ಪಕ್ಷಾತೀತವಾಗಿ ಸಮಾಜ ಸಂಘಟಿಸಲು‌ ಕರೆ
ಸಂಜೆವಾಣಿ ವಾರ್ತೆ
ಚಿತ್ರದುರ್ಗ. ಜು.೮; ಪಕ್ಷಾತೀತವಾಗಿ ಸಮಾಜ ಸಂಘಟಿಸುವ ಅಗತ್ಯವಿದೆ ಎಂದು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್ ಹೇಳಿದರು.ನಗರದ ಹೊರವಲಯದಲ್ಲಿರುವ ಭೋವಿ ಗುರುಪೀಠದಲ್ಲಿ  ನಡೆದ ದೀಕ್ಷಾ ರಜತ್ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸಮಾಜವನ್ನು ಎಲ್ಲಾ ಪಕ್ಷದ ಸಮಾಜದ ಬಾಂಧವರು ಸೇರಿ ಸಂಘಟಿಸುವುದರೊಟ್ಟಿಗೆ ಗಿನ್ನೀಸ್ ದಾಖಲೆ ಬರೆಯುವ ರೀತಿ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರ ದೀಕ್ಷಾ ರಜತ ಮಹೋತ್ಸವವನ್ನು ಜುಲೈ 20 ರಂದು ನಡೆಸಬೇಕು ಎಂದು ತಿಳಿಸಿದರು.ದೀಕ್ಷಾ ರಜತ ಮಹೋತ್ಸವವನ್ನು 25 ಬಗೆಯ ಕಿರು ಕಾರ್ಯಕ್ರಮಗಳನ್ನು ಸಂಘಟಿಸಿ ಅರ್ಥಪೂರ್ಣಗೊಳಿಸೋಣ. ಶ್ರೀಗಳು ತಾಲ್ಲೂಕು, ಜಿಲ್ಲಾ, ರಾಜ್ಯ, ರಾಷ್ಟçಮಟ್ಟದ ಸಂಘಟನೆಯಾಗಲು ಕಾರಣೀಭೂತರಾಗಿದ್ದಾರೆ. ವಿದ್ಯಾವಂತರು ಸಂಘಟನೆಗೆ ಸಮಯ ನೀಡಬೇಕು ಹಾಗೂ ಸಂಘಟನೆಯ ಭಾಗವಾಗಿ ನಿಲ್ಲಬೇಕು ಎಂದು ಹೇಳಿದರು.ಅಧಿಕಾರಿಗಳು ವೃತ್ತಿಗಂಟಿಕೊಳ್ಳದೆ, ಸ್ವಾರ್ಥಿಗಳಾಗದೇ, ಸಮಷ್ಠಿಯ ಅಭಿವೃದ್ಧಿಗಾಗಿ ನಿಸ್ವಾರ್ಥಿಗಳಾಗಬೇಕು. ಆದಾಯದಲ್ಲಿ ಸ್ವಲ್ಪ ಕುಟುಂಬಕ್ಕೆ, ಸ್ವಲ್ಪ ಸಮಾಜಕ್ಕೆ ಎನ್ನುವ ಭಾವ ಬರಬೇಕು. ರಾಜಕೀಯ ಶಕ್ತಿ ಹೆಚ್ಚಿಸಿಕೊಳ್ಳಬೇಕು, ಇದಕ್ಕೆ ಸಮಾಜದ ಶ್ರೀಗಳು ದಿಕ್ಸೂಚಿಯಾಗಿ ಸಾಗುತ್ತಿದ್ದಾರೆ. ಕೂಲಿ ಕಾರ್ಮಿಕ ಮಕ್ಕಳು ಬಾಲಕಾರ್ಮಿಕರಾಗದೇ ವಿದ್ಯಾವಂತರಾಗಲು ಅವರನ್ನು