ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಓ.ಪಿ.ಎಸ್ ಜಾರಿಗೊಳಿಸುವ ಭರವಸೆ ಈಡೇರಿಸಲು ಮನವಿ
ಸಂಜೆವಾಣಿ ವಾರ್ತೆ
ಕೆ.ಆರ್.ನಗರ, ಜು.08:- ಈಗಿನ ಸರಕಾರ ರಾಜ್ಯದ ಸರಕಾರಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಎನ್.ಪಿ.ಎಸ್ ರದ್ದುಗೊಳಿಸಿ ಓ.ಪಿ.ಎಸ್ ಜಾರಿಗೊಳಿಸುವ ಭರವಸೆಯನ್ನು ನೀಡಿದ್ದು ನೀಡಿರುವ ಭರವಸೆಯಂತೆ ಈಡೇರಿಸ ಬೇಕೆಂದು ಕೆ.ಆರ್.ನಗರ ಮತ್ತು ಸಾಲಿಗ್ರಾಮ ಆವಳಿ ತಾಲ್ಲೂಕಿನ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದವರು ಪಟ್ಟಣದ ತಾಲೂಕು ಕಚೇರಿಯಲ್ಲಿ ಶಿರೇಸ್ತೆದಾರ್ ಯೊಗಾಚಾರ್ ಅವರಿಗೆ ಮನವಿ ಪತ್ರ ನೀಡಿದರು.
ಸಂಘದ ಅಧ್ಯಕ್ಷ ಸಾಲಿಗ್ರಾಮ ಭರತ್ ಮಾತನಾಡಿ ಶೀಘ್ರದಲ್ಲಿಯೆ ನಿಶ್ಚಿತ ಪಿಂಚಣಿ (ಓ.ಪಿ.ಎಸ್) ನ್ನು ಸರ್ಕಾರ ಜಾರಿಗೊಳೊಸ ಬೇಕು. ಓ.ಪಿ.ಎಸ್ ಜಾರಿ ವಿಳಂಬವಾದಲ್ಲಿ ರಾಜ್ಯ ಸರಕಾರಿ ನೌಕರರಿಗೆ ನೀಡುತ್ತಿರುವಂತೆ ಎನ್.ಪಿ.ಎಸ್‍ನ್ನು ಯಥಾವತ್ತಾಗಿ ಜಾರಿ ಮಾಡುವುದು. ಅಂದರೆ ನೇಮಕಾತಿ, ಪ್ರಾಧಿಕಾರದ ವಂತಿಗೆಯನ್ನು ಆಡಳಿತ ಮಂಡಳಿಗಳ ಬದಲಾಗಿ ಸರಕಾರವು ಭರಿಸಲು ಕ್ರಮ ವಹಿಸಬೇಕು ಎಂದರು.
ಕರ್ನಾಟಕ ಖಾಸಗಿ ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂದಿಗಳ (ವೇತನ, ನಿವೃತ್ತಿ ವೇತನ ಮತ್ತು ಇತರೆ ಸೌಲಭ್ಯಗಳ ನಿಯಂತ್ರಣ) ವಿಧೇಯಕ 2014 ಕ್ಕೆ ತಿದ್ದುಪಡಿ ತಂದು ಅಥವಾ ರದ್ದುಪಡಿಸಿ ಭವಿಷ್ಯಾವರ್ತಿಯಾಗಿ ಜಾರಿಗೆ ಬರುವಂತೆ ಕ್ರಮ ವಹಿಸ ಬೇಕೆಂದು ಮನವಿ ಮಾಡಿದರು. ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ದಶಕಗಳಿಂದ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಶೀಘ್ರ ಕ್ರಮ ಕೈಗೊಳ್ಳು ಬೇಕು ಎಂದು ಒತ್ತಾಯ ಮಾಡಿದರು.
