ವಿಕಲಚೇತನ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಜು.೮; ಕಳೆದ 20 ವರ್ಷಗಳಿಂದ ನೇರ ಪಾವತಿಗೆ ಒಳಗಾಗಿದ್ದ ಪೌರ ಕಾರ್ಮಿಕರನ್ನು ಖಾಯಂಗೊಳಿಸಿದ ಆದೇಶ ಪ್ರತಿ ಹಾಗೂ ಶೇ.5 ರ ಯೋಜನೆಯಡಿ ವಿಕಲಚೇತನ ಫಲಾನುಭವಿಗಳಿಗೆ ತ್ರಿ-ಚಕ್ರ ವಾಹನ ಮತ್ತು ಜೆರಾಕ್ಸ್ ಯಂತ್ರಗಳನ್ನು ಇಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪನವರು ಮತ್ತು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ವಿತರಿಸಿದರು. ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರ ನಿವಾಸದಲ್ಲಿ ನಡೆದ ಈ ಸರಳ ಕಾರ್ಯಕ್ರಮವನ್ನುದ್ದೇಶಿಸಿ ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ ಮಾತನಾಡಿ ದಾವಣಗೆರೆ ಮಹಾನಗರಪಾಲಿಕೆ ವತಿಯಿಂದ ನೇರಪಾವತಿ ಪೌರ ಕಾರ್ಮಿಕರನ್ನು ಹಂತ ಹಂತವಾಗಿ ಒಟ್ಟು 250 ಪೌರ ಕಾರ್ಮಿಕರನ್ನು ಖಾಯಂಗೊಳಿಸಲಾಗಿರುತ್ತದೆ.  ಪೌರ ಕಾರ್ಮಿಕರಿಗೆ ನೇಮಕಾತಿ ಆದೇಶ ಪ್ರತಿ ಹಾಗೂ ಶೇ.5 ರ ಯೋಜನೆಯಡಿ ಫಲಾನುಭವಿಗಳಿಗೆ ತ್ರಿ-ಚಕ್ರ ವಾಹನ ಮತ್ತು ಜೆರಾಕ್ಸ್ ಯಂತ್ರ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಮಾತನಾಡಿ ಪೌರಕಾರ್ಮಿಕರ ಶ್ರಮದಿಂದಾಗಿ ರಾಜ್ಯದಲ್ಲಿ 4ನೇ ಸ್ಥಾನ ಪಡೆದಿರುವ ದಾವಣಗೆರೆ ಮಹಾನಗರ ಪಾಲಿಕೆ ಮುಂದಿನ ದಿನಗಳಲ್ಲಿ ನಂಬರ್ 1 ಸ್ಥಾನ ಬರಲು ಶ್ರಮಿಸುವಂತೆ ಕರೆ ನೀಡಿದರು.ಪೌರಕಾರ್ಮಿಕರು ನಗರ ಸ್ವಚ್ಚತೆ ವೇಳೆ ತಮ್ಮ ಆರೋಗ್ಯ ಸುರಕ್ಷತೆಗೂ ಸಹ ಗಮನ ಹರಿಸಿ ಕಾರ್ಯನಿರ್ವಹಿಸಬೇಕು, ಈ ಹಿಂದೆ ಪೌರಕಾರ್ಮಿಕರಿಗಾಗಿ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಗಿತ್ತು ಎಂದು ತಿಳಿಸಿದ ಸಂಸದರು ತಮ್ಮ ಆರೋಗ್ಯ ಮತ್ತು ವಸತಿ ಸಮಸ್ಯೆ ಪರಿಹರಿಸಲು ನಾವಿದ್ದು, ನೀವು ಯಾವುದೇ ಕಾರಣಕ್ಕೂ ಎದೆಗುಂದಬಾರದು ಎಂದರು.