಲ್ಲಿಯ ಆಚರಣೆಯಾಗುತ್ತಿರುವ ಉತ್ಸವಗಳಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಬರುವ ವ್ಯವಸ್ಥೆ ಎಲ್ಲರದ್ದಾಗಬೇಕೆಂದು ಬ.ಬಾಗೇವಾಡಿಯ ಡಿ.ಎಸ್.ಪಿ.ಬಲ್ಲಪ್ಪ ನಂದಗಾವಿ ಅವರು ನುಡಿದರು.
ರವಿವಾರರಂದು ಸ್ಥಳೀಯ ಶ್ರೀ ಖಾಸ್ಗತೇಶ್ವರ ಜಾತ್ರೋತ್ಸವ ಹಾಗೂ ಮೋಹರಂ ಹಬ್ಬ ಆಚರಣೆ ಕುರಿತು ಪೊಲೀಸ್ ಠಾಣೆಯಲ್ಲಿ ಕರೆಯಲಾದ ಶಾಂತಿ ಪಾಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು ಶ್ರೀ ಖಾಸ್ಗತೇಶ್ವರರ ಜಾತ್ರೆ ದಿ.11 ರಿಂದ ಪ್ರಾರಂಭಗೊಂಡು 19 ರಂದು ರಥೋತ್ಸವದೊಂದಿಗೆ ಮಂಗಲಗೊಳ್ಳಲಿದೆ ಆದರೆ ದಿ.17 ರಂದು ಭಜನೆಯ ಮುಕ್ತಾಯದಿನದಂದು ಅಂದೇ ಮೋಹರಂ ಹಬ್ಬದ ದೇವರುಗಳ ಧಪನದ ಕಾರ್ಯ ನಡೆಯುವದರಿಂದ ಎರಡೂ ಉತ್ಸವಗಳು ಅಂದೇ ಆಗುತ್ತಿದ್ದ ಕಾರಣದಿಂದ ಮುಸ್ಲಿಂ ಬಾಂದವರು ದಿ.17 ರಂದು ರಾತ್ರಿ 10 ಗಂಟೆಯ ಒಳಗೆ ದೇವರ ಧಪನ್ ಕಾರ್ಯಕ್ರಮವನ್ನು ಮುಗಿಸುವ ವ್ಯವಸ್ಥೆ ಮಾಡಬೇಕೆಂದರು.
ಶ್ರೀ ಖಾಸ್ಗತೇಶ್ವರರ ಜಾತ್ರೆಯಲ್ಲಿ ಆನೆ ಅಂಭಾರಿ ಮೆರವಣಿಗೆ ನಡೆಯುವ ಕಾರ್ಯಕ್ರಮ ಇದುದ್ದರಿಂದ ಸಂಬಂದಿಸಿದ ಶ್ರೀ ಮಠದ ಶ್ರೀಗಳು ಆ ಕಾರ್ಯಕ್ರಮದ ವಿವರಣೆ ಹಾಗೂ ಅಂಭಾರಿಯೊಂದಿಗೆ ಜರುಗಲಿರುವ ಗಂಗಸ್ಥಳದ ಮಾರ್ಗದ ವಿವರಣೆ ನೀಡಬೇಕೆಂದು ಅಧಿಕಾರಿ ನಂದಗಾವಿ ಅವರು ತಿಳಿಸಿದರು. ಇದು ಅಲ್ಲದೇ ಈ ಎರಡೂ ಉತ್ಸವಗಳಲ್ಲಿ ಡಿಜೆ ಹಚ್ಚಿ ಕುಣಿದು ಕುಪ್ಪಳಿಸುವಂತಹ ವ್ಯವಸ್ಥೆ ಬೇಡಾ ಈ ಎರಡೂ ಹಬ್ಬಗಳು ದೇವತಾ ಹಬ್ಬಗಳಾಗಿ ಪರಿಣಮಿಸಿದ್ದು ಇವುಗಳಲ್ಲಿ ಭಕ್ತಿ ಎಂಬುದು ಎದ್ದು ಕಾಣಬೇಕೆಂದರು. ತಾಳಿಕೋಟೆ ಪಟ್ಟಣದಲ್ಲಿ ಹಿಂದೂ ಮುಸ್ಲಿಂ ಜನತೆ ಸಹ ಬಾಳ್ವೆಯಿಂದ ಕೂಡಿ ಬಂದವರಾಗಿದ್ದು ಇವರಲ್ಲಿ ನಾ ದೊಡ್ಡವ ನೀ ದೊಡ್ಡವ ಎಂಬ ಬೇದ ಭಾವವಿಲ್ಲಾ ಕಾರಣ ಸಹಕಾರದಿಂದ ಈ ಎರಡೂ ಉತ್ಸವಗಳನ್ನು ಶಾಂತತೆಯೊಂದಿಗೆ ಆಚರಿಸಬೇಕೆಂದರು. ನಮ್ಮ ಪೊಲೀಸ್ ಇಲಾಖೆಯಿಂದ ಮಾಡುವ ವ್ಯವಸ್ಥೆ ಎಂದಿನಂತೆ ಮಾಡೇ ಮಾಡುತ್ತೇವೆ ಅದರಲ್ಲಿ ಎರಡೂ ಮಾತಿಲ್ಲಾ ವೆಂದ ಅವರು ಈ ಉತ್ಸವಗಳಲ್ಲಿ ಭಕ್ತಿ ಎಂಬುದು ಕಡಿಮೆಯಾಗಿ ವಿಜೃಂಬಣೆಯೇ ಹೆಚ್ಚಾಗದಂತೆ ನೋಡಿಕೊಳ್ಳುವ ವ್ಯವಸ್ಥೆ ಈ ಉತ್ಸವ ಸಂಬಂದಿತ ಕಮಿಟಿಯವರದ್ದಾಗಿದೆ ಎಂದರು. ಈ ಉತ್ಸವಗಳಲ್ಲಿ ಘಾಸಿಯಾಗುವಂತಹ ಹಾಡುಗಳು ಘೋಷಣೆ ಹಾಕುವ ವ್ಯವಸ್ಥೆಯಾಗಬಾರದು ಈ ವ್ಯವಸ್ಥೆಯ ಬಗ್ಗೆ ನಮ್ಮ ಇಲಾಖೆ ಸಹಕರಿಸುವದಿಲ್ಲಾವೆಂದರು. ಬರು ಹೋಗುವ ಮೋಟರ ಬೈಕ್, ಇನ್ನಿತರ ವಾಹನಗಳ ನಿಲ್ಲುಗಡೆಗೆ ಪಾರ್ಕಿಂಗ್ ವ್ಯವಸ್ಥೆ ಜಾಗೆಯನ್ನು ಸಂಬಂದಿತ ಉತ್ಸವದವರು ಸೂಚಿಸಬೇಕು ಸಂಬಂದಿಸಿದ ಉತ್ಸವ ಕಮಿಟಿಯ ನೇತೃತ್ವದಾರಿಗಳಾದ ಅವರು ತಮ್ಮ ತಮ್ಮ ವಿವರಣೆ ನೀಡಬೇಕೆಂದರು.
ಇದೇ ಸಮಯದಲ್ಲಿ ಶ್ರೀ ಖಾಸ್ಗತೇಶ್ವರ ಮಠದ ಉಸ್ತುವಾರಿಗಳಾದ ವೇ.ಮುರುಘೇಶ ವಿರಕ್ತಮಠ ಅವರು ಮಾತನಾಡಿ ಬರಲಿರುವ ದಿ.11 ರಿಂದ ಶ್ರೀ ಖಾಸ್ಗತ ಮಠದಲ್ಲಿ ಜಾತ್ರೋತ್ಸವ ಕುರಿತು ಶಿವ ಭಜನೆ ಪ್ರಾರಂಭವಾಗಲಿದೆ ದಿ.18 ರಂದು ಭಜನೆ ಮಂಗಲಗೊಳ್ಳಲಿದೆ ದಿ.17 ರಂದು ರಾತ್ರಿ 10 ಗಂಟೆಯಿಂದ ತಾಳಿಕೋಟೆ ಪಟ್ಟಣ ಅಲ್ಲದೇ ವಿವಿಧ ನಗರ ಪಟ್ಟಣಗಳಿಂದ ಆಗಮಿಸುತ್ತಿರುವ ಭಕ್ತಾಧಿಗಳು ತಮ್ಮ ತಮ್ಮ ಮನೆಗಳಿಂದ ದೀರ್ಘದಂಡ ನಮಸ್ಕಾರವನ್ನು ಶ್ರೀಮಠದ ವರೆಗೆ ಹಾಕುವಂತಹ ಪರಿಪಾಠವಿದೆ ಅದರಂತೆ ದಿ.18 ರಂದು ನಸುಕಿನ ಜಾವ 5 ಗಂಟೆಗೆ ಗೋಪಾಲಕಾವಲಿ ಒಡೆಯುವ ಕಾರ್ಯಕ್ರಮದೊಂದಿಗೆ ಸಪ್ತ ಭಜನೆ ಮಂಗಲಗೊಳ್ಳಲಿದೆ ನಂತರ ಮಹಾ ಪ್ರಸಾದ ವ್ಯವಸ್ಥೆ ಭಕ್ತರಿಗಾಗಿ ಜರುಗುವದಲ್ಲದೇ ದಿ.19 ರಂದು ಬೆಳಿಗ್ಗೆ 9 ಗಂಟೆಯಿಂದ ಆನೆ ಅಂಭಾರಿಯೊಂದಿಗೆ ಶ್ರೀ ಖಾಸ್ಗತರ ಶ್ರೀ ವಿರಕ್ತಶ್ರೀಗಳ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆಯು ಶ್ರೀಮಠದಿಂದ ಪ್ರಾರಂಭಗೊಂಡು ಪಟ್ಟಣದ ರಾಜವಾಡೆ, ಭೀಮನಭಾವಿ ರಸ್ತೆ, ನಾಗರಕಲ್ಲ ಬಡಾವಣೆ, ಶಿವಾಜಿ ಮಹಾರಾಜ ಚೌಕ್, ಮೂಲಕ ಶ್ರೀ ವಿಠ್ಠಲ ಮಂದಿರ ರಸ್ತೆ, ಶ್ರೀ ಬಾಲಾಜಿ ಮಂದಿರ ರಸ್ತೆ, ಮೂಲಕ ಕತ್ರಿ ಭಜಾರ ಮಾರ್ಗವಾಗಿ ಶ್ರೀಮಠ ತಲುಪಲಿದೆ. ಅಂದೇ ಸಾಯಂಕಾಲ 5 ಗಂಟೆಗೆ ರಥೋತ್ಸವ ಜರುಗಲಿದೆ ಎಂದು ಶ್ರೀಮಠದ ವ್ಯವಸ್ಥೆ ಕುರಿತು ವಿವರಿಸಿದರು.
ಮೋಹರಂ ಹಬ್ಬದ ಕುರಿತು ಕಾಳಿಫೀರಾ ಹಾಗೂ ಫಯಾಜ್ ಅವರು ಮೋಹರಂ ಹಬ್ಬದ ದೇವರು ಕೂಡ್ರುವ ಸ್ಥಳದ ಉತ್ಸುವಾರಿಗಳನ್ನು ಕರೆದು ಅವರಿಗೆ ಈ ಉತ್ಸವದಲ್ಲಿ ದಿ. 17 ರಂದು ದೇವರ ಧಪನ್‍ದಿನದಂದು ಜನದಟ್ಟನೆಯಾಗುವದನ್ನು ತಪ್ಪಿಸಲು ನಿಗಧಿತ ಸಮಯವನ್ನು ಪೊಲೀಸ್ ಇಲಾಖೆ ನೀಡಿದ ಅಂದು ರಾತ್ರಿ 10 ಗಂಟೆ ಒಳಗಿನ ನಿಗಧಿ ಪಡಿಸಿದ ಸಮಯ ಕುರಿತು ತಿಳುವಳಿಕೆ ನೀಡಬೇಕು ಎಂದು ತಿಳಿಸಿದರಲ್ಲದೇ ಈ ಕುರಿತು ಉಪಸ್ಥಿತ ಮುಸ್ಲಿಂ ಬಾಂದವರು ಆ ಸಮಯಕ್ಕನುಸಾರ ಯಾವುದೇ ತರಹದ ತೊಂದರೆಯಾಗದಂತೆ ನೋಡಿಕೊಳ್ಳುವ ಬರವಸೆಯನ್ನೂ ಕೂಡಾ ನೀಡಿದರು.
ಇನ್ನೋರ್ವ ಪುರಸಭಾ ಮಾಜಿ ಸದಸ್ಯ ಪ್ರಭುಗೌಡ ಮದರಕಲ್ಲ ಮಾತನಾಡಿ ತಾಳಿಕೋಟೆ ಜಾತ್ರೆ ಉತ್ಸವಗಳು ಉತ್ಸವಗಳಾಗಿಯೇ ಮಾರ್ಪಡುತ್ತಾ ಸಾಗಿವೆ ಅಂತಹ ಅಹೀತಕರ ಘಟನೆಗಳು ನಡೆದಿಲ್ಲಾ ದಿ.17 ರಂದು ರಾತ್ರಿ 10 ಗಂಟೆಯೊಳಗೆ ದೇವರ ಧಪನ್ ಕಾರ್ಯ ನಡೆಸುವಂತೆ ತಿಳಿಸಿದಂತೆ ಆ ಸಮಯದ ಪೂರ್ವದಲ್ಲಿಯೇ ಮುಗಿಸುವ ವ್ಯವಸ್ಥೆ ಎಲ್ಲರೂ ಕೂಡಿ ಮಾಡಿ ಶ್ರೀ ಖಾಸ್ಗತ ಉತ್ಸವಕ್ಕೆ ಸಹಕಾರ ನೀಡೋಣವೆಂದರು.
ಇನ್ನೋರ್ವ ಪಿಎಸ್‍ಐ ರಾಮನಗೌಡ ಸಂಕನಾಳ ಅವರು ಮಾತನಾಡಿ ಹೋದವರ್ಷ ಜರುಗಿದ ಮೋಹರಂ ಹಾಗೂ ಶ್ರೀ ಖಾಸ್ಗತೇಶ್ವರ ಜಾತ್ರೆ ಈ ಎರಡೂ ಹಬ್ಬಗಳಲ್ಲಿಯೂ ನಾನು ಇದ್ದೆ ಅವುಗಳನ್ನು ನೋಡಿದ್ದೇನೆ ದೇವರು ದೇವರುಗಳ ನಡುವೆ ಪೈಪೋಟಿ ನಡೆಯುವಂತಹ ವ್ಯವಸ್ಥೆ ಮೋಹರಂ ಹಬ್ಬದಲ್ಲಿ ಆಗಿತ್ತು ಕಾರಣ ಅದಕ್ಕೆ ಸಂಬಂದಿಸಿದವರು ಹಾಗಾಗದಂತೆ ನೋಡಿಕೊಳ್ಳಬೇಕೆಂದರು. ಮೋಹರಂ ಕಮಿಟಿ ಸದಸ್ಯರು ಧಪನ್ ದಿನದಂದು ಬೇಗನೇ ಪ್ರಾರಂಭ ಮಾಡಿ ಬೇಗನೇ ಮುಗಿಸುವ ಕಾರ್ಯ ಮಾಡಬೇಕು ಇಂತಹ ಎರಡೂ ಉತ್ಸವಗಳು ಕೂಡಿ ಬಂದಿದ್ದು ಮೊದಲನೇಯದ್ದಾಗಿದೆ ಕಾರಣ ಎಲ್ಲರೂ ಸಹಕಾರ ಮನೋಭಾವನೆಯಿಂದ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವಂತಹ ಬರವಸೆಯನ್ನು ಉಪಸ್ಥಿತ ಹಿರಿಯ ಅಧಿಕಾರಿಯವರಿಗೆ ನೀಡುತ್ತೇವೆಂದರು.
ಅಪರಾಧ ವಿಭಾಗದ ಪಿ.ಎಸ್.ಆಯ್.ಆರ್.ಎಸ್.ಭಂಗಿ ಅವರು ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಅವರ ಸಲಹೆ ಸೂಚನೆಯಂತೆ ಉತ್ಸವಗಳ ಸಮಿತಿಯ ಸದಸ್ಯರು ಹಾಗೂ ನಾವು ಕೂಡಾ ನಡೆಯುತ್ತೇವೆಂದರು.
ಸಂಗಮೇಶ ಚಲವಾದಿ ಸ್ವಾಗತಿಸಿ ವಂದಿಸಿದರು.