ಸಿನಿಮಾ ಮಾಧ್ಯಮ ಒಂದು ಸ್ವತಂತ್ರ ಭಾಷೆ
ಸಂಜೆವಾಣಿ ನ್ಯೂಸ್
ಮೈಸೂರು: ಜು.08:- ಸಿನಿಮಾ ಎನ್ನುವುದು ಒಂದು ಸ್ವತಂತ್ರ ಭಾಷೆಯಾಗಿದೆ. ಅದನ್ನು ರಂಗಭೂಮಿ, ಸಾಹಿತ್ಯದೊಡನೆ ಅರ್ಥ ಮಾಡಿಸಲು ಆಗುವುದಿಲ್ಲ ಎಂದು ಕಲಾತ್ಮಕ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅಭಿಪ್ರಾಯಪಟ್ಟರು.
ನಗರದ ಸದರನ್ ಸ್ಟಾರ್ ಹೋಟೆಲ್‍ನ ಗಾರ್ಡೇನಿಯಾ ಆವರಣದಲ್ಲಿ ಮೈಸೂರು ಲಿಟರರಿ ಫೆÇೀರಂ ಚಾರಿಟೆಬಲ್ ಟ್ರಸ್‍ಟ್ ಹಾಗೂ ಮೈಸೂರು ಬುಕ್ ಕ್ಲಬ್ ವತಿಯಿಂದ ಆಯೋಜಿಸಿರುವ ಮೈಸೂರು ಸಾಹಿತ್ಯ ಸಂಭ್ರಮ-2024 8ನೇ ಅವೃತ್ತಿಯಲ್ಲಿ ಭಾನುವಾರ ಬಿಂಬ-ಬಿಂಬನ ಕುರಿತು ಅವರು ಮಾತನಾಡಿದರು.
ಸಿನಿಮಾ ಎಂಬುದು ದೃಶ್ಯಕಲೆಯ ಮುಂದುವರೆದ ಭಾಗವಾಗಿದೆ. ಭಾರತದಲ್ಲಿ ಇದನ್ನು ರಂಗಭೂಮಿಯ ಮುಂದುವರೆದ ಭಾಗವೆನ್ನುತ್ತಾರೆ. ಕರ್ನಾಟಕದಲ್ಲಿ ಸಾಹಿತ್ಯದ ಮುಂದುವರೆದ ಭಾಗ ಎನ್ನುತ್ತಾರೆ. ಆದರೆ ಸಿನಿಮಾ ಸ್ವತಂತ್ರ ಭಾಷೆಯನ್ನು ಹೊಂದಿದೆ. ಬಿಂಬಗಳ ಭಾಷೆಯೇ ಸಿನಿಮಾ ಎಂದು ಅವರು ವಿಶ್ಲೇಷಣೆ ಮಾಡಿದರು.
ತೆರೆಯ ಮೇಲೆ ಮೂಡುವ ಬಿಂಬಕ್ಕೂ, ಮನಸ್ಸಿನಲ್ಲಿ ಮೂಡುವ ಬಿಂಬಕ್ಕೂ ಸಾಕಷ್ಟು ವ್ಯತ್ಯಾಸವಿರುತ್ತದೆ. ಒಂದೇ ಬಿಂಬವನ್ನು ಹಲವಾರು ಜನರು ಹಲವು ರೀತಿ ಗ್ರಹಿಸುತ್ತಾರೆ. ಸಿನಿಮಾವನ್ನು ಅರ್ಥಮಾಡಿಕೊಳ್ಳಲು ಬಿಂಬಿಸಲು ಬಳಸುವ ಮಾರ್ಗವಾದ ಬಿಂಬನ ಅರ್ಥಮಾಡಿಕೊಳ್ಳಬೇಕು. ಕ್ಯಾಮೆರಾವನ್ನು ಒಂದು ಕಡೆ ಇಟ್ಟರೆ ಬಿಂಬ ಹುಟ್ಟುವುದಿಲ್ಲ. ಯಾವ ಆಂಗಲ್ ಇರಬೇಕು. ಪೆÇೀಕಸ್ ಯಾವ ಕಡೆ ಇರಬೇಕು ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ. ಸಭೆಯಲ್ಲಿ ಪುರುಷರು-ಮಹಿಳೆಯರು ಭಾಗವಹಿಸಿದ್ದರೂ ಕ್ಯಾಮೆರಾಮನ್ ಕೇವಲ ಮಹಿಳೆಯರನ್ನು ಮಾತ್ರ ಸೆರೆ ಹಿಡಿಯುವುದು ಬಿಂಬದ ರಾಜಕಾರಣವಾಗುತ್ತದೆ ಎಂದರು.