ಮಹಾನಗರ ಪಾಲಿಕೆಯಿಂದ ಪೌರ ಕಾರ್ಮಿಕರ ಪ್ರತಿಭಾವಂತ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುತ್ತಿದ್ದು, ಉನ್ನತ ಶಿಕ್ಷಣ ಪಡೆದವರಿಗೆ ಲ್ಯಾಪ್ಟಾಪ್ ಒದಗಿಸುವ ಮೂಲಕ ಪ್ರೋತ್ಸಾಹಿಸಲಾಗುತ್ತಿದ್ದು, ಪೌರ ಕಾರ್ಮಿಕರಿಗೆ ವಿಶ್ರಾಂತಿ ಗೃಹಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.ಇಂದು ಶೇ.5ರ ಯೋಜನೆಯಡಿ ಅರ್ಹ ವಿಕಲಚೇತನ ಫಲಾನುಭವಿಗಳಿಗೆ 29 ರೆಟ್ರೋಫಿಟ್‌ಮೆಂಟ್ ದ್ವಿ-ಚಕ್ರ ವಾಹನ ಹಾಗೂ ಪಾಲಿಕೆಯಲ್ಲಿ ಕೆಲಸ ನಿರ್ವಹಿಸುವ ಅಂಗವಿಕಲ ಯು.ಆರ್.ಡಬ್ಲ್ಯೂ ಗಳಿಗೆ ಚೇರ್, ಟೇಬಲ್, ಕಂಪ್ಯೂಟರ್, ಜೇರಾಕ್ಸ್ ಮಿಷನ್, ಪ್ರಿಂಟರ್ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲಾಗಿದೆ ಎಂದರು.ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪನವರು ಮಾತನಾಡಿ ನಗರ ಸ್ವಚ್ಚತೆಗಾಗಿ 2002 ರಲ್ಲಿ ಈ ಹಿಂದೆ ನಮ್ಮ ಸರ್ಕಾರ ಇದ್ದಾಗ ಪಾಲಿಕೆಯಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಗುತ್ತಿಗೆದಾರರ ಮೂಲಕ 270 ಜನ ಪೌರ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗಿತ್ತು. ಗುತ್ತಿಗೆದಾರರು ಪೌರ ಕಾರ್ಮಿಕರುಗಳಿಗೆ ಸಮಯಕ್ಕೆ ಸರಿಯಾಗಿ ವೇತನ ಪಾವತಿಸದೇ ಇರುವುದರಿಂದ 2017ರ ನವಂಬರ್‌ನಲ್ಲಿ ಈ ಹಿಂದೆ ನಮ್ಮ ಸರ್ಕಾರ ಇದ್ದಾಗಲೇ ನೇರವಾಗಿ ಪೌರಕಾರ್ಮಿಕರ ಬ್ಯಾಂಕ್ ಖಾತೆಗೆ ವೇತನ ಪಾವತಿ ಮಾಡುವಂತೆ ಆದೇಶ ಹೊರಡಿಸಲಾಗಿತ್ತು ಎಂದು ತಿಳಿಸಿದರು.2019 ರಲ್ಲಿ 34 ಜನ ಪೌರ ಕಾರ್ಮಿಕರನ್ನು ನೇರ ನೇಮಕಾತಿ ಮೂಲಕ ಖಾಯಂ ಗೊಳಿಸಲಾಗಿದ್ದು, 2023 ರಲ್ಲಿ 114 ಜನ ಪೌರಕಾರ್ಮಿಕರನ್ನು ನೇರ ನೇಮಕಾತಿ ಮಾಡಿಕೊಳ್ಳುವ ಸಲುವಾಗಿ ಅರ್ಜಿಯನ್ನು ಕರೆದು 106 ಜನ ಪೌರ ಕಾರ್ಮಿಕರನ್ನು ಖಾಯಂಗೊಳಿಸಲಾಗಿದೆ. ಪ್ರಸ್ತುತ ಸಾಲಿನಲ್ಲಿ (2024) 119 ಪೌರ ಕಾರ್ಮಿಕರನ್ನು ನೇರ ನೇಮಕಾತಿ ಮಾಡಿಕೊಳ್ಳುವ ಸಲುವಾಗಿ ಅರ್ಜಿಯನ್ನು ಕರೆದು 100 ಜನ ಪೌರ ಕಾರ್ಮಿಕರುಗಳಿಗೆ ನೇಮಕಾತಿ ಆದೇಶವನ್ನು ಇಂದು ನೀಡುತ್ತಿದ್ದೇವೆ ಎಂದರು.