ಬ್ಲಾಗ್‍ಗಳಿಂದ ಬರವಣಿಗೆ ತುಡಿತವಿದ್ದವರಿಗೆ ಅವಕಾಶ
ಸಂಜೆವಾಣಿ ನ್ಯೂಸ್
ಮೈಸೂರು: ಜು.08:- ಬ್ಲಾಗ್‍ಗಳು ಶುರುವಾದ ನಂತರ ಬರವಣಿಗೆ ತುಡಿತವಿದ್ದವರಿಗೆ ಅವಕಾಶ ದೊರೆಯುವಂತಾಗಿದೆ ಎಂದು ಯುವ ಲೇಖಕ ರಾಜೇಂದ್ರ ಪ್ರಸಾದ್ ಹೇಳಿದರು.
ನಗರದ ಖಾಸಗಿ ಹೋಟೆಲ್‍ನಲ್ಲಿ ಭಾನುವಾರ ನಡೆದ ಆಲ್‍ಲೈನ್ ಸಂಬಂಧಗಳ ಸಮಾಜದಲ್ಲಿ ಕವನಗಳ ಪ್ರಸ್ತುತತೆ ವಿಷಯದ ಕುರಿತು ಅವರು ಮಾತನಾಡಿದರು.
ಕಳೆದ ಒಂದೂವರೆ ದಶಕದಿಂದ ಸಾಹಿತ್ಯ ಕ್ಷೇತ್ರದಲ್ಲಿ ಆನ್‍ಲೈನ್-ಆಫ್‍ಲೈನ್ ಬರಹಗಳ ಚರ್ಚೆ ನಡೆಯುತ್ತಿದೆ. ಮೊದಲೆಲ್ಲ ನಮ್ಮ ಕವನ-ಕಥೆಗಳು, ಇತರೆ ಲೇಖನಗಳು ಪತ್ರಿಕೆ, ಸಾಪ್ತಾಹಿಕಗಳಲ್ಲೆ ಪ್ರಕಟವಾಗಬೇಕಿತ್ತು. ಇದಕ್ಕೆ ಅದರ ಸಂಪಾದಕರು, ಬರಹಗಾರರ ಕೃಪೆ ಇರಬೇಕಿತ್ತು. ಬ್ಲಾಗ್‍ಗಳು ಶುರುವಾದ ನಂತರ ಯಾರ ನಿಯಂತ್ರಣ ಇಲ್ಲವಾಗಿದೆ. ಹೀಗಾಗಿ ಬರಗಾರರಿಗೆ ಹೆಚ್ಚಿನ ಅವಕಾಶಗಳು ದೊರೆತು, ಬರವಣಿಗೆಯ ತುಡಿತ ನಿವಾರಿಸಿವೆ ಎಂದರು.
ಬ್ಲಾಗ್‍ಗಳು ಹೆಚ್ಚು ಬಳಕೆಯ ನಂತರ ಕವಿತೆ ಬರೆದು ಹಿರಿಯರಿಗೆ ತೋರಿಸಿ ಲಯಾ-ಪ್ರಾಸ ಬದ್ಧವಾಗಿದೆಯಾ, ಭಾಷೆ, ನಿರೂಪಣೆ ಸರಿಯಾಗಿದೆಯಾ ಎಂಬ ಸಲಹೆ ಪಡೆಯುವ ಅಗತ್ಯವಿಲ್ಲದಂತಾಯಿತು. ಬಹುಶಃ ಆ ಕಾರಣದಿಂದ ಹಿರಿಯರಿಗೆ ಬ್ಲಾಗ್‍ಗಳಲ್ಲಿ ಬರೆಯುವ ಅಸಮಾಧಾನ, ಅಸೂಹೆ ಶುರುವಾಯಿತು. ಆನ್‍ಲೈನ್‍ನಲ್ಲಿ ಬರೆಯೋಕೆ ಶುರುವಾದ್ದರಿಂದ ಹೊಸ ಬರಹಗಾರರ ಸಂಖ್ಯೆ ಹೆಚ್ಚಾಗಿದೆ ಎಂದರು.
