ಮಕ್ಕಳ ಆರೋಗ್ಯದ ಕಡೆ ಗಮನ ನೀಡಬೇಕು
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜು.08: ಮಕ್ಕಳ ಆರೋಗ್ಯದ ಕಡೆ ಪೆÇೀಷಕರು ಹೆಚ್ಚಿನ ಗಮನ ನೀಡಬೇಕು ರೋಗಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ಪಟ್ಟಣದ ದುಂಡಶೆಟ್ಟಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಮಕ್ಕಳ ತಜ್ಞ ಡಾಕ್ಟರ್ ಶಶಿಧರ್ ಹೇಳಿದರು.
ಅವರು ಪಟ್ಟಣದ ಪ್ರಗತಿ ಇಂಗ್ಲಿಷ್ ಶಾಲೆಯ ಆವರಣದಲ್ಲಿ ಏರ್ಪಡಿಸಿದ್ದ ವೈದ್ಯರ ದಿನಾಚರಣೆ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಎರೆಯುವುದರ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದರು.
ಆರೋಗ್ಯ ಎಲ್ಲಕ್ಕೂ ಮಿಗಿಲಾದುದ್ದು ಆರೋಗ್ಯವೇ ಭಾಗ್ಯ ಪ್ರತಿಯೊಬ್ಬರು ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕು.ಶುಚಿತ್ವಕ್ಕೆ ಆದ್ಯತೆ ನೀಡಬೇಕು. ಸೊಳ್ಳೆಗಳಿಂದ ದೂರ ಇರಬೇಕು. ಪ್ರತಿಯೊಬ್ಬರೂ ಸೊಳ್ಳೆಗಳಿಂದ ರಕ್ಷಣೆ ಪಡೆಯಬೇಕು. ಹಗಲು ವೇಳೆ ಕಚ್ಚುವ ಸೊಳ್ಳೆಗಳಿಂದ ಡೆಂಗ್ಯು ಬರುತ್ತದೆ. ಆದುದರಿಂದ ಹಗಲು ವೇಳೆ ಮಲಗುವವರು ಎಚ್ಚರಿಕೆಯಿಂದ ಸೊಳ್ಳೆಯ ಪರದೆ ಬಳಸಬೇಕು ಮಕ್ಕಳು ರಸ್ತೆಯ ಬದಿಯಲ್ಲಿ ಮಾರಾಟ ಮಾಡುವ ತಿಂಡಿ ತಿನಿಸುಗಳನ್ನು ತಿನ್ನಬಾರದು. ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕು ಎಂದು ಡಾಕ್ಟರ್ ಶಶಿಧರ್ ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಂಶುಪಾಲ ಕೆ.ಕಾಳೇಗೌಡ ಮಾತನಾಡಿ ಎಲ್ಲರೂ ಆರೋಗ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಆರೋಗ್ಯ ಇದ್ದರೆ ಎಲ್ಲವೂ ಇರುತ್ತದೆ. ಆರೋಗ್ಯ ಅತ್ಯಂತ ಪ್ರಮುಖವಾದುದ್ದು. ಆರೋಗ್ಯದ ಕಡೆ ಮುನ್ನೆಚ್ಚರಿಕೆ ವಹಿಸಬೇಕು. ಆರೋಗ್ಯದಿಂದ ಎಲ್ಲವನ್ನು ಸಾಧಿಸಲು ಸಾಧ್ಯ ಆಗುತ್ತದೆ ಎಂದು ಹೇಳಿದರು.
ಪ್ರಗತಿ ಶಾಲೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಎಂ.ಕೆ ಮೋನಿಕಾ ಮಾತನಾಡಿ ಮಕ್ಕಳು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನವನ್ನು ನೀಡುವುದರ ಮೂಲಕ ಹೆಚ್ಚು ಹೆಚ್ಚು ಚಟುವಟಿಕೆಯಿಂದ ಇರಲು ಸಾಧ್ಯವಾಗುತ್ತದೆ. ಪೌಷ್ಟಿಕ ಆಹಾರದಿಂದ ಮಕ್ಕಳ ಶೈಕ್ಷಣಿಕ ಪ್ರಗತಿ ಸಾಧ್ಯ. ಆದ್ದರಿಂದ ಶಾಲೆಯಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಮಕ್ಕಳು ವೈದ್ಯಕೀಯಕ್ಕೆ ಸಂಬಂಧಿಸಿದಂತೆ ವಿವಿಧ ಆರೋಗ್ಯ ಸಂಬಂಧಿಸಿದ ಭಾಷಣ ಚಿತ್ರಕಲೆ ನೃತ್ಯ ಹಾಗೂ ಕಿರು ನಾಟಕಗಳನ್ನು ಪ್ರದರ್ಶನ ಮಾಡಿದರು. ಶಿಕ್ಷಕರಾದ ಶಶಿಕಲಾ, ಮಾನಸ, ಗೌತಮಿ, ದೀಪ್ತಿ, ಭೂಮಿಕಾ, ಅಂಬಿಕಾ, ಉಷಾ, ಸುಕನ್ಯಾ ಹಾಗೂ ಸುಮಿತ್ರ ಕಾರ್ಯಕ್ರಮದಲ್ಲಿದ್ದರು. ವಿದ್ಯಾರ್ಥಿಗಳಾದ ಗೋವರ್ಧನ್ ಕಾರ್ಯಕ್ರಮ ನಿರೂಪಿಸಿದರು. ಅಬ್ದುಲ್ ರೇಹಾನ್ ಸ್ವಾಗತಿಸಿದರು. ಗೌರೀಶ್ ವಂದಿಸಿದರು.