ಗುರುತಿಸಿ, ಪರಿವರ್ತಿಸಿ ಪ್ರೇರಣೆ ನೀಡಬೇಕು. ಭೋವಿ ನಿಗಮ ಕಟ್ಟ ಕಡೆಯ ಭೋವಿ ವ್ಯಕ್ತಿಯನ್ನು ಮುಖ್ಯ ವಾಹಿನಿಗೆ ತರುವ ಉದ್ದೇಶವನ್ನು ಹೊಂದಿದೆ ಎಂದು ತಿಳಿಸಿದರು. ಶ್ರೀಗಳು ನಿಶ್ಯಬ್ದದಂತೆ ನೂರಾರು ಮಕ್ಕಳನ್ನು ದತ್ತು ಪಡೆದು ಶೈಕ್ಷಣಿಕ ಹಾಗೂ ಔದ್ಯೋಗಿಕ ಸೇವೆಯನ್ನು ಮಾಡಿದ್ದಾರೆ. ಸಂಚಾರಿ ಮೂರ್ತಿಗಳು ಅವರ ಪರಿಶ್ರಮದಿಂದ ಭೋವಿ ಸಮಾಜ ಸಂಘಟನಾ ಸಮಾಜವಾಗಿ ಹೊರಹೊಮ್ಮಿದೆ. ಸರ್ಕಾರದಲ್ಲಿ ರಾಜಕಾರಣಿಗಳ ಮಾತಿಗಿಂತ ಶ್ರೀಗಳ ಮಾತಿಗೆ ಹೆಚ್ಚು ಮೌಲ್ಯ. ಸಮಾಜಕ್ಕೆ ಸಾಮಾಜಿಕ ನ್ಯಾಯ ದೊರಕಿಸುವಲ್ಲಿ ಶ್ರೀಗಳ ಸಂಘಟನಾ ಶಕ್ತಿ ಪರಿಣಾಮಕಾರಿಯಾಗಿದೆ. ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಸಚಿವರು, ರಾಜಕೀಯ ಪ್ರಮುಖರು, ಶ್ರೀಗಳ ಬಳಿ ಬರುತ್ತಿದ್ದಾರೆ. ಸಮಾಜದ ಋಣ ತೀರಿಸುವ ಪ್ರಯತ್ನದಲ್ಲಿರುವವನೇ ನಿಜವಾದ ಸಮಾಜದ ನಾಯಕ ಎಂದು ಹೇಳಿದರು.ಶ್ರೀಗಳ ಜೊತೆ ಪ್ರವಾಸದಲ್ಲಿ ಶ್ರೀಗಳ ಸಹನೆ, ತಾಳ್ಮೆ, ಜಾಣ್ಮೆ, ಚಾಕಚಕ್ಯತೆ, ಚುರುಕತೆ ತಿಳಿದುಕೊಂಡಿದ್ದೇನೆ ಹಾಗೂ ಬದುಕಿನಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದೇನೆ. ಶ್ರೀಗಳಿಗೆ ತನು ಮನ ಧನ ಸೇವೆಗೆ ತಾಮುಂದು, ನಾಮುಂದು ಎಂಬ ಸ್ಪರ್ಧೆಯಲ್ಲಿ ಸೇವೆ ಮಾಡಬೇಕು ಶ್ರೀಮಠದ ಗುರುಕುಲಕ್ಕೆ ಧವಸ ದಾನ್ಯ ನೀಡುವ ಮೂಲಕ ನಮ್ಮ ಮನೆಗೆ ವಹಿಸುವ ಕಾಳಜಿಯಂತೆ ಶ್ರೀಮಠಕ್ಕೂ ನಾವು ಕಾಳಜಿ ವಹಿಸಬೇಕು ಎಂದು ಹೇಳಿದರು. ಭೋವಿ ಅಭಿವೃದ್ಧಿ ನಿಗಮ ಸುಲಿಗೆ ಕೇಂದ್ರವಲ್ಲ, ಸುಧಾರಣಾ ಕೇಂದ್ರವಾಗಿ ಪರಿವರ್ತಿಸುವೆ. ಸೌಲಭ್ಯ ಪಡೆಯದವರಿಗೆ ಸೌಲಭ್ಯ ಕಲ್ಪಿಸಲಾಗುವುದು, ಬಿ.