ರೈತಸಂಘದ ನಾಮಫಲಕಗಳ ಅನಾವರಣ
ಸಂಜೆವಾಣಿ
ದಾವಣಗೆರೆ.ಜು.3: ತಾಲ್ಲೂಕಿನ ಕಾರಿಗನೂರು ಕ್ರಾಸ್‌ನಲ್ಲಿರುವ ಆಂಜನೇಯ ನಗರ ಮತ್ತು ಹೊನ್ನಮರಡಿ ಗ್ರಾಮಗಳಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದ ಗ್ರಾಮ ಶಾಖೆಗಳ ಉದ್ಘಾಟನೆ ಮತ್ತು ನಾಮಫಲಕಗಳ ಅನಾವರಣ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.ನಾಮಫಲಕ ಅನಾವರಣಗೊಳಿಸಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಹುಚ್ವವ್ವನಹಳ್ಳಿ ಮಂಜುನಾಥ್, ಸಾಲಕ್ಕೆ ಸಾವೇ ಉತ್ತರವಲ್ಲ. ರೈತರು ಸಾಲಕ್ಕೆ ಸವಾಲು ಹಾಕಬೇಕೆ ಹೊರತು ಸಾಲಕ್ಕೆ ಅಂಜಬಾರದು. ಕೇಂದ್ರ ಮತ್ತು ರಾಜ್ಯಸರ್ಕಾರಗಳ ಬೆಲೆ ನೀತಿಯೇ ರೈತರ ಸಾಲಕ್ಕೆ ಪ್ರಮುಖ ಕಾರಣ. ವೈಜ್ಞಾನಿಕ ಬೆಲೆ ಘೋಷಣೆ ಮಾಡದೇ ಇರುವುದರಿಂದ ಕೃಷಿಗಾಗಿ ವೆಚ್ಚ ಮಾಡಿದ ಹಣ ರೈತರಿಗೆ ಸೇರುತ್ತಿಲ್ಲ. ಹಾಗಾಗಿ ಸಾಲ ಹೆಚ್ಚಾಗುತ್ತಿದೆ ಎಂದರು.ಕನಿಷ್ಟ ಬೆಂಬಲ ಬೆಲೆಗೆ ಆಗ್ರಹಿಸಿ ಕೇಂದ್ರ‌ ಸರ್ಕಾರದ ವಿರುದ್ಧ ನಿರಂತರ ಹೊರಾಟ ಮಾಡುತ್ತಿದ್ದರೂ ಗಮನ ಹರಿಸುತ್ತಿಲ್ಲ. ಮೆಕ್ಕೇಜೋಳಕ್ಕೆ ಕೇಂದ್ರ ಸರ್ಕಾರ 2225 ರೂ ಕೇಂದ್ರ ಘೋಷಣೆ ಮಾಡಿದೆ. ಆದರೆ ಮಾರುಕಟ್ಟೆಯಲ್ಲಿ 1600 ರೂಗೆ ಖರೀದ ಮಾಡಲಾಗುತ್ತಿದೆ. ಇದರಿಂದ ಪ್ರತಿ ಕ್ವಿಂಟಲ್ ಮೆಕ್ಕೇಜೋಳಕ್ಕೆ ರೈತರಿಗೆ 824 ರೂ ನಷ್ಟವಾಗುತ್ತಿದೆ. 50 ಕ್ವಿಂಟಲ್ ಮೆಕ್ಕೇಜೋಳ ಬೆಳೆದ ರೈತನಿಗೆ 48 ರಿಂದ 50 ಸಾವಿರ ರೂ ನಷ್ಡವಾಗುತ್ತಿದೆ. ಕೇಂದ್ರ ಸರ್ಕಾರ ಕಾಯ್ದೆ ಮಾಡಿದೆರೆ ರೈತನಿಗೆ ಲಾಭವಾಗುತ್ತದೆ ಎಂದರು.ದೆಹಲಿಯಲ್ಲಿ ರೈತರು ಹೋರಾಟ  ಮಾಡುತ್ತಿರುವ ಉದ್ದೇಶ  ಕರ್ನಾಟಕದ ರೈತರಿಗೆ ಅರ್ಥ ವಾಗುತ್ತಿಲ್ಲ. ಹಾಗಾಗಿ ಬರುವ ದಿನಗಳಲ್ಲಿ ಎಲ್ಲ ರೈತರು ಸಂಘಟಿತರಾಗಿ ಕಾಯಿದೆ ಜಾರಿಗೆ ಹೋರಾಟ ಮಾಡಬೇಕಿದೆ ಎಂದು ಮನವಿ ಮಾಡಿದರು.ಭದ್ರಾ ನಾಲಾ ಕೊನೆ ಭಾಗಕ್ಕೆ ನೀರು ಬರುತ್ತಿಲ್ಲ. ಇದಕ್ಕೆ ಇಲಾಖಾ ಇಂಜಿನಿಯರ್ ಗಳ ಬೇಜವಾಬ್ದಾರಿಯೇ ಕಾರಣ. ಹೊನ್ನಮರಡಿ, ಕಾರಿಗನೂರು ಕ್ರಾಸ್‌ಗಳ ಅಚ್ಚಕಟ್ಟು ಭಾಗಕ್ಕೆ ಸಮರ್ಪಕವಾಗಿ ನೀರು ಒದಗಿಸುವ ಕೆಲಸ ಮಾಡಬೇಕೆಂದು ಆಗ್ರಹಿಸಿದರು.