ಜನ ಜಾಗೃತರಾದರೆ ಡೆಂಗಿ ನಿಯಂತ್ರಿಸಬಹುದು: ಯೋಗಣ್ಣ
ಸಂಜೆವಾಣಿ ನ್ಯೂಸ್
ಮೈಸೂರು: ಜು.08:- ಜನರು ಜಾಗೃತರಾದರೆ ಡೆಂಗಿಯಂತಹ ಮಾರಕ ರೋಗಗಳನ್ನು ನಿಯಂತ್ರಿಸಬಹುದು’ ಎಂದು ಸುಯೋಗ್ ಆಸ್ಪತ್ರೆ ಸಂಸ್ಥಾಪಕರಾದ ಡಾಕ್ಟರ್ ಎಸ್ ಪಿ ಯೋಗಣ್ಣ ಹೇಳಿದರು. ನಗರದ ಮಹದೇವಪುರ ಆರೋಗ್ಯ ಮತ್ತು ಕ್ಷೇಮ ಉಪಕೇಂದ್ರ ದಲ್ಲಿ ಜನಸೇವಕ ಯುವ ಬ್ರಿಗೇಡ್ ವತಿಯಿಂದ ವಿಶ್ವ ಯೋಗ ದಿನ ಹಾಗೂ ವೈದ್ಯರ ದಿನಾಚರಣೆ ಅಂಗವಾಗಿ ಉಚಿತ ಹೃದಯ ಸಂಬಂಧಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರುಮನೆಯ ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳಬೇಕು. ಮನೆಯ ಅಕ್ಕಪಕ್ಕ ನೀರು ನಿಲ್ಲದಂತೆ ನೋಡಿಕೊಳ್ಳಬೇಕು’ ಎಂದು ಜನರಿಗೆ ತಿಳಿ ಹೇಳಿದರು.
`ಡೆಂಗಿ ಮಾರಕ ರೋಗ. ತೀವ್ರ ತಲೆನೋವು, ತೀವ್ರವಾದ ಸ್ನಾಯು ಅಥವಾ ಕೀಲು ನೋವು, ವಾಂತಿ, ಕಣ್ಣುನೋವು, ವಾಕರಿಕೆ ಮತ್ತು ಚರ್ಮದ ದದ್ದುಗಳು ಕಂಡಬಂದರೆ ತಕ್ಷಣ ಸಮೀಪದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕು’ ಎಂದು ಸಲಹೆ ನೀಡಿದರು.
ನಂತರ ಮಾತನಾಡಿದ ಜೀವದಾರ ರಕ್ತ ನಿಧಿ ನಿರ್ದೇಶಕ ಗಿರೀಶ್ ದೇಹಕ್ಕೆ ಆಹಾರ ಹೇಗೆ ಅಗತ್ಯವೋ, ಹಾಗೆಯೇ ಪ್ರತಿನಿತ್ಯ ಯೋಗ ಮತ್ತು ಧ್ಯಾನದ ಅಭ್ಯಾಸ ಅವಶ್ಯಕವಾಗಿವೆ. ಅಷ್ಟಾಂಗ ಯೋಗದ ಅನುಷ್ಠಾನದಿಂದ ಚಿತ್ತಚಂಚಲತೆ ನಿವಾರಣೆಯಾಗಿ ಮಾನಸಿಕ ಸ್ಥಿರತೆ ದೊರೆತು ವಿವೇಕ ಲಭಿಸುವುದು. ಶ್ವಾಸಕೋಶ ಸಂಬಂಧಿ ರೋಗಗಳಿಗೆ ಯೋಗ ಅತ್ಯಂತ ಪರಿಣಾಮಕಾರಿಯಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಯೋಗ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆರೋಗ್ಯ ತಪಾಸಣಾ ಶಿಬಿರದಲ್ಲಿ 100ಕ್ಕೂ ಹೆಚ್ಚು ಜನ ಹಿಮೋಗ್ಲೋಬಿನ್, ರಕ್ತದ ಗುಂಪು, ಸಕ್ಕರೆ ಪ್ರಮಾಣ, ಥೈರಾಯ್ಡ್ ಪರೀಕ್ಷೆ, ಹೆಚ್‍ಬಿಎ1ಸಿ (ಸಕ್ಕರೆ ಕಾಯಿಲೆ ಪರೀಕ್ಷೆ), ಅಲ್ಟ್ರಾಸೋನೋಗ್ರಫಿ, ಇಸಿಜಿ ಹೃದಯದ ಪರೀಕ್ಷೆ, ಮಾಡಿಸಿಕೊಂಡರು.
ಇದೇ ಸಂದರ್ಭದಲ್ಲಿ 30ಕ್ಕೂ ಹೆಚ್ಚು ಜನ ಸ್ವಯಂ ಪ್ರೇರಿತ ರಕ್ತದಾನ ಮಾಡಿದರು.
ಸುಯೋಗ್ ಆಸ್ಪತ್ರೆ ಸಂಸ್ಥಾಪಕರಾದ ಡಾ.ಎಸ್ ಪಿ ಯೋಗಣ್ಣ, ಜನಸೇವಕ ಯುವ ಬ್ರಿಗೇಡ್ ಅಧ್ಯಕ್ಷರಾದ ರಾಘವೇಂದ್ರ ಡಿ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಮತ್ತು ಸಮರ್ಥ ಶಕ್ತಿ ಸೇವಾ ಸಂಸ್ಥೆ ಅಧ್ಯಕ್ಷರಾದ ಮೋನಿಕಾ ಎಂ, ಮೈಸೂರು ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಕಿರಣ್ ನಾಯ್ಡು, ಬಿಜೆಪಿ ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷರಾದ ಸವಿತಾ ಪುಟ್ಟೇಗೌಡ, ಸಮಾಜ ಸೇವಕರಾದ ಕಲ್ಪನಾ ಹಾಗೂ ನವೀನ ಗೌಡ ಇನ್ನಿತರರು ಹಾಜರಿದ್ದರು