ಜೆ.ಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಅಧ್ಯಕ್ಷರನ್ನು ನೇಮಕ ಮಾಡಲಿಲ್ಲ, ಅಧಿಕಾರಿಗಳ ದರ್ಪದಿಂದ ನಿಗಮದಲ್ಲಿ ಅವ್ಯವಸ್ಥೆಯಾಗಿದೆ. ಎಸ್.ಐ.ಟಿ ತನಿಖೆಯಿಂದ ಸತ್ಯ ತಿಳಿಯುತ್ತದೆ.ಜಿಲ್ಲಾ ಭೋವಿ ಸಂಘದ ಅಧ್ಯಕ್ಷ ಶ್ರೀ ತಿಪ್ಪೇಸ್ವಾಮಿ ಮಾತನಾಡಿ ಯಾವ ಪಕ್ಷದಿಂದಲೂ ಸಂಸತ್ ಚುನಾವಣೆಗೆ ಜಿಲ್ಲೆಯಲ್ಲಿ ಟಿಕೇಟ್ ಸಿಗದಿರುವುದಕ್ಕೆ ಒಗ್ಗಟ್ಟಿನ ಕೊರತೆ. ಟಿಕೇಟ್ ಬೇಕಾದಾಗ ಎಲ್ಲರೂ ಬರುತ್ತಾರೆ, ನಂತರ ಯಾರು ಸೇರುವುದಿಲ್ಲ ಸ್ವಾಮೀಜಿಯವರಿಂದ ಮಾತ್ರ ಸಮಾಜವನ್ನು ಒಗ್ಗಟ್ಟಾಗಿ ಸಂಘಟಿಸಲು ಸಾಧ್ಯವಾಗಿದೆ. ದಾರ್ಶನಿಕರು ಅವರು ಮಾಡಿದ ಒಳ್ಳೆಯ ಕೆಲಸಗಳಿಂದ ದೇವರಾಗಿದ್ದಾರೆ. ಹಾಗಾಗಿ ಒಳ್ಳೆಯ ಕೆಲಸ ಮಾಡಿದವರಿಗೆ ಎಂದೆAದೂ ಹೆಸರು ಇದ್ದೇ ಇರುತ್ತದೆ. ಮಂಜೂರಿ ಹನುಮಂತಪ್ಪ ಸಮಾಜದ ಆಸ್ತಿಯಾಗಿದ್ದಾರೆ. ಹಾಗೆಯೇ ರಾಜಕಾರಣಿಗಳು ಸಮಾಜವನ್ನು ಕೈಹಿಡಿದು ಎತ್ತುವ ಕೆಲಸ ಮಾಡಬೇಕು ಎಂದು ಹೇಳಿದರು. ವೇದಿಕೆಯಲ್ಲಿ ಎಸ್.ಜೆ.ಎಸ್ ವಿದ್ಯಾಸಂಸ್ಥೆಯ ನಿರ್ದೇಶಕರಾದ ವಿ.ಹನುಮಂತಪ್ಪ ಗೋಡೆಮನೆ, ಇ.ಮಂಜುನಾಥ, ಹೆಚ್.ಆಂಜನೇಯ, ಹೊಸದುರ್ಗದ ಸುಬ್ಬಯ್ಯ, ರಾಮಚಂದ್ರಪ್ಪ, ಮಂಜಪ್ಪ, ಎನ್.ಪಿ.ಭರತ್, ಚಂದ್ರಶೇಖರ್, ಉಮೇಶ್, ಭೂತಭೋವಿ, ಭೋವಿ ಗುರುಪೀಠದ ಸಿ.ಇ.ಓ ಗೌನಹಳ್ಳಿ ಗೋವಿಂದಪ್ಪ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಮುಖಂಡರು ಭಾಗವಹಿಸಿದ್ದರು.