ಚಿಕ್ಕಂದಿನಿಂದಲೂ ಸಾಹಿತ್ಯವನ್ನು ಓದುವ ಪರಿಪಾಠ ನಮ್ಮಲಿ ಇದೆ. ಆದರೆ, ರಂಗಭೂಮಿ ಕುರಿತ ಪಠ್ಯ, ಚಿತ್ರಕಲೆಯನ್ನು ಕುರಿತ ಪಠ್ಯವಿಲ್ಲ. ಆದ್ದರಿಂದ ಓದುವ ಮೂಲಕ ಗ್ರಹಿಸುವುದು ರೂಢಿಯಲ್ಲಿ ಬಂದಿದೆ. ಇದರಿಂದಾಗಿ ದೃಶ್ಯಕಲೆಯನ್ನು ಸಾಮಾನ್ಯ ಜನರಿಗೆ ಪೂರಕವಾಗಿ ಅರ್ಥ ಮಾಡಿಸುವುದು ಸುಲಭವಲ್ಲ. ಕಮರ್ಷಿಯಲ್ ಸಿನಿಮಾಗಳಲ್ಲಿ ಅತಿಶಯೋಕ್ತಿಯಾಗಿ, ಉತ್ಪ್ರೇಕ್ಷೆ ಮೂಲಕ ಕಥೆಯನ್ನು ಹೇಳಲಾಗುತ್ತದೆ. ಇದು ಪ್ರೇಕ್ಷಕನ ಚಿಂತನಾ ಶಕ್ತಿಯನ್ನು ಕುಗ್ಗಿಸಿಬಿಡುತ್ತದೆ. ಭಾವನೆಯನ್ನು ಕೆಣುಕುತ್ತದೆ. ಆ ಸಿನಿಮಾದಲ್ಲಿ ಪಾತ್ರವೊಂದು ಅಳುತ್ತಿದ್ದರೆ, ಪ್ರೇಕ್ಷಕರು ಅಳುವುದಕ್ಕೆ ಶುರು ಮಾಡುತ್ತಾರೆ. ಸಿನಿಮಾದಲ್ಲಿ ಜನರ ಭಾವನೆಯನ್ನು ಲಾಭ ಮಾಡಿಕೊಳ್ಳಲು ಅವರು ಸುಳ್ಳು ಹೇಳುತ್ತಿರಬಹುದು. ಆದ್ದರಿಂದ ಪ್ರೇಕ್ಷಕನಿಗೂ ಕೃತಿಗೂ ಅಂತರವಿರಬೇಕು ಎಂದರು.
ಸಿನಿಮಾದಲ್ಲಿ ಕಥೆ ಮುಖ್ಯವಾಗಬಾರದು. ಕಥಾನಕ ಮುಖ್ಯವಾಗಬೇಕು. ಯಾವುದೋ ಪಾತ್ರಗಳನ್ನು ಕಂಡಾಗ, ಆ ಪಾತ್ರಗಳ ಮೂಲಕ ಕಾಲ, ಸಮಾಜ ಅರ್ಥವಾಗುವಂತೆ ಇರಬೇಕು. ಇದಕ್ಕಾಗಿ ವಿನ್ಯಾಸವೂ ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ. ಪ್ರದರ್ಶಕ ಕಲೆಗಳಲ್ಲಿ ಕಂಟೆಂಟ್ ಜೊತೆಗೆ ತಾಳದ ಸಮಾತೋಲನ, ಮಧುರಾನೂಭೂತಿ ಎಲ್ಲವೂ ಇರಬೇಕು. ಸಿನಿಮಾದಲ್ಲಿ ತೀರ ಅಗತ್ಯವಿರುವಷ್ಟನ್ನು ಹೇಳಿ ಮಿಕ್ಕಿದನ್ನು ಪ್ರೇಕ್ಷಕರ ಊಹೆಗೆ ಬಿಟ್ಟುಬಿಡಬೇಕು. ಪ್ರೇಕ್ಷಕರು ಸಿನಿಮಾದ ಜತೆ ಸಂವಾದ ನಡೆಸುತ್ತ ಎಚ್ಚರದ ಸ್ಥಿತಿಯಲ್ಲಿ ಇರಬೇಕು ಎಂದರು.