ಎಲ್ಲರೂ ಬರೆಯುವುದು ಸರಿ. ಆದರೆ, ಓದುವವರು ಯಾರು ಎನ್ನುವುದು ಬಹಳ ಮುಖ್ಯ. ಬರಹಗಳನ್ನು ಸಾಮಾಜಿಕ ತಾಣಗಳಲ್ಲಿ ಪ್ರಕಟಿಸುವ ಮುನ್ನ ಸ್ವ ವಿಮರ್ಶೆಗೆ ಒಳಪಡಿಸಿಕೊಂಡು ನಮ್ಮ ಬರಹಗಳನ್ನು ಪ್ರಕಟಿಸಬೇಕು. ಮೊದಲೆಲ್ಲ ವರ್ಷಕ್ಕೆ 2-3 ಸಾವಿರ ಕಾವ್ಯ ಸಂಕಲನ ಪ್ರಕಟವಾದರೆ. ಈಗ 6-7 ಸಾವಿರ ಸಂಕಲನಗಳು ಪ್ರಕಟವಾಗುತ್ತಿವೆ. ಬದಲಾದ ಕಾಲಕ್ಕೆ ಇದು ತುರ್ತು ಕೂಡ. ಆದರೆ, ಸ್ವವಿಮರ್ಶೆ ತುಂಬಾ ಮುಖ್ಯ ಎಂದ ಅವರು ನಕ್ಷತ್ರದ ಗಿಡ ಕವಿತೆ ವಾಚಿಸಿದರು.
ಹಿರಿಯ ಕವಿ ಎಚ್.ಎಸ್.ಶಿವಪ್ರಕಾಶ್ ಮಾತನಾಡಿ, ಇಂದು ಬರವಣಿಗೆ ಬಹಳ ಸುಲಭವಾಗಿದೆ. ನಾವು ಬರೆದ ಕವನಗಳನ್ನು ಕವಿಗಳು ಸಿಕ್ಕಿದಾಗ ದುಂಬಾಲು ಬಿದ್ದು ಓದಿಸುತ್ತಿದ್ದೆವು. ಆದರೆ ಈಗ ಕ್ಷಣದಲ್ಲೇ ಅಂತರ್ಜಾಲದಲ್ಲಿ ಹಂಚಬಹುದು. ಆ ಮೂಲಕ ಜಗತ್ತಿನ ವಿವಿಧೆಡೆ ಇರುವ ಓದುಗರನ್ನು ತಲುಪಿಸಬಹುದು. ಆದರೆ, ಗುಣಮಟ್ಟ ಇರಬೇಕು ಎಂದರು.
ಕನ್ನಡದಲ್ಲಿ ವಿಮರ್ಶೆ ಪದ ಇದೆ. ಆದರೆ ಪ್ರಕ್ರಿಯೆ ಕಾಣುತ್ತಿಲ್ಲ. ಬರೆಯೋದು ಓದುಗರಿಗೆ, ವಿಮರ್ಶಕರು ಒಪ್ಪಲಿ, ಬಿಡಲಿ ಕವಿಗೆ ಮುಖ್ಯವಾಗಿ ಓದುಗು ಬೇಕು. ಒಳ್ಳೆಯ ವಿಮರ್ಶೆ ಹಿಂದೆ ಬಂದಿದೆ. ಆದರೀಗ ವಿಮರ್ಶೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದರು.
