ಗ್ರಾಮದ ಸ್ವಚ್ಚತೆಗೆ ಮೊದಲ ಆದ್ಯತೆ ನೀಡಿ:ಬಾಬು ರಾಠೋಡ
ಇಂಡಿ:ಜು.8: “ಊರು ಸ್ವಚ್ಛವಾಗಿದ್ದರೆ ನಾಡು ಸ್ವಚ್ಛವಾದ ಹಾಗೆ’ ಎಂಬ ಪರಿಕಲ್ಪನೆಯಲ್ಲಿ ಪ್ರತಿ ತಿಂಗಳ ಮೊದಲ ಶನಿವಾರದಂದು ಗ್ರಾಪಂ ಮಟ್ಟದಲ್ಲಿ ‘ಸ್ವಚ್ಛ ಶನಿವಾರ’ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಎಲ್ಲರೂ ಹಳ್ಳಿಗಳ ಶುಚಿತ್ವಕ್ಕೆ ಆದ್ಯತೆ ನೀಡಬೇಕು ಎಂದು ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾಠೋಡ ಹೇಳಿದರು.
ಅವರು ತಾಲೂಕಿನ ಹಿರೇರೂಗಿ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕ ಪಂಚಾಯಿತಿ, ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಹಮ್ಮಿಕೊಂಡ ‘ಸ್ವಚ್ಛ ಶನಿವಾರ’ ಹಾಗೂ ‘ಸಸಿ ನೆಡುವ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮವನ್ನು ಸ್ವಚ್ಛವಾಗಿಡುವುದರ ಜತೆಗೆ ಶುಚಿತ್ವದ ಬಗ್ಗೆ ಹಳ್ಳಿಗರಿಗೆ ಮತ್ತಷ್ಟು ಅರಿವು ಮೂಡಿಸುವ ಸಂಬಂಧ ಸ್ವಚ್ಛ ಶನಿವಾರ ಕಾರ್ಯಕ್ರಮವನ್ನು ಪ್ರತಿ ಗ್ರಾಪಂಗಳಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಇದರ ಯಶಸ್ಸಿಗೆ ಸಮುದಾಯದ ಸಹಕಾರ ಬಹುಮುಖ್ಯ ಎಂದು ಹೇಳಿದರು.
ಪಿಡಿಓ ಬಸವರಾಜ ಬಬಲಾದ ಮಾತನಾಡಿ, ಮಾದರಿ ಗ್ರಾಮ ನಿರ್ಮಾಣಕ್ಕಾಗಿ ಸ್ವಚ್ಚತೆ ಮತ್ತು ಸ್ವಾಸ್ಥಕ್ಕೆ ಮೊದಲ ಆದ್ಯತೆ ಕೊಡಬೇಕು. ಗ್ರಾಮ ಸ್ವಚ್ಛವಾದರೆ ದೇಶ ಸ್ವಚ್ಛವಾಗುತ್ತದೆ. ಹಾಗೆಯೇ ಗ್ರಾಮದ ಜನರ ಆರೋಗ್ಯ ಸುಧಾರಿಸಿದರೆ ದೇಶ ಸ್ವಸ್ಥವಾಗುತ್ತದೆ ಎಂದು ಹೇಳಿದರು.
ಯುಬಿಎಸ್ ಶಿಕ್ಷಕ ಸಂತೋಷ ಬಂಡೆ ಮಾತನಾಡಿ,
ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಂಬಂತೆ ಇಂದು ನಾವು ನೆಡುವ ಸಸಿಗಳು ಮುಂದಿನ ಮಕ್ಕಳ ಬದುಕಿಗೆ ದಾರಿದೀಪವಾಗಲಿವೆ.ಆಧುನೀಕತೆಯ ಹೆಸರಲ್ಲಿ ಅರಣ್ಯನಾಶ ಹೆಚ್ಚುತ್ತಿದ್ದು, ಇದನ್ನು ತಪ್ಪಿಸಲು ಮರಗಿಡಗಳನ್ನು ನೆಟ್ಟು ಪರಿಸರ ಕಾಪಾಡುವುದು ಎಲ್ಲರ ಜವಾಬ್ದಾರಿ ಎಂದು ಹೇಳಿದರು.
ಯುವ ಮುಖಂಡ ಪರಶುರಾಮ ಹೊಸಮನಿ ಅಧ್ಯಕ್ಷತೆ ವಹಿಸಿದ್ದರು. ಪಿಡಿಓ ಜಬ್ಬಾರಅಲಿ ಹಳ್ಳಿ, ಸದಸ್ಯರಾದ ಶಿವಾನಂದ ಪೂಜಾರಿ, ದ್ಯಾವಪ್ಪ ಮಿರಗಿ, ಗ್ರಾಮಸ್ಥರಾದ ಉಮೇಶ ಹಲಸಂಗಿ, ಸುದರ್ಶನ ಬೇನೂರ ಹಾಗೂ ಪಂಚಾಯಿತಿ ಸಿಬ್ಬಂದಿಗಳಾದ ಮಲ್ಲಮ್ಮ ಚವ್ಹಾಣ, ಶ್ರೀಧರ ಬಾಳಿ,ಅಕ್ಬರ ಕೊರಬು,ಸಚಿನ ಹೊಸೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಗ್ರಾಮದ ಸಂತೆಕಟ್ಟೆಯ ಆವರಣವನ್ನು ಸ್ವಚ್ಛಗೊಳಿಸಲಾಯಿತು. ಜತೆಗೆ ಗಿಡಗಳನ್ನು ನೆಡಲಾಯಿತು.