ಜಿಲ್ಲೆಯಲ್ಲಿ 496 ಡೆಂಘೀ ಪ್ರಕರಣಗಳು ಸಕ್ರಿಯ
ಸಂಜೆವಾಣಿ ನ್ಯೂಸ್
ಮೈಸೂರು: ಜು.08:- ಜಿಲ್ಲೆಯಲ್ಲಿ 496 ಡೆಂಘೀ ಸಕ್ರಿಯ ಪ್ರಕರಣಗಳಿದ್ದು, 14 ಪಾಸಿಟಿವ್ ಪ್ರಕರಣಗಳಿವೆ. ಡೆಂಘೀ ತಡೆಗೆ ಮುಂಜಾಗ್ರತೆ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.
ಜಲದರ್ಶಿನಿ ಅತಿಥಿಗೃಹದಲ್ಲಿ ಭಾನುವಾರ ಅಧಿಕಾರಿಗಳ ಸಭೆ ನಡೆಸಿ, ಸಾರ್ವಜನಿಕರಿಗೆ ಅರಿವು ಮೂಡಿಸುವ ಭಿತ್ತಿಪತ್ರ ಬಿಡುಗಡೆ ಮಾಡಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮಳೆಗಾಲ ಆರಂಭವಾದ ಬಳಿಕ ಡೆಂಘೀ ಪ್ರಕರಣಗಳಲ್ಲಿ ಏರಿಕೆಯಾಗಿದೆ. ಮೈಸೂರು ಜಿಲ್ಲೆಯಲ್ಲಿ 3595 ಜನರು ಡೆಂಘೀ ಪರೀಕ್ಷೆಗೆ ಒಳಗಾಗಿದ್ದು, 496 ದೃಢಪಟ್ಟಿದೆ. ಸಮುದಾಯ ಆರೋಗ್ಯಾಧಿಕಾರಿ ಸ್ವಯಂ ಔಷಧ ಸೇವಿಸಿದ್ದರಿಂದ ಮೃತಪಟ್ಟಿದ್ದಾರೆ ಎಂದು ಹೇಳಿದರು.
ಹಿಂದಿನ ಮೂರು ತಿಂಗಳಿಗೆ ಹೋಲಿಸಿದರೆ ಡೆಂಘೀ ಪ್ರಕರಣಗಳ ಸಂಖ್ಯೆ ಕುಸಿದಿದೆ. ಮೈಸೂರು ನಗರದ ಬಳಿಕ ಹುಣಸೂರು ತಾಲೂಕಿನಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ ಡೆಂಘೀ ನಿಯಂತ್ರಣಕ್ಕೆ ಬರುತ್ತಿದೆ ಎಂದು ವಿವರಿಸಿದರು.
10ರಿಂದ ಕಬಿನಿ ನಾಲೆಗೆ ನೀರು:
ಕಬಿನಿ ಜಲಾಶಯದಲ್ಲಿ 81 ಅಡಿ ನೀರು ಸಂಗ್ರಹವಾಗಿದೆ. ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಸಲುವಾಗಿ ಜು.10ರಿಂದ ನಾಲೆಗಳಿಗೆ ನೀರು ಹರಿಸಲು ತೀರ್ಮಾನಿಸಲಾಗಿದೆ. ಒಳ ಹರಿವಿನ ಪ್ರಮಾಣ ನೋಡಿಕೊಂಡು ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.
ಸೆಕ್ಷನ್ 7ಡಿ ರದ್ದು:
ಎಸ್‍ಸಿಪಿ, ಟಿಎಸ್‍ಪಿ ಅನುದಾನವನ್ನು ಇತರೆ ಉದ್ದೇಶಗಳಿಗೆ ಬಳಸಿಕೊಳ್ಳಲು ಅವಕಾಶ ನೀಡಿರುವ ಸೆಕ್ಷನ್ 7ಡಿ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ರದ್ದು ಮಾಡಿದ್ದಾರೆ ಎಂದು ಮಹದೇವಪ್ಪ ತಿಳಿಸಿದರು.
ಸೆಕ್ಷನ್ 7ಡಿ ಮೂಲಕ ಹಿಂದಿನ ಬಿಜೆಪಿ ಸರ್ಕಾರ ದಲಿತರಿಗೆ ಮೀಸಲಿಟ್ಟ ಅನುದಾನದಲ್ಲಿ 10 ಸಾವಿರ ಕೋಟಿ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಿಕೊಂಡಿದೆ. ಪರಿಶಿಷ್ಟರಿಗೆ ಮೀಸಲಿಟ್ಟ ಅನುದಾನವನ್ನು ಗ್ಯಾರಂಟಿಗೆ ಬಳಸಲಾಗುತ್ತಿದೆ ಎಂದು ವಿಪಕ್ಷ ನಾಯಕರು ರಾಜಕೀಯ ನಾಯಕರು ಗುಲ್ಲೆಬ್ಬಿಸುತ್ತಿದ್ದಾರೆ ಎಂದು ಹೇಳಿದರು.
ಸಹಾಯಧನ ಹೆಚ್ಚಳ:
ನವದೆಹಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯುವ ವಿದ್ಯಾರ್ಥಿಗಳಿಗೆ 10 ಸಾವಿರ ರೂ. ಸಹಾಯ ಧನ ನೀಡಲಾಗುತ್ತಿದ್ದನ್ನು 15 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ಸುಸಜ್ಜಿತ ಹಾಸ್ಟೆಲ್, ಹೈಟೆಕ್ ಗ್ರಂಥಾಲಯ ಸ್ಥಾಪನೆಗೂ ಚಿಂತನೆ ಮಾಡಲಾಗಿದೆ ಎಂದು ಹೇಳಿದರು.