ಓದುಗರನ್ನು ಮುಟ್ಟುವ ಸರಳ ಹಾಗೂ ವೇಗದ ಮಾರ್ಗ ಸಾಮಾಜಿಕ ಜಾಲತಾಣ. ನಾನು ಈಗ ಸಾಮಾಜಿಕ ಜಾಲತಾನಗಳಲ್ಲಿ ಅನುವಾದ ಕಾವ್ಯಗಳನ್ನು ಪೆÇೀಸ್ಟ್ ಮಾಡುತ್ತೇನೆ. ಫೇಸ್ ಬುಕ್‍ನಲ್ಲಿ ಹಾಕುವುದರಿಂದ ಪುಸ್ತಕದ ರೂಪದ ಪ್ರಕಟಣೆಗೆ ಅಡ್ಡಿಯಾಗಿಲ್ಲ. ಓದುಗರ ಮುಟ್ಟುವುದು ನಮ್ಮ ಕೆಲಸ. ಕವಿತೆ ಭವಿಷ್ಯವನ್ನು ನಾವು ತೀರ್ಮಾನಿಸಲಾಗುವುದಿಲ್ಲ ಎಂದರು.
ಜನರನ್ನು ಮುಟ್ಟಲಿಕ್ಕೆ ಯಾವ ಪ್ರಕಾರವೂ ಕಳಪೆಯಲ್ಲ. ಮೊದಲು ಶಿಲೆ, ನಂತರ ತಾಳೆಗರಿಯಲ್ಲಿ ಬರೆದರು. ಅದೇ ವೇಳೆ ಮೌಖಿಕ ಸಾಹಿತ್ಯ ಇತ್ತು. ಎಷ್ಟು ವಚನಗಳು ಗುಪ್ತವಾಗಿದ್ದಾವೆ ಗೊತ್ತಿಲ್ಲ. ಈಗ ಸಾಮಾಜಿಕ ಮಾಧ್ಯಮ ಪರಿಣಾಮಕಾರಿಯಾಗಿದೆ. ಈಗ ತಿದ್ದಿ-ತೀಡುವುದು ತುಂಬಾ ಸುಲಭ. ಕಾವ್ಯಗಳಲ್ಲಿ ಸೃಜನಾತ್ಮಕತೆ ಇರಬೇಕು. ಕಲ್ಲಿನಲ್ಲಿ, ತಾಳೆಗರಿಯಲ್ಲಿ, ಕಾಗದದಲ್ಲಿ ಬರೆದರೆ ಮಾತ್ರ ಕಾವ್ಯ ಎನ್ನಲಾಗದು. ಅಂತರ್ಜಾಲದ ಹಾಳೆಯಾದರು ಕಾವ್ಯ ಮೂಡಬಹುದು ಎಂದು ಹೇಳಿದರು.
ಯುವ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಡಾ.ಬಿ.ಆರ್.ಶ್ರುತಿ ಮಾತನಾಡಿ, ಸೋಷಿಯಲ್ ಮೀಡಿಯಾ ಬರಹಗಳ ಗುಣಮಟ್ಟ ಕಡಿಮೆಯಾಗುತ್ತಿದೆ ಎಂಬುದು ಒಪ್ಪಲಾಗದು. ಸಾಮಾಜಿಕ ಜಾಲತಾಣಗಳಿಂದ ಪ್ರಕಟಣೆಗೆ ಕಾಯುವ ಅಗತ್ಯವಿಲ್ಲ. ಮುದ್ರಣ ಮಾಧ್ಯಮದ ಅವಲಂಬನೆ ಇಲ್ಲ. ತಕ್ಷಣ ಸೋಷಿಯಲ್ ಮೀಡಿಯಾದಲ್ಲಿ ತಲುಪಿಸಬಹುದು. ತಕ್ಷಣ ಪ್ರತಿಕ್ರಿಯೆಗಳು ಬರುತ್ತವೆ. ಆರೋಗ್ಯಕರ ಚರ್ಚೆಯೂ ಆಗಲಿದೆ. ಚೆನ್ನಾಗಿ ಬಳಸಿಕೊಂಡರೆ ಸಾಮಾಜಿಕ ಜಾಲತಾಣ ಒಂದು ವರದಾನ ಎಂದ ಅವರು ಅಂತರ ಹಾಗೂ ಅವಳು ಕವಿತೆ ವಾಚಿಸಿದರು.