ಅನುದಾನಿತ ನೌಕರರಿಗೂ ಕೂಡ ಸರಕಾರಿ ನೌಕರರಂತೆ ಜ್ಯೋತಿ ಸಂಜಿವಿನಿ ಯೋಜನೆಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು. ಸರಕಾರಿ ಶಾಲಾ ಕಾಲೇಜುಗಳು ಮತ್ತು ಅನುದಾನಿತ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗಾಗಲಿ ಹಾಗೂ ನೌಕರರಿಗಾಗಲಿ ಯಾವುದೇ ತಾರತಮ್ಯ ನೀತಿ ಮಾಡಬಾರದು.
ಈ ಪ್ರಮುಖ ಬೇಡಿಕೆಗಳನ್ನು ಮಾನವೀಯ ಕಳಕಳಿ ಹಿನ್ನೆಲೆಯಲ್ಲಿ ಈಡೇರಿಸಲು ಸರಕಾರ ಶೀಘ್ರ ಕ್ರಮ ವಹಿಸಬೇಕು ನಮ್ಮೆಲ್ಲರ ಒಕ್ಕೊಲಿನ ಒತ್ತಾಯವಾಗಿದೆ ಎಂದು ತಿಳಿಸಿದರು.
ಈಗಿನ ಸರಕಾರವು ತಮ್ಮ ಪಕ್ಷದ ನೇತ್ರತ್ವದ ಸರಕಾರ ಅಸ್ತಿತ್ವಕ್ಕೆ ಬಂದ ತಕ್ಷಣ ಸಹಾನುಭೂತಿಯಿಂದ ಅನುದಾನಿತ ಶಾಲೆ ಕಾಲೇಜುಗಳ ನೌಕರರಿಗೆ ಹಳೆಯ ಪಿಂಚಣಿ ವ್ಯವಸ್ಥೆ (ಓಪಿಎಸ್) ಜಾರಿ ತರುವುದಾಗಿ ಪಕ್ಷದ ಚುನವಾಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದೀರಿ. ಈಗಾಗಲೇ ತಮ್ಮ ಸರಕಾರ ಅಧಿಕಾರಕ್ಕೆ ಬಂದು ವರ್ಷ ಗತಿಸಿದೆ ಆದ್ದರಿಂದ ಇನ್ನೂ ಹೆಚ್ಚಿನ ವಿಳಂಬ ನೀತಿ ಅನುಸರಿಸಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಸಾವಿರಾರು ನೌಕರರನ್ನು ಮತ್ತೆ ಹೋರಾಟಕ್ಕಿಳಿಯುವಂತಾಗ ಬಾರದು ಆದ್ದರಿಂದ ನಮ್ಮ. ನೌಕರರ ನ್ಯಾಯಯುತ ಬೇಡಿಕೆಗಳನ್ನು ಶೀಘ್ರ ಈಡೇರಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯ ಮಾಡಲಾಯಿತು.
ಅನುದಾನಿತ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಅಶೋಕ್, ಜಿಲ್ಲಾ ಸಂಚಾಲಕ ಜ್ಯೋತಿಕುಮಾರ್, ತಾಲೂಕು ಕಾರ್ಯದರ್ಶಿ ಟಿ.ಸತೀಶ್, ಮನೋಹರ್, ಸಂಘಟನಾ ಕಾರ್ಯದರ್ಶಿ ಸುಧೀರ್ ಆರಾಧ್ಯ, ಅನುದಾನಿತ ಶಾಲಾ ಶಿಕ್ಷಕರುಗಳಾದ ಕೆ.ಸಿ.ಪ್ರಕಾಶ್. ಚಕ್ರಪಾಣಿ, ಜಯಶ್ರೀ, ಪುಷ್ಪಲತಾ, ರೇವಣ್ಣ, ದಿವಾಕರ್, ಚೆಲುವರಾಜ್, ಚಿಕ್ಕೇಗೌಡ, ಪ್ರಕಾಶ್ ಶೆಟ್ಟಿ, ಸುರೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು