ಸೇಡಂನಲ್ಲಿ ಜು.10 ರಂದು ನೂತನ ಎಂಪಿ,ಎಂ.ಎಲ್.ಸಿಗಳಿಗೆ ಅಭಿನಂದನಾ ಸಮಾರಂಭ
ಸೇಡಂ, ಜು,08: ಕಲಬುರಗಿ ನೂತನ ಸಂಸದರಾಗಿ ಆಯ್ಕೆಯಾದ ರಾಧಾಕೃಷ್ಣ ದೊಡ್ಡಮನಿ, ಈಶಾನ್ಯ ಪದವೀಧರ ಕ್ಷೇತ್ರದ ಸದಸ್ಯರಾಗಿ ಆಯ್ಕೆಯಾದ ಡಾ.ಚಂದ್ರಜಶೇಖರ ಪಾಟೀಲ ಹುಮನಬಾದ್ ಹಾಗೂ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಜಗದೇವ ಗುತ್ತೇದಾರ ಅವರನ್ನು ಇದೇ ಜುಲೈ 10 ರಂದು ಪ್ರಥಮ ಬಾರಿಗೆ ಸೇಡಂ ನಗರಕ್ಕೆ ಸ್ವಾಗತಿಸಿ, ಅಭಿನಂದನಾ ಸಮಾರಂಭ ಏರ್ಪಡಿಸಲಾಗುತ್ತದೆ ಎಂದು ಸೇಡಂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ ಹಾಗೂ ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿ ನಂದಿಗಾಮ್ ತಿಳಿಸಿದ್ದಾರೆ. ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಸಂಜೆ 4 ಗಂಟೆಗೆ ಆಯೋಜಿಸಲಾಗಿದ್ದು, ಅಭಿನಂದನಾ ಸಮಾರಂಭದಲ್ಲಿ ಸಂಸದ ರಾಧಾಕೃಷ್ಣ ದೊಡ್ಡಮನಿ ಅವರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ, ಜಗದೇವ ಗುತ್ತೇದಾರ ಅವರನ್ನು ಸೇಡಂ-ಮುಧೋಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸನ್ಮಾನಿಸಿ, ಅಭಿನಂದಿಸಲಾಗುತ್ತದೆ.
ಅಭಿನಂದನಾ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸೇರಿ, ಸಮಾರಂಭ ಯಶಸ್ವಿಗೊಳಿಸಲು ಸೇಡಂ-ಮುಧೋಳ ಬ್ಲಾಕ್ ಅಧ್ಯಕ್ಷರು ಕೋರಿದ್ದಾರೆ. ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ಸೇರಿದಂತೆ ಸೇಡಂ ತಾಲೂಕಿನ ಕಾಂಗ್ರೆಸ್ ಪಕ್ಷದ ಮುಖಂಡರು, ಮಹಿಳೆಯರು, ಯುವಕರು ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದ್ದಾರೆ.