ಈಗೀನ ರೀಲ್ಸ್ ಯುಗ ಕುರಿತು ಮಾತನಾಡಿದ ಕಾಸರವಳ್ಳಿ, ಮಾರುಕಟ್ಟೆಯ ಆರ್ಥಿಕತೆ ಹಾಗೂ ಗ್ರಾಹಕ ಸಂಸ್ಕೃತಿಯ ಮುಂದುವರೆದ ಭಾಗವಾಗಿ ನೋಡದೆ ಕಲೆಯಾಗಿ ನೋಡಿದರೆ ಇದು ಮನೋರಂಜನೆಯನ್ನು ಪೂರೈಕೆ ಮಾಡುತ್ತದೆ ಎನ್ನಬಹುದು. ಆದರೆ, ಘಟನೆಯನ್ನು ಯಾವ ನೆಲೆಯಲ್ಲಿ ಗ್ರಹಿಸಬೇಕು ಎನ್ನುವುದು ಮುಖ್ಯವಾಗುತ್ತದೆ ಎಂದರು.
ಲೇಖಕ ಗೋಪಾಲಕೃಷ್ಣ ಪೈ ಹಾಜರಿದ್ದರು. ಲೇಖಕಿ-ಕಿರುತೆರೆ ನಟಿ ದೀಪಾ ರವಿಶಂಕರ ಕಾರ್ಯಕ್ರಮ ಪ್ರಸ್ತುತ ಪಡಿಸಿದರು.
ರಾಹುಲ್‍ಗಾಂಧಿ ಬುದ್ಧಿವಂತ:
ದೃಶ್ಯ ಸಂಯೋಜನೆಯಲ್ಲಿ ಬಿಂಬ ಗ್ರಾಹಿಯ ಪ್ರಾಮುಖ್ಯತೆ ಹೇಳುವ ಸಂದರ್ಭದಲ್ಲಿ ಗಿರೀಶ್ ಕಾಸರವಳ್ಳಿ ರಾಹುಲ್ ಗಾಂಧಿಯನ್ನು ಉದಾಹರಣೆಯಾಗಿ ತಗೆದುಕೊಂಡು ವಿಷಯವನ್ನು ಸರಳೀಕರಣವಾಗಿ ಹೇಳಿದರು. ಪಪ್ಪು-ಪಪ್ಪು, ದಡ್ಡ ಎಂದು ಹಲವಾರು ವರ್ಷದಿಂದ ಹೇಳಿಕೊಂಡೆ ಬರಲಾಗುತ್ತಿತ್ತು. ಆದರೆ, ಇವತ್ತು ಅವನಂತಹ ಬುದ್ಧಿವಂತ ಮತ್ಯಾರು ಇಲ್ಲ ಎನ್ನುವುದು ಗೊತ್ತಾಗಿದೆ. ಇದೇ ಬಿಂಬದ ರಾಜಕಾರಣ. ಕೇವಲ ಒಂದೇ ಕಡೆಗೆ ಫೆÇೀಕಸ್ ಮಾಡುತ್ತಾ, ಪಕ್ಕದಲ್ಲಿ ಚೆನ್ನಾಗಿದರೂ ಅದನ್ನು ಸೆರೆ ಹಿಡಿಯದೆ ಇರುವುದು ಎಂದರು.